ಪಶ್ಚಿಮ ಏಷ್ಯಾ ಬಿಕ್ಕಟ್ಟು: ಇರಾನ್ ಅಧ್ಯಕ್ಷರಿಗೆ ಕರೆ ಮಾಡಿ ಶಾಂತಿ ಮಂತ್ರ ಪಠಿಸಿದ ಪ್ರಧಾನಿ ಮೋದಿ! PM Modi - Masoud Pezeshkian
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್( PM Modi - Masoud Pezeshkian) ಅವರೊಂದಿಗೆ ಮಂಗಳವಾರ ಮಹತ್ವದ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಶಾಂತಿಯುತ ಮಾತುಕತೆ ಮತ್ತು ರಾಜತಾಂತ್ರಿಕತೆ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.
ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸಿರುವ ಪಶ್ಚಿಮ ಏಷ್ಯಾದ ಇತ್ತೀಚಿನ ವಿದ್ಯಮಾನಗಳು ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರು ಪ್ರಧಾನಿ ಮೋದಿಯವರಿಗೆ ವಿವರಣೆ ನೀಡಿದರು. ಈ ವೇಳೆ ಪ್ರಾಂತ್ಯದಲ್ಲಿ ಇತ್ತೀಚೆಗೆ ಏರ್ಪಟ್ಟಿರುವ ಒಪ್ಪಂದಗಳನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ.
ಮಾತುಕತೆಯೇ ಏಕೈಕ ಪರಿಹಾರ: ಪ್ರಧಾನಿ ಮೋದಿ
ಯಾವುದೇ ಜಾಗತಿಕ ಸಮಸ್ಯೆಯನ್ನಾದರೂ ಸಂಘರ್ಷದ ಮೂಲಕ ಅಲ್ಲ, ಬದಲಿಗೆ ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದು ಭಾರತದ ಸ್ಥಿರ ಹಾಗೂ ದೀರ್ಘಕಾಲದ ನಿಲುವು ಎಂಬುದನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಎಲ್ಲಾ ದೇಶಗಳು ನಿರಂತರ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಒತ್ತಿ ಹೇಳಿದರು. ಇದರೊಂದಿಗೆ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನೌಕಾಯಾನದ ಸ್ವಾತಂತ್ರ್ಯ ಮತ್ತು ಮುಕ್ತ ವಾಣಿಜ್ಯ ವ್ಯಾಪಾರವನ್ನು ರಕ್ಷಿಸುವುದು ಇಂದಿನ ಜಾಗತಿಕ ಅಗತ್ಯವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
'X' ಜಾಲತಾಣದಲ್ಲಿ ಪ್ರಧಾನಿ ಸಂದೇಶ
ಇರಾನ್ ಅಧ್ಯಕ್ಷರೊಂದಿಗಿನ ಮಾತುಕತೆಯ ಬಳಿಕ ಸಾಮಾಜಿಕ ಮಾತುಕತೆ ಜಾಲತಾಣ 'X'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದೆ. ಪ್ರಸ್ತುತ ನಡೆಯುತ್ತಿರುವ ಸಂಧಾನ ಪ್ರಕ್ರಿಯೆಗಳಲ್ಲಿನ ಪ್ರಗತಿಯನ್ನು ಸ್ವಾಗತಿಸುತ್ತೇನೆ. ನಿರಂತರ ಪ್ರಯತ್ನಗಳು ಪ್ರಾಂತ್ಯದಲ್ಲಿ ಶಾಶ್ವತ ಶಾಂತಿಗೆ ನಾಂದಿ ಹಾಡಲಿವೆ ಎಂದು ಆಶಿಸುತ್ತೇನೆ. ಭಾರತ ಮತ್ತು ಇಡೀ ಜಗತ್ತಿಗೆ ಹೊರ್ಮುಜ್ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂಬುದನ್ನು ಈ ವೇಳೆ ಪುನರುಚ್ಚರಿಸಿದ್ದೇನೆ ಎಂದು ತಿಳಿಸಿದ್ದಾರೆ.
ದೋಹಾದಲ್ಲಿ ಅಮೆರಿಕ-ಇರಾನ್ ಮತ್ತೊಂದು ಸುತ್ತಿನ ರಹಸ್ಯ ಮಾತುಕತೆ
ಕಳೆದ ಕೆಲವು ವಾರಗಳಿಂದ ಸೇನಾ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಅಮೆರಿಕ ಮತ್ತು ಇರಾನ್ ದೇಶಗಳು ಈಗ ಉದ್ವಿಗ್ನತೆ ಶಮನಗೊಳಿಸಲು ಕತಾರ್‌ನ ದೋಹಾದಲ್ಲಿ ಉನ್ನತ ಮಟ್ಟದ ತಾಂತ್ರಿಕ ಮಾತುಕತೆಗೆ ಸಜ್ಜಾಗಿವೆ. ಹೊರ್ಮುಜ್ ಜಲಸಂಧಿಯಲ್ಲಿನ ಸಂಘರ್ಷವನ್ನು ತಣ್ಣಗಾಗಿಸುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿದೆ.
ನಂಬಲರ್ಹ ಮೂಲಗಳ ಪ್ರಕಾರ, ಈ ಮಾತುಕತೆಗಳು ಮುಂದುವರಿಯುವವರೆಗೆ ಎರಡೂ ದೇಶಗಳು ಪರಸ್ಪರರ ವಿರುದ್ಧ ಯಾವುದೇ ರೀತಿಯ ಭೌತಿಕ ದಾಳಿ ಅಥವಾ ಸೇನಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಒಪ್ಪಿಕೊಂಡಿವೆ. ಸದ್ಯಕ್ಕೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಹಾಗೂ ವಾಣಿಜ್ಯ ಹಡಗುಗಳು ಜಲಮಾರ್ಗದಲ್ಲಿ ಮುಕ್ತವಾಗಿ ಸಂಚರಿಸಲು ಉಭಯ ದೇಶಗಳು ಸಮ್ಮತಿಸಿವೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬದಲಾದ ಸಭೆಯ ವೇದಿಕೆ!
ವಾಸ್ತವವಾಗಿ, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಚರ್ಚಿಸಲು ಈ ಸಭೆಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಆಯೋಜಿಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಕಳೆದ ವಾರಾಂತ್ಯದಲ್ಲಿ ಉಭಯ ದೇಶಗಳ ನಡುವೆ ನಡೆದ ಹಠಾತ್ ಸೇನಾ ಸಂಘರ್ಷದಿಂದಾಗಿ, ರಾಜತಾಂತ್ರಿಕರು ಸಭೆಯ ವೇದಿಕೆಯನ್ನು ದೋಹಾಕ್ಕೆ ಬದಲಾಯಿಸಿದರು. ಅಷ್ಟೇ ಅಲ್ಲದೆ, ಪರಮಾಣು ವಿಷಯವನ್ನು ಬದಿಗಿಟ್ಟು ಹೊರ್ಮುಜ್ ಜಲಸಂಧಿಯ ಭದ್ರತೆ ಮತ್ತು ವಾಣಿಜ್ಯ ಹಡಗುಗಳ ರಕ್ಷಣೆಗೆ ಮಾತ್ರ ಸಭೆಯ ಕಾರ್ಯಸೂಚಿಯನ್ನು ಸೀಮಿತಗೊಳಿಸಲಾಗಿದೆ. ಅಮೆರಿಕದ ತಾಂತ್ರಿಕ ತಂಡದ ಮುಖ್ಯಸ್ಥ ನಿಕ್ ಸ್ಟೆವರ್ಟ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಈ ರಾಜತಾಂತ್ರಿಕ ಪ್ರಯತ್ನಗಳು ಅತ್ಯಂತ ನಿರ್ಣಾಯಕವಾಗಿವೆ,(ಏಜೆನ್ಸೀಸ್).