Nepal Floods | ನೇಪಾಳ-ಚೀನಾ ಗಡಿಯ ಅಸಲಿ ದುರಂತಕ್ಕೆ ಕಾರಣವೇನು...?
ನೇಪಾಳದ ಭೋಟಿ ಕೋಶಿ ನದಿಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹಕ್ಕೆ (Nepal Floods) ಬಲಿಯಾದವರ ಸಂಖ್ಯೆ 175ಕ್ಕೆ ಏರಿಕೆಯಾಗಿದ್ದು, 300 ಭಾರತೀಯರು ಸೇರಿದಂತೆ 800ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ಭೀಕರ ದುರಂತಕ್ಕೆ ನಿಜವಾದ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ನೇಪಾಳ ಮತ್ತು ಚೀನಾದ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
2015ರ ಭೀಕರ ಭೂಕಂಪದ ನಂತರ ನೇಪಾಳ ಕಂಡ ಅತ್ಯಂತ ಕರಾಳ ದುರಂತ ಇದಾಗಿದ್ದು, ಇದರ ನೈಜ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರವಾಹಕ್ಕೆ ಭೂಕಂಪ, ಹಿಮಪಾತ ಅಥವಾ ಹಿಮನದಿ ಸರೋವರ ಒಡೆದಿರುವುದು ಕಾರಣವಾಗಿರಬಹುದು ಎಂಬ ಮೂರು ಪ್ರಮುಖ ಸಾಧ್ಯತೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನೇಪಾಳ-ಚೀನಾ ಗಡಿ ಭಾಗದಲ್ಲಿ ರಸ್ತೆ, ಸಂವಹನ ಮತ್ತು ಇಂಟರ್ನೆಟ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಹಾಗೂ ತನಿಖೆಗೆ ತೀವ್ರ ಅಡಚಣೆಯಾಗಿದ್ದು, ಈ ಕುರಿತು ಮಾತನಾಡಿರುವ ಲಾಸಾದಲ್ಲಿರುವ ನೇಪಾಳದ ಕಾನ್ಸುಲ್ ಜನರಲ್ ಲಕ್ಷ್ಮಿ ಪ್ರಸಾದ್ ನಿರೌಲಾ, ದುರಂತದ ಮೂಲ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲವು ಪ್ರಾಥಮಿಕ ಮಾಹಿತಿಗಳು ಸಿಕ್ಕಿವೆಯಾದರೂ, ದಿಢೀರ್ ಪ್ರವಾಹಕ್ಕೆ ಕಾರಣವೇನು ಎಂಬುದರ ಬಗ್ಗೆ ಚೀನಾ ಭಾಗಕ್ಕೂ ಯಾವುದೇ ಸ್ಪಷ್ಟತೆಯಿಲ್ಲ ಎಂದು ತಿಳಿಸಿದ್ದಾರೆ.
ಸಾಧ್ಯತೆ 1: ಭೂಕಂಪದಿಂದ ಸೃಷ್ಟಿಯಾಯ್ತಾ ಪ್ರವಾಹ...?
ಭೂಕಂಪದಿಂದಾಗಿ ಈ ಪ್ರವಾಹ ಉಂಟಾಗಿರಬಹುದು ಎಂಬ ಸಾಧ್ಯತೆಯನ್ನು ತನಿಖೆ ಮಾಡಲಾಗುತ್ತಿದೆ. ಬುಧವಾರ ಬೆಳಿಗ್ಗೆ 8:37ಕ್ಕೆ ಭೂಕಂಪ ಸಂಭವಿಸಿದ್ದು, ಅದಾದ ಕೇವಲ 3 ನಿಮಿಷಗಳಲ್ಲಿ ಅಂದರೆ 8:40ಕ್ಕೆ ದಿಢೀರ್ ಪ್ರವಾಹ ಬಂದಿದೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸಂಸತ್ತಿಗೆ ತಿಳಿಸಿದ್ದಾರೆ. ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (USGS) ಪ್ರಕಾರ, ಅದೇ ಸಮಯದಲ್ಲಿ ಟಿಬೆಟ್ ಪ್ರದೇಶದಲ್ಲಿ 4.4 ತೀವ್ರತೆಯ ಭೂಕಂಪ ದಾಖಲಾಗಿದೆ. ಆದರೆ, ಈ ಎರಡೂ ಘಟನೆಗಳ ನಡುವಿನ ಸಂಪರ್ಕವನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಭೂಕಂಪದಿಂದಾಗಿ ಹಿಮನದಿ ಅಥವಾ ಮಂಜುಗಡ್ಡೆಗಳು ಕುಸಿದು ನದಿಗೆ ನೀರು ಹರಿದಿರಬಹುದು ಎಂಬುದರ ಬಗ್ಗೆಯೂ ಅನುಮಾನವಿದೆ.
ಸಾಧ್ಯತೆ 2: ನದಿಗೆ ತಡೆಯೊಡ್ಡಿದ ಹಿಮಪಾತ
ಹಿಮಪಾತವೇ ಈ ದುರಂತಕ್ಕೆ ಮೂಲ ಕಾರಣವಿರಬಹುದು ಎಂದು ಕಾಠ್ಮಂಡು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಹವಾಮಾನ ಸಂಶೋಧಕ ರಿಜನ್ ಭಕ್ತ ಕಾಯಸ್ಥ ಹೇಳಿದ್ದಾರೆ. ಅವರ ಪ್ರಕಾರ, ನೇಪಾಳದ ಕಡೆಯಿಂದ ಬಿದ್ದ ಭಾರಿ ಹಿಮಪಾತವು ಲ್ಹೆಂಡೆ ನದಿಯ ಹರಿವನ್ನು ತಾತ್ಕಾಲಿಕವಾಗಿ ತಡೆದು ನಿಲ್ಲಿಸಿತ್ತು. ಇದರಿಂದ ಬೃಹತ್ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು, ಆ ತಡೆಗೋಡೆ ಒಮ್ಮೆಲೆ ಒಡೆದು ಕೆಳಭಾಗಕ್ಕೆ ಭೀಕರವಾಗಿ ನುಗ್ಗಿದೆ. ಅದೇ ಸಮಯದಲ್ಲಿ ಟಿಬೆಟ್ ಭಾಗದಲ್ಲಿ ಭೂಕಂಪ ಕೂಡ ಆಗಿರುವುದರಿಂದ ಎರಡೂ ಘಟನೆಗಳನ್ನು ಒಟ್ಟಿಗೆ ಪರಿಶೀಲಿಸಬೇಕಿದೆ ಎಂದಿದ್ದಾರೆ.
ಸಾಧ್ಯತೆ 3: ಹಿಮನದಿ ಸರೋವರ ಒಡೆದಿರುವ ಶಂಕೆ
ಹಿಮನದಿ ಸರೋವರ ಒಡೆದು ನೀರು ಹೊರಚೆಲ್ಲಿರುವ ಸಾಧ್ಯತೆಯನ್ನೂ ತಳ್ಳದುಹಾಕುವಂತಿಲ್ಲ. ಏಕೆಂದರೆ ಈ ಹಿಂದೆ 2025ರ ಜುಲೈ 8 ರಂದು ಸಹ ಭೋಟಿ ಕೋಶಿ ನದಿಯಲ್ಲಿ ಇದೇ ರೀತಿಯ ಪ್ರವಾಹ ಬಂದಿತ್ತು. ಆಗ ರಸುವಾ ಜಿಲ್ಲೆಯ ನೇಪಾಳ-ಚೀನಾ ಗಡಿಯ ಲ್ಹೆಂಡೆ ನದಿ ಬಳಿ ಹಿಮನದಿ ಸರೋವರ ಒಡೆದು ಪ್ರವಾಹ ಉಂಟಾಗಿತ್ತು ಎಂದು ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ ತಿಳಿಸಿತ್ತು. ಈ ಭಾಗದಲ್ಲಿ ದೊಡ್ಡ ದೊಡ್ಡ ಹಿಮನದಿ ಸರೋವರಗಳಿದ್ದು, ಈ ಬಾರಿಯೂ ಹಿಮಪಾತ ಮತ್ತು ಸರೋವರ ಒಡೆದಿರುವುದು ಎರಡೂ ಸೇರಿ ಈ ಪ್ರವಾಹ ಸೃಷ್ಟಿಸಿರಬಹುದು ಎಂದು ಕಾಯಸ್ಥ ಹೇಳಿದ್ದಾರೆ.
ಭಾರಿ ಮಳೆಯಿಂದ ಪ್ರವಾಹ ಬಂದಿಲ್ಲ ಎಂದು ತಜ್ಞರ ಸ್ಪಷ್ಟನೆ
ಈ ಬೃಹತ್ ದುರಂತಕ್ಕೆ ಭಾರಿ ಮಳೆ ಕಾರಣವಲ್ಲ ಎಂದು ಸಂಶೋಧಕ ಕಾಯಸ್ಥ ಸ್ಪಷ್ಟವಾಗಿ ಹೇಳಿದ್ದಾರೆ. ನೀರು ಹರಿದುಬಂದ ವೇಗ ಮತ್ತು ತೀವ್ರತೆಯನ್ನು ನೋಡಿದರೆ, ನದಿಯ ಮೇಲ್ಭಾಗದಲ್ಲಿ ಉಂಟಾಗಿದ್ದ ದೊಡ್ಡ ತಡೆಗೋಡೆ ಒಡೆದು ಒಮ್ಮೆಲೆ ಅಪಾರ ಪ್ರಮಾಣದ ನೀರು ಹೊರಬಂದಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ(ಏಜೆನ್ಸೀಸ್).