ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​  
ವಿದೇಶ

ಪುತಿನ್ ಎಲ್ಲೇ ಹೋಗಲಿ ಅವರ​ ಮಲವನ್ನು ವಾಪಸ್​ ರಷ್ಯಾಗೆ ತರ್ತಾರೆ! ಏನಿದು ಪೂಪ್​​ ಸೂಟ್​ಕೇಸ್​? ಇಲ್ಲಿದೆ ಅಚ್ಚರಿ ಮಾಹಿತಿ... Poop Suitcase

ಪ್ರಮುಖ ಮುಖ್ಯಾಂಶಗಳು

  • ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಎರಡು ದಿನಗಳ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ್ದಾರೆ
  • ಮೋದಿ ಅವರು ಶಿಷ್ಟಾಚಾರವನ್ನು ಬದಿಗಿಟ್ಟು ಸ್ವತಃ ತಾವೇ ಪುತಿನ್​ ಅವರನ್ನು ಬರಮಾಡಿಕೊಂಡರು
  • ಪುತಿನ್ ಅವರು​ ಭಾರತದಲ್ಲಿರುವುದರಿಂದ ಭಾರಿ ಭದ್ರತೆಯನ್ನು ಸಹ ಹೆಚ್ಚಿಸಲಾಗಿದೆ
  • ಇದೀಗ ಪುತಿನ್​ ಅವರ 'ಪೂಪ್ ಸೂಟ್‌ಕೇಸ್' ಬಗ್ಗೆ ಭಾರಿ ಚರ್ಚೆಯಾಗುತ್ತಿದೆ
Poop Suitcase : ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಅವರು ಎರಡು ದಿನಗಳ ಪ್ರವಾಸಕ್ಕೆ ನಿನ್ನೆ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಯೂಕ್ರೇನ್​ ವಿರುದ್ಧ ಯುದ್ಧ ಶುರುವಾದ ಬಳಿಕ ಇದೇ ಮೊದಲ ಬಾರಿ ಪುತಿನ್​, ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಪುತಿನ್​ ಅವರು ಒಳ್ಳೆಯ ಸ್ನೇಹಿತರು ಅನ್ನೋದು ಇಡೀ ಜಗತ್ತಿಗೆ ತಿಳಿದಿದೆ. ಹೀಗಾಗಿ ನಿನ್ನೆ ಮೋದಿ ಅವರು ಶಿಷ್ಟಾಚಾರವನ್ನು ಬದಿಗಿಟ್ಟು ಸ್ವತಃ ತಾವೇ ವಿಮಾನ ನಿಲ್ದಾಣಕ್ಕೆ ತೆರಳಿ ಪುತಿನ್​ ಅವರನ್ನು ಬರಮಾಡಿಕೊಂಡರು. ಮೋದಿ ಮತ್ತು ಪುತಿನ್​ ಇಬ್ಬರೂ ಜಾಗತಿಕ ನಾಯಕರಾಗಿದ್ದು, ಉಭಯ ದೇಶಗಳ ನಡುವೆ ಮಹತ್ವದ ಮಾತುಕತೆ ನಡೆಯಲಿದೆ. ಸುಂಕ ಸಮರದಿಂದ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧ ಹಳಸಿರುವುದು ಎಲ್ಲರಿಗೂ ಗೊತ್ತಿದೆ. ಈ ಸಮಯದಲ್ಲಿ ಪುತಿನ್​ ಅವರ ಭಾರತ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.
ಇನ್ನು ಪುತಿನ್ ಅವರು​ ಭಾರತದಲ್ಲಿರುವುದರಿಂದ ಭಾರಿ ಭದ್ರತೆಯನ್ನು ಸಹ ಹೆಚ್ಚಿಸಲಾಗಿದೆ. ಪುತಿನ್​ ಅವರ ಭದ್ರತಾ ವಿವರಗಳನ್ನು ಫೆಡರಲ್ ಪ್ರೊಟೆಕ್ಟಿವ್ ಸರ್ವೀಸಸ್ (ಎಫ್‌ಎಸ್‌ಒ) ಸೂಕ್ಷ್ಮವಾಗಿ ಗಮನಿಸುತ್ತಿದೆ. ಸ್ನಾನಗೃಹದ ಪ್ರೋಟೋಕಾಲ್‌ಗಳಿಂದ ಹಿಡಿದು ಆಹಾರ ಪೂರೈಕೆವರೆಗೆ, ಪುತಿನ್​ ಅವರು ನಿರಂತರವಾಗಿ ಭದ್ರತಾ ಪಡೆಯ ಕಣ್ಗಾವಲಿನಲ್ಲಿದ್ದಾರೆ.
ಇನ್ನು ಪುತಿನ್​ ಅವರು ಇಷ್ಟೊಂದು ಕಟ್ಟನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಅವರ ಅನಾರೋಗ್ಯದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕ್ಯಾನ್ಸರ್‌ನಿಂದ ಪಾರ್ಕಿನ್ಸನ್‌ ಕಾಯಿಲೆವರೆಗೆ ಅವರ ಆರೋಗ್ಯದ ಸುತ್ತ ಎದ್ದಿರುವ ಹಲವಾರು ವದಂತಿಗಳಿಗೆ ಈ ಪೂಪ್​ ಸೂಟ್​ಕೇಸ್​ ಪುಷ್ಠಿ ನೀಡುತ್ತಿದೆ. ಈ ಹಿಂದೆಯೂ ಪುತಿನ್​ ಅವರ ಅನಾರೋಗ್ಯ ವಿಚಾರ ಭಾರಿ ಚರ್ಚೆಯಾಗಿತ್ತು. ಪುತಿನ್​ ಅವರು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಊಹಾಪೋಹಗಳಿವೆ. ಇದರ ನಡುವೆ, 'ಪೂಪ್ ಸೂಟ್‌ಕೇಸ್' ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಅನೇಕ ರಾಷ್ಟ್ರೀಯ ಮಾಧ್ಯಮಗಳು ಈ ಪೂಪ್​ ಸೂಟ್​ಕೇಸ್​ ಬಗ್ಗೆ ವಿವರವಾಗಿ ಬರೆದಿವೆ. ಪುತಿನ್​ ಅವರು ಯಾವುದೇ ಅಂತಾರಾಷ್ಟ್ರೀಯ ಪ್ರವಾಸಕ್ಕೆ ತೆರಳಲಿ ಪೂಪ್​ ಸೂಟ್​ಕೇಸ್​ ಅನ್ನು ಸಹ ಜೊತೆಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.

ಏನಿದು ಪೂಪ್​ ಸೂಟ್​ಕೇಸ್​?

ಈ ವರ್ಷದ ಆರಂಭದಲ್ಲಿ ವ್ಲಾಡಿಮಿರ್ ಪುಟಿನ್ ಅವರು ಅಲಾಸ್ಕಾ ಶೃಂಗಸಭೆಗೆ ಭೇಟಿ ನೀಡಿದ ಬಳಿಕ ಈ 'ಪೂಪ್ ಸೂಟ್‌ಕೇಸ್' ಎಂಬ ಪದವು ಮುನ್ನೆಲೆಗೆ ಬಂದಿದೆ. ಪುತಿನ್​ ಅವರ ಮಲ ತ್ಯಾಜ್ಯವನ್ನು ಸಂಗ್ರಹಿಸಲು ಒಂದು ಸೂಟ್‌ಕೇಸ್ ಅನ್ನೇ ಮೀಸಲಿಡಲಾಗಿದೆ. ಪುತಿನ್​ ಅವರ ಭದ್ರತಾ ಅಧಿಕಾರಿಗಳು ಅದನ್ನು ಹೊತ್ತುಕೊಂಡು ಹೋಗುತ್ತಿರುವ ಅನೇಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ನಿಮಗೆ ಗೊತ್ತು ಮಲದಿಂದ ಯಾವುದೇ ಅನಾರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚಬಹುದು. ಹೀಗಾಗಿ ಯಾವುದೇ ವಿದೇಶಿ ಸಂಸ್ಥೆಗಳು ಅಥವಾ ಶತ್ರು ರಾಷ್ಟ್ರಗಳು ಅವರ ಮಲವನ್ನು ಪರೀಕ್ಷಿಸಿ, ಅವರಿಗಿರುವ ವೈದ್ಯಕೀಯ ಸ್ಥಿತಿಯನ್ನು ತಿಳಿದುಕೊಳ್ಳುವುದನ್ನು ತಪ್ಪಿಸಲು ಈ ಸೂಟ್​ಕೇಸ್​ ಅನ್ನು ಬಳಸಲಾಗುತ್ತಿದೆ. ಸೂಟ್​ಕೇಸ್​ನಲ್ಲಿ ಪುತಿನ್​ ಅವರ ಮಲವನ್ನು ತುಂಬಿ ರಷ್ಯಾಗೆ ಕಳುಹಿಸಲಾಗುತ್ತದೆ.
ಈ ಹಿಂದೆ ಫ್ರಾನ್ಸ್, ವಿಯೆಟ್ನಾಂ ಮತ್ತು ಸೌದಿ ಅರೇಬಿಯಾಕ್ಕೆ ಪುತಿನ್​ ಅವರು ಭೇಟಿ ನೀಡಿದ್ದಾಗ ಅವರ ಭದ್ರತಾ ವಿವರಗಳ ಪ್ರಮುಖ ಮುಖ್ಯಾಂಶಗಳಲ್ಲಿ ಈ ಪೂಪ್​ ಸೂಟ್​ಕೇಸ್​ ಕೂಡ ಒಂದಾಗಿತ್ತು ಎಂದು ವರದಿಯಾಗಿದೆ.

ಪೂಪ್​ಕೇಸ್​ ಹೇಗೆ ಕೆಲಸ ಮಾಡುತ್ತೆ?

ಅಂದಹಾಗೆ, ಮಾನವನ ಮಲವನ್ನು ಬಹಳ ಹಿಂದಿನಿಂದಲೂ ಗುಪ್ತಚರ ಇಲಾಖೆಯ ಪ್ರಮುಖ ಸುಳಿವು ಎಂದೇ ಪರಿಗಣಿಸಲಾಗಿದೆ. ಏಕೆಂದರೆ, ಮಲದ ವಿಶ್ಲೇಷಣೆಯು ಶತ್ರುಗಳಿಗೆ ಪ್ರಮುಖ ಮಾಹಿತಿಯನ್ನು ನೀಡುತ್ತದೆ. ಇದರಿಂದ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. 1949 ರಲ್ಲಿ, ಜೋಸೆಫ್ ಸ್ಟಾಲಿನ್ ಎಂಬುವರು ಮಾವೋ ಝೆಡಾಂಗ್ ಅವರ ಮಲದ ಮಾದರಿಯನ್ನು ಸಂಗ್ರಹಿಸಲು ಆದೇಶಿಸಿದ್ದರು ಎಂದು ಹೇಳಲಾಗುತ್ತದೆ. ಅದೇ ರೀತಿ ಶೀತಲ ಸಮರದ ಸಮಯದಲ್ಲಿ ಬ್ರಿಟಿಷ್ ಗುಪ್ತಚರ ಇಲಾಖೆಯು ಸೋವಿಯತ್ ಸೈನಿಕರ ಟಾಯ್ಲೆಟ್ ಪೇಪರ್ ಅನ್ನು ವಿಶ್ಲೇಷಿಸಿದ್ದಾಗಿ ಹೇಳಿಕೊಂಡಿದೆ. ಹೀಗೆ, ಮಲದ ವಿಶ್ಲೇಷಣೆ ಮೂಲಕ ಶತ್ರುಗಳ ದುರ್ಬಲತೆಯನ್ನು ತಿಳಿದುಕೊಳ್ಳಬಹುದಾಗಿದೆ.
ಅಂದಹಾಗೆ, ಈ ಒಂದು ಅಭ್ಯಾಸದ ಬಗ್ಗೆ ಫ್ರೆಂಚ್ ನಿಯತಕಾಲಿಕೆ ಪ್ಯಾರಿಸ್ ಮ್ಯಾಚ್‌ನಲ್ಲಿ ಪತ್ರಕರ್ತರಾಗಿದ್ದ ರೆಗಿಸ್ ಗೆಂಟೆ ಮತ್ತು ಮಿಖಾಯಿಲ್ ರೂಬಿನ್ ಎಂಬುವರು ಮೊದಲು ವಿವರಿಸಿದರು. ಇದಾದ ನಂತರ 2022 ರಲ್ಲಿ ಇಂಡಿಪೆಂಡೆಂಟ್​ಮಾಧ್ಯಮದಲ್ಲಿ ವರದಿಯಾಗಿತ್ತು. ವಿದೇಶಿ ಗುಪ್ತಚರ ಸೇವೆಗಳು ಪುತಿನ್​ ಅವರ ಆರೋಗ್ಯದ ಬಗ್ಗೆ ಮಾಹಿತಿಗಾಗಿ ಅವರ ಮಲವನ್ನು ವಿಶ್ಲೇಷಿಸುವುದನ್ನು ತಡೆಯುವ ಉದ್ದೇಶವನ್ನು ಪೂಪ್​ಕೇಸ್​ ಹೊಂದಿದೆ ಎಂದು ವರದಿ ಮಾಡಿದೆ. ಪುತಿನ್​ ಅವರ ಭದ್ರತಾ ಸಿಬ್ಬಂದಿ ಅವರ ತ್ಯಾಜ್ಯವನ್ನು ಸಂಗ್ರಹಿಸಿ, ಮುಚ್ಚಿದ ಚೀಲಗಳಲ್ಲಿ ಪ್ಯಾಕ್ ಮಾಡಿ ಸಂಗ್ರಹಿಸುತ್ತಾರೆ. ಅದನ್ನು ಭೇಟಿ ನೀಡುವ ದೇಶದಲ್ಲಿ ವಿಲೇವಾರಿ ಮಾಡುವುದಿಲ್ಲ ಬದಲಿಗೆ, ವಿಶೇಷ ಬ್ರೀಫ್‌ಕೇಸ್‌ನಲ್ಲಿ ಮಾಸ್ಕೋಗೆ ತರಲಾಗುತ್ತದೆ.
ಮಾಜಿ ಬಿಬಿಸಿ ಪತ್ರಕರ್ತೆ ಫರೀದಾ ರುಸ್ತಮೋವಾ ಕೂಡ ಇಂತಹ ಘಟನೆಗಳ ಬಗ್ಗೆ ಕೇಳಿರುವುದಾಗಿ ದೃಢಪಡಿಸಿದ್ದಾರೆ. ಪುತಿನ್ ವಿದೇಶ ಪ್ರವಾಸ ಮಾಡುವಾಗ ಕೆಲವೊಮ್ಮೆ 'ಖಾಸಗಿ ಸ್ನಾನಗೃಹ' ಅಥವಾ ಪೋರ್ಟಬಲ್ ಶೌಚಾಲಯವನ್ನು ಬಳಸುತ್ತಿದ್ದರು ವರದಿಯಾಗಿದೆ. ವಿಶೇಷ ಕಾರ್ಯಕ್ರಮಗಳಿಗಾಗಿ ಮಾಸ್ಕೋದಿಂದ ನಿರ್ದಿಷ್ಟವಾಗಿ ತರಲಾದ ಬಾಡಿ ಡಬಲ್ಸ್ ಮತ್ತು ಆಹಾರ ಪದಾರ್ಥಗಳ ಕುರಿತೂ ವರದಿಯಾಗಿದೆ. ಪುತಿನ್​ ಅವರ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾಗಿರುವ ಹಿನ್ನೆಲೆಯಲ್ಲಿ ಅವರ ಭದ್ರತಾ ವಿಚಾರದಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ, (ಏಜೆನ್ಸೀಸ್​).