Western nuisance diary in the Eastern subcontinent 
ವಿದೇಶ

ಪೂರ್ವ ಉಪಖಂಡದಲ್ಲಿ ಪಶ್ಚಿಮದ ಉಪದ್ರವ ಡೈರಿ

ಜನವರಿ-ನವೆಂಬರ್ 2024
ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ, ಅವಾಮಿ ಲೀಗ್ ವಿಜಯಿಯಾಗಿ ಷೇಖ್ ಹಸೀನಾ ಸತತ ನಾಲ್ಕನೆಯ ಬಾರಿಗೆ ಪ್ರಧಾನಮಂತ್ರಿಯಾಗುತ್ತಾರೆ. ಚುನಾವಣೆಗಳು ಪಾರದರ್ಶಕವಾಗಿ ನಡೆದಿವೆ, ಆಡಳಿತ ಪಕ್ಷ ಯಾವುದೇ ಅಕ್ರಮ ಎಸಗಿಲ್ಲ ಎಂದು ಚುನಾವಣೆಗಳನ್ನು ಅವಲೋಕಿಸಲು ಬಂದ ಹಲವು ದೇಶಗಳ ರಾಜತಂತ್ರಜ್ಞರು, ಅಧಿಕೃತವಾಗಿಯೇ ಹೇಳುತ್ತಾರೆ. ಆದರೆ ಹಸೀನಾ ವಿರುದ್ಧ ತಥಾಕಥಿತ ವಿದ್ಯಾರ್ಥಿಗಳು ಮೇ ತಿಂಗಳಲ್ಲಿ ಆಂದೋಲನ ಆರಂಭಿಸುತ್ತಾರೆ. ಆಗ ‘ಬಾಂಗ್ಲಾದೇಶದ ಆಗ್ನೇಯ ತುದಿಯಲ್ಲಿರುವ ಸೇಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕಾಗೆ ಕೊಟ್ಟರೆ ಜನವರಿಯ ಚುನಾವಣೆಗಳು ನಿಷ್ಪಕ್ಷಪಾತವಾಗಿದ್ದವು, ನೀವು ಯಾವುದೇ ದಾಂಧಲೆ ನಡೆಸಿಲ್ಲ ಎಂದು ಅಮೆರಿಕಾ ಸರ್ಕಾರ ಹೇಳಿ ನಿಮ್ಮ ಪರವಾಗಿ ನಿಲ್ಲುತ್ತದೆ, ಇಲ್ಲದಿದ್ದರೆ ಇಲ್ಲ ಎಂದು ‘ಏಕ್ ಗೋರಾ’ ತಮಗೆ ಹೇಳಿದ್ದ’ ಎಂದು ಹಸೀನಾ ಹೇಳುತ್ತಾರೆ!.
ಇದರೊಂದಿಗೆ ಹಸೀನಾ ಇನ್ನೂ ಒಂದು ಆಘಾತಕಾರಿ ಸಂಗತಿಯನ್ನು ಹೇಳುತ್ತಾರೆ. ಈಶಾನ್ಯ ಭಾರತದ ಕ್ರಿಶ್ಚಿಯನ್ ಬಹುಸಂಖ್ಯಾತ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸಿ; ಅವುಗಳೊಂದಿಗೆ ಅದೇ ಬುಡಕಟ್ಟಿನ ಜನರಿರುವ ಮಯನ್ಮಾರ್​ನ ಚಿನ್ ಪ್ರದೇಶಗಳನ್ನೂ ಸೇರಿಸಿ ಸ್ವತಂತ್ರ ಕ್ರಿಶ್ಚಿಯನ್ ರಾಷ್ಟ್ರ ನಿರ್ವಿುಸಲು ಅಮೆರಿಕಾ ಸಂಚು ಮಾಡಿದೆ ಎಂದು ಹಸೀನಾ ಹೇಳಿ ಎಲ್ಲರನ್ನೂ ಬೆಚ್ಚಿಬೀಳಿಸುತ್ತಾರೆ. ಅವರು ಹೇಳುವ ಇನ್ನೊಂದು ವಿಷಯವೂ ಕುತೂಹಲಕರ. ತಾನು ನಿರ್ವಿುಸಲಿರುವ ಕ್ರಿಶ್ಚಿಯನ್ ರಾಷ್ಟ್ರಕ್ಕೆ ಸಮುದ್ರತೀರ ಕಲ್ಪಿಸಲು ಬಂಗಾಳ ಕೊಲ್ಲಿಗೆ ಹೊಂದಿಕೊಂಡ ಆಗ್ನೇಯ ಬಾಂಗ್ಲಾದೇಶದ ಚಿತ್ತಗಾಂಗ್ ಜಿಲ್ಲೆಯನ್ನೂ ಕಿತ್ತು ಅದಕ್ಕೆ ಸೇರಿಸುವುದು ಅಮೆರಿಕಾದ ಲೆಕ್ಕಾಚಾರ ಎಂಬ ಹಸೀನಾರ ಮಾತು ಗಮನ ಸೆಳೆಯುತ್ತದೆ. ಅಂದರೆ ಬಾಂಗ್ಲಾದೇಶದಿಂದ ಸೇಂಟ್ ಮಾರ್ಟಿನ್ ದ್ವೀಪವನ್ನು ‘ಸುಲಭವಾಗಿ’ ಪಡೆದುಕೊಳ್ಳುವ ತನ್ನ ಪ್ಲಾನ್ ಎ ಯಶಸ್ವಿಯಾಗದಿದ್ದರೆ ಆ ದ್ವೀಪವಿರುವ ಚಿತ್ತಗಾಂಗ್ ಜಿಲ್ಲೆಯನ್ನೇ ಬಾಂಗ್ಲಾದೇಶದಿಂದ ಕಿತ್ತು ಕ್ರಿಶ್ಚಿಯನ್ ಪ್ರದೇಶಗಳೊಂದಿಗೆ ಸೇರಿಸಿ ಹೊಸದೊಂದು ದೇಶವನ್ನೇ ನಿರ್ವಿುಸಿ ಅದನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳುವುದು ಅಮೆರಿಕಾದ ಪ್ಲಾನ್ ಬಿ ಆಗಿರಬಹುದು ಎನ್ನುವುದನ್ನು ನನ್ನಂತಹ ಭೂ-ರಾಜಕೀಯ ವಿಶ್ಲೇಷಣಕಾರರು ಗುರುತಿಸುತ್ತಾರೆ.
ಹಸೀನಾರಿಗೆ ಧಮಕಿ ಹಾಕಿದ ಆ ‘ಗೋರಾ’ ಅಂದರೆ ಬಿಳಿಯ ಮನುಷ್ಯ ಬೇರಾರೂ ಅಲ್ಲ, ಜೋ ಬೈಡನ್ ಆಡಳಿತದ ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರದೇಶಗಳ ವ್ಯವಹಾರ ನೋಡಿಕೊಳ್ಳುವ ಡೊನಾಲ್ಡ್ ಲೂ ಎನ್ನುವುದು ಅನತಿ ಕಾಲದಲ್ಲೇ ಬಯಲಾಗುತ್ತದೆ. ಆ ವ್ಯಕ್ತಿ, 2 ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ರೂಪಿಸಿದ್ದರು, ಆ ವ್ಯಕ್ತಿಯ ಕಣ್ಣು ಈಗ ಹಸೀನಾರತ್ತ ತಿರುಗಿದೆಯಲ್ಲ ಎಂದು ಜಗತ್ತು ಆತಂಕಗೊಳ್ಳುತ್ತದೆ.
ಆ ಆತಂಕ ಎರಡೂವರೆ ತಿಂಗಳಲ್ಲಿ ನಿಜವಾಗಿ ಆಗಸ್ಟ್​ನಲ್ಲಿ ತಥಾಕಥಿತ ವಿದ್ಯಾರ್ಥಿಗಳು ವ್ಯಾಪಕವಾಗಿ ದಂಗೆಯೆದ್ದು, ಹಸೀನಾ ಜೀವವುಳಿಸಿಕೊಂಡು ಭಾರತಕ್ಕೆ ಓಡಿಬರುತ್ತಾರೆ. ಅಮೆರಿಕಾದ ಡೆಮೋಕ್ರಾಟಿಕ್ ಪಕ್ಷ ದಶಕಗಳಿಂದಲೂ ಪೋಷಿಸಿಕೊಂಡು ಬಂದಿದ್ದ ಮಹಮದ್ ಯೂನುಸ್ ಪ್ಯಾರಿಸ್​ನಿಂದ ಧಾವಿಸಿಬಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಅಂದರೆ ವಾಸ್ತವವಾಗಿ ನೇತಾರನ ಸ್ಥಾನದಲ್ಲಿ ಕೂರುತ್ತಾರೆ. ಆ ದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಆರಂಭಗೊಳ್ಳುತ್ತದೆ.
ಅದೇ ಸುಮಾರಿಗೆ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಹಂತಕ್ಕೆ ಬರುತ್ತದೆ, ರಿಪಬ್ಲಿಕನ್ ಪಕ್ಷದ ಉಮೇದುವಾರರಾದ ಟ್ರಂಪ್ ಬಾಂಗ್ಲಾದೇಶಿ ಹಿಂದೂಗಳ ಬಗ್ಗೆ ಅನುಕಂಪದ ಮಾತಾಡುತ್ತಾರೆ. ಆ ವರ್ಷದ ದೀಪಾವಳಿಯಲ್ಲಂತೂ ಹಿಂದೂಗಳ ಬಗ್ಗೆ, ಭಾರತೀಯರ ಬಗ್ಗೆ ಪ್ರಶಂಸೆಯ ಮಾತು ಹೇಳಿ, ತಾವು ಅಧ್ಯಕ್ಷರಾದರೆ ಶ್ವೇತಭವನದಲ್ಲಿ ಒಬ್ಬ ಹಿಂದೂಗಳ ಮಿತ್ರ ಇರುವುದಾಗಿ ಘೊಷಿಸುತ್ತಾರೆ. ಒಂದು ವಾರದಲ್ಲೇ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಫೆಬ್ರವರಿ 2025 ಬಾಂಗ್ಲಾದೇಶದಲ್ಲಿ ಭಾರತದ ಸ್ನೇಹಿತೆ ಹಸೀನಾ ಕೆಳಗಿಳಿದು ಅಮೆರಿಕಾದ ಕೈಗೊಂಬೆ ಯೂನುಸ್ ಅಧಿಕಾರ ಹಿಡಿದಾಗಿನಿಂದಲೂ ಢಾಕಾದ ನೀತಿಗಳು ಭಾರತಕ್ಕೆ ವಿರುದ್ಧವಾಗಿ, ಪಾಕಿಸ್ತಾನದ ಪರವಾಗಿ ತಿರುಗಿದ್ದ ಹಿನ್ನೆಲೆಯಲ್ಲಿ 2025 ಫೆಬ್ರವರಿ 14ರ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್​ಗೆ ಪ್ರಶ್ನೆಯೊಂದು ಎದುರಾಗುತ್ತದೆ. ‘ಬಾಂಗ್ಲಾದೇಶವನ್ನು ನಾನು ಪ್ರಧಾನಿ ಮೋದಿಯವರಿಗೆ ಬಿಟ್ಟಿದ್ದೇನೆ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಅವರ ಪಕ್ಕದಲ್ಲೇ ಮೋದಿ ಕುಳಿತಿರುತ್ತಾರೆ.
ಫೆಬ್ರವರಿ- ಮೇ 2026 ನಂತರದ ದಿನಗಳಲ್ಲಿ ಟ್ರಂಪ್ ಆಡಳಿತದ ಆಮದು ಶುಲ್ಕ ನೀತಿ ಹಾಗೂ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಾರತ ಹಾಗೂ ಮೋದಿ ಸರ್ಕಾರದ ಕುರಿತಾಗಿ ಟ್ರಂಪ್ ಆಡಳಿತದ ನೀತಿಗಳು ಬದಲಾಗಿ, ಟ್ರಂಪ್​ರ ಅಮೆರಿಕಾ ಬಹು ಅರ್ಥಗಳಲ್ಲಿ ಭಾರತ-ವಿರೋಧಿಯಾಗಿ ಬದಲಾದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಮತ್ತು ಭಾರತದ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತವೆ. ಫೆ. 12ರಂದು ನಡೆದ ಸಂಸದೀಯ ಚುನಾವಣೆಗಳಲ್ಲಿ ಬಾಂಗ್ಲಾದೇಶ್ ನ್ಯಾಷಲಿಸ್ಟ್ ಪಾರ್ಟಿ (ಬಿಎನ್​ಪಿ) ಹೆಚ್ಚು ಸ್ಥಾನಗಳನ್ನು ಗಳಿಸಿ, ತಾರಿಖ್ ರಹಮಾನ್ ಪ್ರಧಾನಮಂತ್ರಿಯಾಗುತ್ತಾರೆ. ಹಸೀನಾರನ್ನು ಕೆಳಗಿಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆವೆಂದು ಹೇಳಿಕೊಳ್ಳುತ್ತಿದ್ದ ತಥಾಕಥಿತ ವಿದ್ಯಾರ್ಥಿಗಳು ಕಟ್ಟಿಕೊಂಡ ನ್ಯಾಷನಲ್ ಸಿಟಿಜನ್ಸ್ ಪಾರ್ಟಿ (ಎನ್​ಸಿಪಿ) ಮತ್ತದರ ಪರವಾಗಿ ನಿಂತ ಜಮಾತ್-ಇ-ಇಸ್ಲಾಮಿ ಮೂಲೆಗುಂಪಾಗುತ್ತವೆ. ಇದು ಸಾಬೀತುಗೊಳಿಸಿದ್ದು ಜುಲೈ-ಆಗಸ್ಟ್ 2024ರಲ್ಲಿ ಬಾಂಗ್ಲಾದೇಶದಲ್ಲಿ ಘಟಿಸಿದ ಬೆಳವಣಿಗೆಗಳಲ್ಲಿ ಅವುಗಳ ಪಾತ್ರ ತೋರಿಕೆಯದ್ದಾಗಿತ್ತು ಮತ್ತು ಅದೆಲ್ಲದರ ಹಿಂದೆ ನಿಜವಾಗಿ ಕೆಲಸ ಮಾಡಿದ್ದು ಅಮೆರಿಕಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ) ಎನ್ನುವುದು. ಅಮೆರಿಕಾಗೆ ಮಣೆ ಹಾಕದ ಅವಾಮಿ ಲೀಗ್ ಈ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಯೂನುಸ್ ಸರ್ಕಾರ ನಿರ್ಬಂಧ ವಿಧಿಸಿತ್ತು ಎನ್ನುವುದು ನೆನಪಿಟ್ಟುಕೊಳ್ಳಬೇಕಾದ ವಿಷಯ.
ಮುಂದಿನ ತಿಂಗಳೇ ಭಾರತದಲ್ಲೂ ಅಮೆರಿಕಾದ ಒಂದು ಸಂಚಿನ ಸೂಚನೆ ಹೊರಬೀಳುತ್ತದೆ. ಮ್ಯಾಥ್ಯೂ ವ್ಯಾನ್​ಡೈಕ್ ಎಂಬ ಸಿಐಎ ಏಜೆಂಟನೊಬ್ಬ ಮಾ.25ರಂದು ಕೊಲ್ಕತಾ ವಿಮಾನನಿಲ್ದಾಣದಲ್ಲಿ ಭಾರತದ ಸುರಕ್ಷಾ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತಾನೆ. ಆತ ಹಿಂದೆ ಲಿಬಿಯಾ, ಇರಾಕ್, ಅಫ್ಘಾನಿಸ್ತಾನಗಳಲ್ಲೂ ಅಲ್ಲಿನ ಸರ್ಕಾರಗಳ ವಿರುದ್ಧ ಸಂಚು ನಡೆಸಿದ್ದ, ಎರಡು ಕಡೆ ಬಂಧಿತನಾದ ಅವನನ್ನು ಅಮೆರಿಕಾ ತರಾತುರಿಯಿಂದ ತೆರೆಯ ಹಿಂದೆಯೇ ಕಸರತ್ತು ಮಾಡಿ ಬಿಡಿಸಿಕೊಂಡಿತ್ತು. ಈಗ ಆ ಸಿಐಎ ಏಜೆಂಟ್ ಮಣಿಪುರದಲ್ಲಿ ಕುಕಿ ಹಿಂಸಾವಾದಿಗಳಿಗೆ ಡ್ರೋನ್ ಚಾಲನೆಯ ತರಬೇತಿ ನೀಡುತ್ತಿದ್ದ ಮತ್ತು ಅವನಿಗೆ ಮಣಿಪುರದ ಕ್ರಿಶ್ಚಿಯನ್ ಮಿಷನರಿಗಳ ಜತೆ ಘನಿಷ್ಠ ಸಂಪರ್ಕವಿತ್ತು ಎಂಬ ಫೋಟೋ-ಸಮೇತ ಮಾಹಿತಿಗಳು ಬಹಿರಂಗವಾಗುತ್ತವೆ.
ಆತನೊಂದಿಗೆ ಕೆಲಸ ಮಾಡುತ್ತಿದ್ದ 6 ಯೂಕ್ರೇನಿಯನ್ನರೂ ಉತ್ತರ ಭಾರತದ ವಿವಿಧೆಡೆ ಬಂಧಿತರಾಗುತ್ತಾರೆ. ಇನ್ನು 8 ಜನ ಯೂಕ್ರೇನಿಯನ್ನರಿಗಾಗಿ ಹುಡುಕಾಟ ಆರಂಭವಾಗುತ್ತದೆ. ಭಾರತದ ಸುರಕ್ಷಾ ಪಡೆಗಳಿಗೆ ಈ ದುಷ್ಕರ್ವಿುಗಳ ಕುರಿತಾಗಿ ಮಾಹಿತಿ ನೀಡಿದ್ದು ರಷ್ಯಾದ ಗುಪ್ತಚರ ಸಂಸ್ಥೆ ಎಫ್​ಎಸ್​ಬಿ! ಇದರೊಂದಿಗೇ ಹೊರಬಿದ್ದ ಮತ್ತೊಂದು ವಿಷಯ ತೀರಾ ಗಂಭೀರವಾದದ್ದು. ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಬಾಂಗ್ಲಾದೇಶದಲ್ಲಿ 17 ಸಿಐಎ ಏಜಂಟರು ಮತ್ತವರ ಸ್ಥಳೀಯ ಹಾಗೂ ಪಾಕಿಸ್ತಾನಿ ಸಹಚರರು ನಿಗೂಢ ಬಗೆಗಳಲ್ಲಿ ಸಾವನ್ನಪ್ಪಿದ್ದಾರೆ. ಕೆಲವರಿಗೆ ‘ಅಜ್ಞಾತ ಶಸ್ತ್ರಧಾರಿಗಳು’ ಅಂತ್ಯ ಕಾಣಿಸಿದ್ದರೆ ಮತ್ತೆ ಕೆಲವರಿಗೆ ವಿಷಪ್ರಾಶನವಾಗಿದೆ. ಮತ್ತೂ ಕೆಲವರಿಗೇನಾಯಿತು ಎಂದು ಸಾಮಾನ್ಯರಿಗೆ ತಿಳಿಯುತ್ತಿಲ್ಲ. ಅವರ ಮೃತದೇಹಗಳನ್ನು ಢಾಕಾದಲ್ಲಿನ ಅಮೆರಿಕನ್ ರಾಯಭಾರ ಕಚೇರಿಯ ‘ಅಧಿಕಾರಿಗಳು’, ಪರೀಕ್ಷೆಗೂ ಒಳಪಡಿಸದೇ ಗುಟ್ಟಾಗಿ ದೇಶದಿಂದ ಹೊರಸಾಗಿಸಿಬಿಟ್ಟಿದ್ದಾರೆ. ಅಂತಹದೊಂದು ಪ್ರಕರಣ ಕಳೆದ ಆಗಸ್ಟ್ ಕೊನೆಯ ವಾರದಲ್ಲಿ ಢಾಕಾದಲ್ಲೇ ಘಟಿಸಿತ್ತು. ಅದೇ ಸಮಯದಲ್ಲಿ ಮೋದಿ, ಪುತಿನ್ ಮತ್ತು ಷಿ ಜಿನ್​ಪಿಂಗ್ ಎಸ್​ಸಿಓ ಸಮಾವೇಶಕ್ಕಾಗಿ ಚೀನಾದಲ್ಲಿ ಒಟ್ಟುಗೂಡಿ ಟ್ರಂಪ್​ರ ಹೊಟ್ಟೆ ಉರಿಸಿದ್ದರು ಎನ್ನುವುದು ಆಸಕ್ತಿಕರ ವಿಷಯ. ಇನ್ನೂ ಹೆಚ್ಚಿನ ಆಸಕ್ತಿಕರ ವಿಷಯವೆಂದರೆ ಬಾಂಗ್ಲಾದೇಶದಲ್ಲಿ ಆ 17 ನಿಗೂಢ ಹತ್ಯೆಗಳನ್ನು ನಡೆಸಿರುವುದು ರಷ್ಯಾದ ಗುಪ್ತಚರ ಸಂಸ್ಥೆ ಎಫ್​ಎಸ್​ಬಿ ಎಂಬ ಗುಮಾನಿ. ಈಗ ಸಿಐಎ ಏಜೆಂಟ್ ಮ್ಯಾಥ್ಯೂ ವ್ಯಾನ್​ಡೈಕ್ ಮತ್ತವನ ಯೂಕ್ರೇನಿಯನ್ ಸಹಚರರ ಕುರಿತಾದ ಮಾಹಿತಿಗಳನ್ನು ಭಾರತೀಯ ಗುಪ್ತಚರ ಹಾಗೂ ಸುರಕ್ಷಾ ಸಂಸ್ಥೆಗಳಿಗೆ ನೀಡಿದ್ದೂ ರಷ್ಯಾದ ಎಫ್​ಎಸ್​ಬಿಯೇ ಎಂಬ ವಿಷಯವನ್ನೂ ಸೇರಿಸಿದರೆ, ಉಪಖಂಡದ ಪೂರ್ವ ಭಾಗದಲ್ಲಿ ಅಮೆರಿಕನ್ನರ ಬೆನ್ನಿನ ಹಿಂದೆಯೇ ರಷ್ಯನ್ನರು ಸುಳಿದಾಡುತ್ತಿದ್ದಾರೆ; ಅವರು ಬಾಂಗ್ಲಾದೇಶದಲ್ಲಿ ಭಾರತ ಮತ್ತು ರಷ್ಯಾದ ಹಿತಾಸಕ್ತಿಗಳ ವಿರುದ್ಧವಾಗಿ ಕೆಲಸ ಮಾಡುತ್ತಿರುವವರಿಗೆ ತಾವೇ ಅಂತ್ಯ ಕಾಣಿಸುತ್ತಿದ್ದಾರೆ ಮತ್ತು ಅಂತಹದೇ ಕಾರಸ್ಥಾನಗಳನ್ನು ಭಾರತದ ನೆಲದಲ್ಲಿ ನಡೆಸುತ್ತಿರುವವರ ಬಗೆಗಿನ ಮಾಹಿತಿಗಳನ್ನು ಭಾರತೀಯರಿಗೆ ಒದಗಿಸುತ್ತಿದ್ದಾರೆ!
ಸಿಐಎ ಏಜೆಂಟ್ ಮ್ಯಾಥ್ಯೂ ವ್ಯಾನ್​ಡೈಕ್​ನ ಬಂಧನವಾಗಿ ಒಂದು ತಿಂಗಳಾಗುವ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತವೆ. ಇಲ್ಲಿ ಒಂದು ಸಾಮ್ಯ ಇದೆ. ಚುನಾವಣೆಗಳು ನಡೆದ ಬಾಂಗ್ಲಾದೇಶಿ ಸಂಸತ್ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಸ್ಥಾನಗಳ ಸಂಖ್ಯೆ ಸರಿಸುಮಾರು ಒಂದೇ (297, 293). ಕಾಕತಾಳೀಯವೆಂಬಂತೆ ಪಶ್ಚಿಮ ಬಂಗಾಳದಲ್ಲಿ ಹೊರಹೊಮ್ಮಿದ ಫಲಿತಾಂಶ ಸರಿಸುಮಾರು ಬಾಂಗ್ಲಾದೇಶಿ ಸಂಸತ್ ಚುನಾವಣೆಯ ಫಲಿತಾಂಶದ ಪಡಿಯಚ್ಚಿನಂತೇ! ಬಿಜೆಪಿಗೆ ಮೂರನೆಯ ಎರಡಕ್ಕಿಂತಲೂ ಹೆಚ್ಚು ಸ್ಥಾನಗಳು, ಟಿಎಂಸಿಗೆ ಮುಖಭಂಗ.
ಮೇ 4ರಂದು ಚುನಾವಣಾ ಫಲಿತಾಂಶಗಳು ಬಿಜೆಪಿ ವಿಜಯವನ್ನು ಸಾರಿದ ಮೂರನೆಯ ದಿನ ಅಮೆರಿಕಾದ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಯವರನ್ನು ಅಭಿನಂದಿಸುತ್ತಾರೆ! ಇದು ಅಭೂತಪೂರ್ವ. ಸಂಸದೀಯ ಚುನಾವಣೆಗಳಲ್ಲಿ ಜಯಶೀಲವಾದ ರಾಜಕೀಯ ಪಕ್ಷದ ನಾಯಕರಾಗಿದ್ದು ರಾಷ್ಟ್ರದ ನಾಯಕರೂ ಆಗುವ ಸ್ಥಾನದಲ್ಲಿ ನಿಂತವರಿಗೆ ಎಲ್ಲೆಲ್ಲಿಂದಲೂ ಅಭಿನಂದನೆಗಳ ಸುರಿಮಳೆ ಸಹಜ. ಆದರೆ ರಾಜ್ಯವೊಂದರ ಚುನಾವಣೆಗಳಲ್ಲಿ ರಾಜಕೀಯ ಪಕ್ಷವೊಂದು ವಿಜಯಿಯಾದರೆ ಆ ಪಕ್ಷದವರೇ ಆದ ಪ್ರಧಾನಿಗೆ ಅಮೆರಿಕಾ ಇರಲಿ ಯಾವುದೇ ವಿದೇಶದ ಅಧ್ಯಕ್ಷ ಅಥವಾ ಪ್ರಧಾನಿ ಅಭಿನಂದನೆ ಹೇಳಿದ ಉದಾಹರಣೆ ಇಲ್ಲ. ಈಗ ಟ್ರಂಪಣ್ಣ ನೇರವಾಗಿ ಪ್ರಧಾನಿಗೆ ಅಭಿನಂದನೆ ಹೇಳುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ.
ಅದಾದ ಮರುದಿನ ಪಾಕಿಸ್ತಾನದ ಗೃಹಮಂತ್ರಿ ಮೊಹಸಿನ್ ಖಾನ್ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಾರೆ, ಬಾಂಗ್ಲಾದೇಶಿ ನಗರಗಳಲ್ಲಿ ಸುರಕ್ಷೆಯನ್ನು ಬಲಪಡಿಸಲು ಸಹಾಯ ನೀಡುವ ಮತ್ತು ಅಂತಹದೇ ಇನ್ನು ಒಂದೆರಡು ಒಪ್ಪಂದಗಳಿಗೆ ಸಹಿ ಹಾಕುತ್ತಾರೆ. 1971ರಲ್ಲಿ ಕನಿಷ್ಠ 30 ಲಕ್ಷ ಬಾಂಗ್ಲಾದೇಶೀಯರನ್ನು ದೇಶದಾದ್ಯಂತ ಕೊಲೆಗೈದ ಪಾಕಿಸ್ತಾನದಿಂದ ಇಂದು ಬಾಂಗ್ಲಾದೇಶದ ನಗರಗಳ ಸುರಕ್ಷೆಗೆ ಸಹಾಯ! ಇದೇನು ಕಥೆ!. ಅದಾಗಿ 2 ವಾರಗಳಾಗುತ್ತವೆ. ಮೇ 26ಕ್ಕೆ ನಿಗದಿಯಾದ ಕ್ವಾಡ್ (ಕ್ವಾಡ್ರಿಲ್ಯಾಟರಲ್ ಸೆಕ್ಯೂರಿಟಿ ಡಯಲಾಗ್) ವಿದೇಶಮಂತ್ರಿಗಳ ಸಮಾವೇಶಕ್ಕಾಗಿ ವಿದೇಶಾಂಗ ಕಾರ್ಯದರ್ಶಿ ಮಾಕೋ ರೂಬಿಯೋ 3 ದಿನಗಳು ಮುಂಚಿತವಾಗಿಯೇ ಭಾರತಕ್ಕೆ ಬರುತ್ತಾರೆ. ಬಂದವರು ಮೊದಲು ನವದೆಹಲಿಗೆ ಬಾರದೇ ಕೊಲ್ಕತಾಗೆ ಹೋಗುತ್ತಾರೆ. ಅಲ್ಲಿ ದಿವಂಗತ ಮದರ್ ಥೆರೆಸಾ ಅವರ ಮಿಷನರೀಸ್ ಆಫ್ ಚಾರಿಟೀಸ್​ಗೆ ಹೋಗುತ್ತಾರೆ! ಕಾರ್ಯದರ್ಶಿಗಳ ಜತೆ ಏನು ಮಾತಾಡಿದಿರಿ ಎಂದು ಮಾಧ್ಯಮಗಳು ಕೇಳಿದರೆ ಆ ಸಂಸ್ಥೆಯ ಸನ್ಯಾಸಿನಿಯರು ಉತ್ತರವನ್ನೇ ಕೊಡುವುದಿಲ್ಲ. ರೂಬಿಯೋ ಅವರನ್ನು ಯಾರಾದರೂ ಕೇಳಿದರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಆದರೆ ಒಂದು ವಿಷಯ ಗೊತ್ತಾಗಿದೆ. ರೂಬಿಯೋ ಭೇಟಿಗೆ 2 ದಿನಗಳ ಮೊದಲು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆ ಸಂಸ್ಥೆಯ ಇಬ್ಬರು ಸನ್ಯಾಸಿನಿಯರನ್ನು ಭೇಟಿಯಾಗಿದ್ದರಂತೆ. ಭಾರತೀಯ ಉಪಖಂಡದ ಪೂರ್ವ ಭಾಗದಲ್ಲಿ ಏನು ನಡೆಯುತ್ತಿದೆ? ಅದನ್ನು ಮುಂದಿನ ವಾರ ವಿವರವಾಗಿ ವಿಶ್ಲೇಷಿಸೋಣ(ಮುಂದುವರಿಯುವುದು).