Shapoor Zadran Death 
ವಿದೇಶ

ಅಫ್ಘಾನ್ ವೇಗಿ ಶಪೂರ್ ಜದ್ರಾನ್ ಜೀವ ಕಸಿದ HLH!; ಜ್ವರವೆಂದು ನಿರ್ಲಕ್ಷಿಸಿದರೆ ಪ್ರಾಣಕ್ಕೇ ಕಂಟಕವಾಗುತ್ತಾ ಈ ಕಾಯಿಲೆ..? ಇಲ್ಲಿದೆ ಶಾಕಿಂಗ್ ಸತ್ಯ! | Shapoor Zadran Death

Shapoor Zadran Death: ಅಫ್ಘಾನಿಸ್ತಾನ್ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶಪೂರ್ ಜದ್ರಾನ್ (38) ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (Hemophagocytic Lymphohistiocytosis - HLH) ಎಂಬ ಜೀವಕ್ಕೆ ಅಪಾಯಕಾರಿ ಹಾಗೂ ಅಪರೂಪದ ರೋಗದಿಂದಾಗಿ ನಿಧನರಾಗಿದ್ದಾರೆ.
ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಮಾಜಿ ವೇಗಿ ಶಪೂರ್ ಜದ್ರಾನ್ ಅವರ ಅಗಲಿಕೆಯಿಂದ ಕಂಬನಿ ಮಿಡಿಯುತ್ತಿದ್ದೇವೆ. ಅವರು ಅಫ್ಘಾನ್ ಕ್ರಿಕೆಟ್‌ನ ಅಡಿಪಾಯ ಹಾಕಿದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರ ಸಮರ್ಪಣೆ, ಶ್ರಮ ಹಾಗೂ ಬದ್ಧತೆಯು ದೇಶದಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಶೋಕ ವ್ಯಕ್ತಪಡಿಸಿದೆ.
ಏನಿದು ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್..?
ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ ಎಂಬುದು ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಅತ್ಯಂತ ಅಪರೂಪದ ಕಾಯಿಲೆಯಾಗಿದೆ. ಈ ಸ್ಥಿತಿಯಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯು ಅತಿಯಾಗಿ ಉತ್ತೇಜಿತಗೊಂಡು, ಸೋಂಕುಗಳಿಂದ ದೇಹವನ್ನು ರಕ್ಷಿಸುವ ಬದಲು ಸ್ವತಃ ದೇಹದ ಆರೋಗ್ಯಕರ ಜೀವಕೋಶಗಳು ಮತ್ತು ಅಂಗಾಂಗಗಳ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸುತ್ತದೆ. ಇದು ಲಿವರ್​, ಗುಲ್ಮ (Spleen), ಮೂಳೆ ಮಜ್ಜೆ ಮೆದುಳು ಹಾಗೂ ದೇಹದ ಇತರ ಭಾಗಗಳಲ್ಲಿ ತೀವ್ರ ಉರಿಯೂತವನ್ನು ಉಂಟುಮಾಡುತ್ತದೆ.
ಈ ಕಾಯಿಲೆಯು ಮಕ್ಕಳು ಮತ್ತು ಹಿರಿಯರು ಇಬ್ಬರಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಆರಂಭಿಕ ಹಂತದಲ್ಲೇ ಇದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಅತ್ಯಗತ್ಯ, ಇಲ್ಲದಿದ್ದರೆ ಇದು ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ.

ಈ ಕಾಯಿಲೆಗೆ ಕಾರಣಗಳೇನು?

ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ ಕಾಯಿಲೆಯನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
ಮೊದಲನೇ ವಿಧ: (ವಂಶಪಾರಂಪರ್ಯ): ಇದು ಪೋಷಕರಿಂದ ಮಗುವಿಗೆ ಅನುವಂಶಿಕವಾಗಿ ಬರುವ ಜೀನ್ ವೈಪರೀತ್ಯಗಳಿಂದ ಉಂಟಾಗುತ್ತದೆ. ಇದು ಹೆಚ್ಚಾಗಿ ಬಾಲ್ಯದಲ್ಲೇ ಕಾಣಿಸಿಕೊಳ್ಳುತ್ತದೆ.
ಎರಡನೇ ವಿಧ: ಇದು ದೇಹದಲ್ಲಿ ಉಂಟಾಗುವ ಇತರ ವೈದ್ಯಕೀಯ ವ್ಯತ್ಯಯಗಳಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದಾಗ ಉಂಟಾಗುತ್ತದೆ.

ಪ್ರಮುಖ ಕಾರಣಗಳು

  • ಎಪ್ಸ್ಟೀನ್-ಬಾರ್ ವೈರಸ್ (EBV) ಅಥವಾ ಸೈಟೋಮೆಗಾಲೋವೈರಸ್ (CMV) ನಂತಹ ತೀವ್ರ ವೈರಲ್ ಸೋಂಕುಗಳು.
  • ಬ್ಯಾಕ್ಟೀರಿಯಾ, ಶಿಲೀಂಧ್ರ (Fungal) ಅಥವಾ ಪರಾವಲಂಬಿ ಸೋಂಕುಗಳು.
  • ಲೂಪಸ್ ಅಥವಾ ರುಮಟಾಯ್ಡ್ ಆರ್ಥರೈಟಿಸ್​​ನಂತಹ ಆಟೋಇಮ್ಯೂನ್ ಕಾಯಿಲೆಗಳು.
  • ಲಿಂಫೋಮಾ ಅಥವಾ ಲ್ಯುಕೇಮಿಯಾದಂತಹ ರಕ್ತದ ಕ್ಯಾನ್ಸರ್‌ಗಳು.
  • ಔಷಧಗಳು ಹಾಗೂ ಇತರ ಕಾಯಿಲೆಗಳಿಂದಾಗಿ ರೋಗನಿರೋಧಕ ಶಕ್ತಿ ಕ್ಷೀಣಿಸುವುದು.

ಸಾಮಾನ್ಯ ರೋಗಲಕ್ಷಣಗಳು

ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ ರೋಗಲಕ್ಷಣಗಳು ಇತರ ಸೋಂಕುಗಳಂತೆಯೇ ಇರುವುದರಿಂದ ಆರಂಭದಲ್ಲಿ ಇದನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ.

ಪ್ರಮುಖ ರೋಗಲಕ್ಷಣಗಳು

  • ನಿರಂತರವಾಗಿ ಬರುವ ತೀವ್ರ ಜ್ವರ
  • ತೀವ್ರ ಆಯಾಸ ಮತ್ತು ನಿಶ್ಯಕ್ತಿ
  • ಯಕೃತ್ತು ಹಾಗೂ ಗುಲ್ಮಗಳ ಗಾತ್ರ ಹಿಗ್ಗುವುದು
  • ಶೋಧನಾ ಗ್ರಂಥಿಗಳ (Lymph nodes) ಊತ
  • ಚರ್ಮದ ಮೇಲೆ ಕೆಂಪು ಕಡಿತ ಅಥವಾ ದದ್ದುಗಳು
  • ರಕ್ತಹೀನತೆಯಿಂದಾಗಿ ಚರ್ಮ ಕಾಯಿಲೆ ಅಥವಾ ಬಿಳಿಚಿಕೊಳ್ಳುವುದು
  • ಸುಲಭವಾಗಿ ಗಾಯಗಳು ಹಾಗೂ ರಕ್ತಸ್ರಾವವಾಗುವುದು
  • ಕಣ್ಣು ಅಥವಾ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು (ಕಾಮಾಲೆ)
  • ತೀವ್ರತರವಾದ ಸಂದರ್ಭಗಳಲ್ಲಿ ಗೊಂದಲ, ಮೂರ್ಛೆ ರೋಗ ಅಥವಾ ನರಸಂಬಂಧಿ ಸಮಸ್ಯೆಗಳು

ಈ ರೋಗವನ್ನು ಪತ್ತೆಹಚ್ಚುವುದು ಹೇಗೆ..?

ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ ರೋಗವನ್ನು ಪತ್ತೆಹಚ್ಚಲು ಯಾವುದೇ ಒಂದೇ ನಿರ್ದಿಷ್ಟ ಪರೀಕ್ಷೆಯಿಲ್ಲ. ವೈದ್ಯರು ರೋಗಲಕ್ಷಣಗಳು, ದೈಹಿಕ ತಪಾಸಣೆ ಹಾಗೂ ಹಲವು ಪ್ರಯೋಗಾಲಯ ಪರೀಕ್ಷೆಗಳನ್ನು ಆಧರಿಸಿ ಇದನ್ನು ದೃಢಪಡಿಸಲಾಗುತ್ತದೆ.
  • ರಕ್ತದ ಜೀವಕೋಶಗಳ ಸಂಖ್ಯೆಯನ್ನು ತಿಳಿಯಲು ರಕ್ತ ಪರೀಕ್ಷೆ (CBC)
  • ರಕ್ತದಲ್ಲಿ ಫೆರಿಟಿನ್ ಮಟ್ಟ ಪರೀಕ್ಷೆ (HLH ಇದ್ದಾಗ ಫೆರಿಟಿನ್ ಮಟ್ಟ ಅತ್ಯಂತ ಹೆಚ್ಚಿರುತ್ತದೆ)
  • ಲಿವರ್​ ಕಾರ್ಯವೈಖರಿ ಪರೀಕ್ಷೆ
  • ಟ್ರೈಗ್ಲಿಸರೈಡ್ ಹಾಗೂ ಫೈಬ್ರಿನೋಜೆನ್ ಪರೀಕ್ಷೆಗಳು
  • ಮೂಳೆ ಮಜ್ಜೆ ಪರೀಕ್ಷೆ
  • ಜೆನೆಟಿಕ್ ಪರೀಕ್ಷೆ (ವಂಶಪಾರಂಪರ್ಯ ಶಂಕೆ ಇದ್ದರೆ)
  • ಆಂತರಿಕ ಅಂಗಾಂಗಗಳ ಊತ ತಿಳಿಯಲು ಅಲ್ಟ್ರಾಸೌಂಡ್ ಅಥವಾ ಸಿಟಿ ಸ್ಕ್ಯಾನ್

ಚಿಕಿತ್ಸಾ ವಿಧಾನಗಳು ಹೀಗಿವೆ!...

ಅತಿಯಾಗಿ ಸಕ್ರಿಯಗೊಂಡಿರುವ ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುವುದು ಮತ್ತು ಮೂಲ ಕಾರಣವನ್ನು ಸರಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
  • ಉರಿಯೂತವನ್ನು ಕಡಿಮೆ ಮಾಡಲು ಕಾರ್ಟಿಕೊಸ್ಟೆರಾಯ್ಡ್ಸ್
  • ರೋಗನಿರೋಧಕ ವ್ಯವಸ್ಥೆಯ ಅತಿಯಾದ ಚಟುವಟಿಕೆಯನ್ನು ತಡೆಯಲು ಕಿಮೊಥೆರಪಿ ಔಷಧಗಳು
  • ಇಮ್ಯುನೊಥೆರಪಿ ಚಿಕಿತ್ಸೆ
  • ಸೋಂಕುಗಳನ್ನು ತಡೆಯಲು ಆಂಟಿಬಯೋಟಿಕ್ಸ್, ಆಂಟಿವೈರಲ್ ಅಥವಾ ಆಂಟಿಫಂಗಲ್ ಔಷಧಗಳು
  • ರಕ್ತದ ಜೀವಕೋಶಗಳು ಕಡಿಮೆಯಾದಾಗ ರಕ್ತ ಮರುಪೂರಣ
  • ಅನುವಂಶಿಕ ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್​ಗೆ ಅಥವಾ ಚಿಕಿತ್ಸೆಗೆ ಸ್ಪಂದಿಸದ ಸ್ಥಿತಿಯಲ್ಲಿ ಸ್ಟೆಮ್ ಸೆಲ್ (ಮೂಳೆ ಮಜ್ಜೆ) ಕಸಿ

ಇದನ್ನು ತಡೆಗಟ್ಟಬಹುದೇ...?

ವಂಶಪಾರಂಪರ್ಯವಾಗಿ ಬರುವ ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ ಜೀನ್‌ಗಳ ವೈಪರೀತ್ಯದಿಂದ ಬರುವುದರಿಂದ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಕುಟುಂಬದಲ್ಲಿ ಈ ಇತಿಹಾಸವಿದ್ದರೆ ಜೆನೆಟಿಕ್ ಕೌನ್ಸಿಲಿಂಗ್ ಸಹಾಯ ಮಾಡುತ್ತದೆ.
ಇನ್ನು ಸೆಕೆಂಡರಿ ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ ಅನ್ನು ಕೂಡ ಸಂಪೂರ್ಣ ತಡೆಯಲು ಸಾಧ್ಯವಿಲ್ಲದಿದ್ದರೂ, ದೇಹದಲ್ಲಿ ಬರುವ ಸೋಂಕುಗಳು, ಆಟೋಇಮ್ಯೂನ್ ಕಾಯಿಲೆಗಳು ಮತ್ತು ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ಈ ಅಪಾಯಕಾರಿ ಸ್ಥಿತಿ ತಲುಪುವುದನ್ನು ತಪ್ಪಿಸಬಹುದು(ಏಜೆನ್ಸೀಸ್​​).