- ಸೌತ್ ಯೆಮೆನ್‌ನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಎಸ್‌ಟಿಸಿ ಪ್ರಯತ್ನ
- ಎಸ್‌ಟಿಸಿ ಪ್ರತ್ಯೇಕತಾವಾದಿಗಳ ವಿರುದ್ಧ ಸೌದಿ ಅರೇಬಿಯಾ ಗರಂ
- ಎಸ್‌ಟಿಸಿ ಪ್ರತ್ಯೇಕತಾವಾದಿಗಳಿಗೆ ಯುಎಇ ಬೆಂಬಲ
ದುಬೈ: ಯುದ್ಧಪೀಡಿತ ಯೆಮೆನ್ ದೇಶದಲ್ಲಿ, ಆರ್ಥಿಕವಾಗಿ ಬಲಿಷ್ಠವಾಗಿರುವ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಷ್ಟ್ರಗಳು ಸದ್ಯ ಜಿದ್ದಾಜಿದ್ದಿಗೆ ಬಿದ್ದಿವೆ. ಕೆಲವು ವರ್ಷಗಳ ಹಿಂದೆ ಇರಾನ್ ಬೆಂಬಲಿತ ಹೌತಿಗಳ ವಿರುದ್ಧ ಒಟ್ಟಾಗಿ ಹೋರಾಡಿದ್ದ ಈ ದೇಶಗಳು, ಈಗ, ಯೆಮೆನ್‌ನಲ್ಲಿ ದೊಡ್ಡ ಸಂಘರ್ಷದಲ್ಲಿ ತೊಡಗಿರುವುದು ಸದ್ಯ ಅಚ್ಚರಿಗೆ ಕಾರಣವಾಗಿದೆ.
ಯೆಮೆನ್‌ನಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ. ಇದು ದಶಕಗಳಲ್ಲಿ ಹಿಂದೆಂದೂ ಕಂಡುಬಂದಿರದ ವಿವಾದ ಎಂದೇ ಹೇಳಬಹುದು. ದಕ್ಷಿಣ ಪರಿವರ್ತನಾ ಮಂಡಳಿ (ಎಸ್‌ಟಿಸಿ) ಪ್ರತ್ಯೇಕತಾವಾದಿಗಳನ್ನು ಯುಎಇ ಬೆಂಬಲಿಸುತ್ತಿದ್ದರೆ, ಸೌದಿ ಅರೇಬಿಯಾ ಯೆಮೆನ್‌ನಲ್ಲಿ ರಾಷ್ಟ್ರೀಯ ಗುರಾಣಿ ಪಡೆಗಳ ಬೆಂಬಲಕ್ಕೆ ನಿಂತಿರುವುದು ಮತ್ತೊಂದೆಡೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸರ್ಕಾರಕ್ಕೆ ಸೇರಿದ ದಕ್ಷಿಣ ಯೆಮೆನ್ ಪ್ರದೇಶಗಳನ್ನು ಎಸ್‌ಟಿಸಿ ಡಿಸೆಂಬರ್‌ನಲ್ಲಿ ಆಕ್ರಮಿಸಿಕೊಂಡಿದ್ದರಿಂದ ಸೌದಿ ಅರೇಬಿಯಾ ತೀವ್ರ ಕಿಡಿಕಾರಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸರ್ಕಾರವನ್ನು ಬೆಂಬಲಿಸುವ ಸೌದಿ ಅರೇಬಿಯಾ, ಎಸ್‌ಟಿಸಿಯ ಕ್ರಮವನ್ನು ಬೆದರಿಕೆಯಾಗಿ ಪರಿಗಣಿಸಿದ್ದೇ ಈ ಜಟಾಪಟಿಗೆ ಮೂಲ ಕಾರಣ.
ಸೌದಿ-ಯುಎಇ ಮಧ್ಯೆ ಉದ್ವಿಗ್ನ ದ್ವಿಗುಣ
ಎಸ್‌ಟಿಸಿ ಪ್ರತ್ಯೇಕತಾವಾದಿಗಳು ಡಿಸೆಂಬರ್‌ನಲ್ಲಿ ಯೆಮೆನ್ ಸರ್ಕಾರಿ ನಿಯಂತ್ರಿತ ಪ್ರದೇಶಗಳಾದ ಹದ್ರಾಮೌತ್ ಮತ್ತು ಮಹಾರಾವನ್ನು ಪ್ರವೇಶಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಷ್ಟ್ರೀಯ ಗುರಾಣಿ ಪಡೆಗಳು ತಿರುಗಿಬಿದ್ದಿತು. ಈ ನಡೆಯನ್ನು ಸೌದಿ ಖಂಡಿಸಿದರೆ, ಅತ್ತ ಯುಎಇ ಎಸ್‌ಟಿಸಿಗೆ ಶಸ್ತ್ರಾಸ್ತ್ರಗಳನ್ನು ರವಾನಿಸಲು ಪ್ರಯತ್ನಿಸಿತು. ಯೆಮೆನ್ ಬಂದರು ನಗರವಾದ ಮುಕಲ್ಲಾದಲ್ಲಿ ದಾಳಿಗಳು ಸಂಭವಿಸಿವೆ. ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗು ಬಂದರಿಗೆ ಬಂದಿಳಿದ ಬೆನ್ನಲ್ಲೇ ಸೌದಿ ಅರೇಬಿಯಾ ಇತ್ತೀಚೆಗೆ ಮುಕಲ್ಲಾ ಮೇಲೆ ದಾಳಿ ನಡೆಸಿತು. ಇದು ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಉದ್ವಿಗ್ನತೆಯನ್ನು ದ್ವಿಗುಣಗೊಳಿಸಿತು.
ನಿನ್ನೆ (ಜ.02), ಸೌದಿ ಅರೇಬಿಯಾ ಎಸ್‌ಟಿಸಿ ಪ್ರತ್ಯೇಕತಾವಾದಿಗಳ ವಿರುದ್ಧ ವೈಮಾನಿಕ ದಾಳಿಗಳನ್ನು ಕೈಗೊಂಡಿತು. ದಕ್ಷಿಣ ಯೆಮೆನ್‌ನಲ್ಲಿರುವ ಪ್ರತ್ಯೇಕತಾವಾದಿಗಳನ್ನು ಅವರ ನೆಲೆಗಳಿಂದ ತೆರವುಗೊಳಿಸುವುದು ಸೌದಿ ಅರೇಬಿಯಾದ ಮುಖ್ಯ ಗುರಿಯಾಗಿದೆ. ಈ ಕಾರಣದಿಂದಲೇ ಸೌದಿ ಇತ್ತೀಚೆಗೆ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂಬುದು ಗಮನಾರ್ಹ.
ಎಸ್‌ಟಿಸಿಯ ಗುರಿ ಏನು?
ಎಸ್‌ಟಿಸಿಯ ಗುರಿ ಸ್ವತಂತ್ರ ದಕ್ಷಿಣ ಯೆಮೆನ್ ಸ್ಥಾಪಿಸುವುದು. 1990ರ ಪೂರ್ವದ ದಕ್ಷಿಣ ಯೆಮೆನ್ ಅನ್ನು ಮರು ಹುಟ್ಟಾಕುವ ಗುರಿಯೊಂದಿಗೆ ಎಸ್‌ಟಿಸಿಯನ್ನು ರಚಿಸಲಾಗಿದೆ. ಈ ಹಿನ್ನೆಲೆ ದಕ್ಷಿಣ ಯೆಮೆನ್ ಪ್ರದೇಶಗಳ ಮೇಲೆ ರಾಜಕೀಯ ಮತ್ತು ಮಿಲಿಟರಿ ಪ್ರಾಬಲ್ಯವನ್ನು ಸಾಧಿಸಲು ಪ್ರಯತ್ನಗಳು ಜೋರಾಗಿವೆ.
ಯೆಮೆನ್ನಲ್ಲಿನ ಪ್ರದೇಶಗಳನ್ನು ತಮ್ಮ ಹತೋಟಿಗೆ ತರಲು ಕಾರ್ಯತಂತ್ರದ ಬಲಕ್ಕೆ ದಾಪುಗಾಲಿಟ್ಟಿರುವ ಎಸ್‌ಟಿಸಿಗೆ ಯುಎಇ ನೀಡುತ್ತಿರುವ ಬೆಂಬಲ ಸೌದಿ ಅರೇಬಿಯಾವನ್ನು ತೀವ್ರ ಕೆರಳಿಸುತ್ತಿದೆ. ತಾತ್ಕಾಲಿಕ ವಿರಾಮಕ್ಕೆ ಅವಕಾಶವಿದ್ದರೂ, ಈಗಿರುವ ಭಿನ್ನಾಭಿಪ್ರಾಯಗಳು ಶೀಘ್ರದಲ್ಲೇ ಸಂಪೂರ್ಣವಾಗಿ ಬಗೆಹರಿಯುವ ಲಕ್ಷಣಗಳು ಬಹುತೇಕ ಅನುಮಾನ,(ಏಜೆನ್ಸೀಸ್).