ಏನಿದು ಏರ್​ಬ್ಯಾಗ್​ ಹೆಲ್ಮೆಟ್​? ಭೀಕರ ಅಪಘಾತದಲ್ಲೂ ಬೈಕ್​ ಸವಾರರ ಪ್ರಾಣ ಉಳಿಸುವ ಈ ಸಂಜೀವಿನಿಯ ವಿಶೇಷತೆಗಳೇನು? | Airbag Helmet 
ವಿದೇಶ

ಏನಿದು ಏರ್​ಬ್ಯಾಗ್​ ಹೆಲ್ಮೆಟ್​? ಭೀಕರ ಅಪಘಾತದಲ್ಲೂ ಬೈಕ್​ ಸವಾರರ ಪ್ರಾಣ ಉಳಿಸುವ ಈ ಸಂಜೀವಿನಿಯ ವಿಶೇಷತೆಗಳೇನು? | Airbag Helmet

ಜಾಗತಿಕವಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅನೇಕರು ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಮುಖ್ಯವಾಗಿ, ಕೇವಲ ಭಾರತದಲ್ಲೇ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

Airbag Helmet: ಪ್ರಸ್ತುತ ಕಾರುಗಳಲ್ಲಿ ಮಾತ್ರ ನಮಗೆ ಈ ಏರ್​ಬ್ಯಾಗ್​ಗಳನ್ನು ಕಾಣಸಿಗುತ್ತವೆ.​ ರಸ್ತೆ ಅಥವಾ ಹೆದ್ದಾರಿಗಳಲ್ಲಿ ಸಂಭವಿಸುವ ಭೀಕರ ಅಪಘಾತಗಳಲ್ಲಿ ಚಾಲಕ ಮತ್ತು ಪ್ರಯಾಣಿಕರ ಜೀವವನ್ನು ಉಳಿಸುವ ಈ ಏರ್​ಬ್ಯಾಗ್​ಗಳು, ಒಂದು ರೀತಿ ಸಂಜೀವಿನಿಯಂತೆ ಕೆಲಸ ಮಾಡುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ಆದರೆ, ಇದು ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಮಂದಿಗೂ ಸಿಕ್ಕರೆ ಹೇಗಿರುತ್ತದೆ ಎಂಬ ಪ್ರಶ್ನೆ, ಕುತೂಹಲ ಇದೀಗ ಹಲವರಲ್ಲಿ ಮೂಡಿದೆ.

ಆಧುನಿಕ​ ಟೆಕ್ನಾಲಜಿ

ಜಾಗತಿಕವಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅನೇಕರು ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಮುಖ್ಯವಾಗಿ, ಕೇವಲ ಭಾರತದಲ್ಲೇ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ಪೈಕಿ, ಬೈಕ್​ ಸವಾರರೇ ಹೆಚ್ಚು ಬಲಿಯಾಗುತ್ತಿರುವುದು ತೀರ ಆತಂಕಕಾರಿ. ಕಾರಣ, ಹೆಲ್ಮೆಟ್​ ಇಲ್ಲದೆ ರಸ್ತೆಗಿಳಿಯುವುದು. ಕೆಲವರು ಹೆಲ್ಮೆಟ್​ ಧರಿಸಿದ್ದರೂ ಪ್ರಾಣ ಕಳೆದುಕೊಳ್ಳುತ್ತಾರೆ. ಏಕೆಂದರೆ, ಅವುಗಳು ಅಷ್ಟು ಭದ್ರವಾಗಿರುವುದಿಲ್ಲ. ಇದೇ ಕಾರಣಕ್ಕೋ, ಏನೋ ಇದೀಗ ಕಾರುಗಳಿಗೆ ನೀಡುವಂತೆಯೇ, ಹೆಲ್ಮೆಟ್​ಗೂ ಏರ್​ಬ್ಯಾಗ್​ ಅಳವಡಿಸಲು ಕೆಲವು ದೇಶಗಳು ದಾಪುಗಾಲಿಟ್ಟಿವೆ.

ಬೈಕ್​ ಸವಾರರ ತಲೆ ಜೋಪಾನ

ಚೀನಾ ಇತ್ತೀಚಿನ ತಂತ್ರಜ್ಞಾನದೊಂದಿಗೆ ಏರ್‌ಬ್ಯಾಗ್ ಹೆಲ್ಮೆಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕೆಲ ವರದಿಗಳು ತಿಳಿಸಿದ್ದು, ಇದರಲ್ಲಿ ಏರ್​ಬ್ಯಾಗ್​ ಟೆಕ್ನಾಲಜಿ ಅಳವಡಿಕೆ ನಿಜವಾದರೂ ಚೀನಾವೇ ಇದನ್ನು ತಯಾರಿಸಲು ಮುಂದಾಗಿದೆ ಎಂಬುದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ಅಪಘಾತ ಸಂಭವಿಸಿದಾಗ ಕಾರುಗಳಲ್ಲಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳುವಂತೆಯೇ, ಬೈಕ್ ಸವಾರ ಅಪಘಾತಕ್ಕೀಡಾದಾಗ ತಕ್ಷಣವೇ ರಕ್ಷಣೆ ಒದಗಿಸಲು ಈ ಹೆಲ್ಮೆಟ್ ಅನ್ನು ವಿಶೇಷವಾಗಿ ಡಿಸೈನ್​ ಮಾಡಲಾಗುತ್ತಿದೆ ಎನ್ನಲಾಗಿದೆ.

ಈ ಹೆಲ್ಮೆಟ್ ಅನ್ನು ಚೀನಾ ಮೂಲದ ಲನ್ಶಿ ಯೆಮಾ ಮೋಟಾರ್‌ಸೈಕಲ್ ಫಿಟ್ಟಿಂಗ್ಸ್ ಡಿಸೈನ್​ ಮಾಡುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇದಕ್ಕೆ ಪೇಟೆಂಟ್ ಪಡೆದಿರುವುದಾಗಿಯೂ ವಿವರಿಸಲಾಗಿದೆ. ಈ ಹೊಸ ಹೆಲ್ಮೆಟ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಪ್ರಸ್ತುತ ಪ್ರಯೋಗಗಳು ನಡೆಯುತ್ತಿದ್ದು, ಹಲವು ಹಂತಗಳಲ್ಲಿ ಟೆಸ್ಟ್​ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಹೆಲ್ಮೆಟ್​ ಏರ್​ಬ್ಯಾಗ್​ನ ಕೆಲಸ ಹೇಗೆ?

ಬೈಕ್ ಓಡಿಸುತ್ತಿರುವ ಸವಾರನು ಅಪಘಾತಕ್ಕೆ ಸಿಲುಕಿದಾಗ ಏರ್‌ಬ್ಯಾಗ್ ತಕ್ಷಣಕ್ಕೆ ತರೆದುಕೊಳ್ಳುತ್ತದೆ. ಇದು ಸವಾರನ ತಲೆ ಮತ್ತು ಕುತ್ತಿಗೆಯ ಸುತ್ತಲೂ ಕುಶನ್ ತರಹದ ರಕ್ಷಣೆಯನ್ನು ಸೃಷ್ಟಿಸುತ್ತದೆ. ಅಪಘಾತದ ಸಮಯದಲ್ಲಿ ತಲೆ ಮತ್ತು ಕುತ್ತಿಗೆಗೆ ಬಲವಾದ ಹೊಡೆತಗಳು ಬೀಳುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ, ಅದರ ತೀವ್ರತೆಯನ್ನು ಕಡಿಮೆ ಮಾಡುವುದು ಈ ತಂತ್ರಜ್ಞಾನದ ಮುಖ್ಯ ಗುರಿಯಾಗಿದೆ. ಎಮರ್ಜೆನ್ಸಿ ಸಮಯಗಳನ್ನು ಪತ್ತೆಹಚ್ಚಲು ವಿಶೇಷ ಅಲ್ಗಾರಿದಮ್‌ಗಳನ್ನು ಬಳಸಲಾಗುತ್ತಿದ್ದು, ಸಣ್ಣ-ಪುಟ್ಟ ಅಡಚಣೆಗೆ ತೆರೆದುಕೊಳ್ಳುವುದಿಲ್ಲ ಎನ್ನಲಾಗಿದೆ.

ಅಷ್ಟಕ್ಕೂ ಈ ಹೆಲ್ಮೆಟ್ ಯಾವಾಗ ಮಾರುಕಟ್ಟೆಯನ್ನು ಪ್ರವೇಶಿಸಲಿದೆ, ಇದರ ಆರಂಭಿಕ ಬೆಲೆ ಎಷ್ಟಿರಬಹುದು, ಭಾರತೀಯ ಹವಾಮಾನ ಪರಿಸ್ಥಿತಿಗಳಲ್ಲಿ ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸದ್ಯದ ಮಟ್ಟಿಗೆ ಹೆಚ್ಚಿನ ಡಿಸೈನ್​ ಹಾಗೂ ಟೆಸ್ಟಿಂಗ್​ ಹಂತದಲ್ಲಿದ್ದು, ಯಶಸ್ವಿಯಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತೆಂದರೆ ಖಂಡಿತ ಬೈಕ್ ಸವಾರರಿಗೆ ಇದೊಂದು ಹೊಸ ಬದಲಾವಣೆಯನ್ನೇ ತರಲಿದೆ,(ಏಜೆನ್ಸೀಸ್).