Military Jet Crash | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕದ ಮಿಲಿಟರಿ ಜೆಟ್‌ಗಳನ್ನು ಹೊಡೆದುರುಳಿಸಿರುವುದು ಇರಾನ್ ಜೊತೆಗಿನ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ ಅವರು, ಇತ್ತೀಚಿನ ಬೆಳವಣಿಗೆಗಳು ರಾಜತಾಂತ್ರಿಕತೆಯನ್ನು ಹಳಿತಪ್ಪಿಸಬಹುದು ಎಂಬ ಕಳವಳಗಳನ್ನು ತಳ್ಳಿಹಾಕಿದ್ದಾರೆ.
ಅಮೆರಿಕದ ವಿಮಾನಗಳ ನಷ್ಟದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಖಂಡಿತವಾಗಿಯೂ ಇದು ಪರಿಣಾಮ ಬೀರಲ್ಲ. ನಾವು ಯುದ್ಧದಲ್ಲಿದ್ದೇವೆ ಎಂದು ಅವರು ಉತ್ತರಿಸುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿಹೇಳಿದರು.
ಪತನಗೊಂಡ ಜೆಟ್‌ಗೆ ಸಂಬಂಧಿಸಿದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಟ್ರಂಪ್ ನಿರಾಕರಿಸಿದ್ದು, ಅದು ಅತ್ಯಂತ ಸೂಕ್ಷ್ಮ ಹಾಗೂ ಸಕ್ರಿಯವಾಗಿದ್ದು, ಇಂತಹ ಸಂಕೀರ್ಣ ಮಿಲಿಟರಿ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಎರಡು ಮಿಲಿಟರಿ ವಿಮಾನಗಳು ಅಪಘಾತಕ್ಕೀಡಾಗಿದ್ದು, ಈ ಘಟನೆಯು ಗಲ್ಫ್ ವಲಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ವರದಿಗಳ ಪ್ರಕಾರ, ಇರಾನ್ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ F-15E ಸ್ಟ್ರೈಕ್ ಈಗಲ್ ವಿಮಾನವನ್ನು ಹೊಡೆದುರುಳಿಸಲಾಗಿದೆ. ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿಗಳ ಪೈಕಿ ಒಬ್ಬರನ್ನು ರಕ್ಷಿಸಲಾಗಿದೆ. ಆದರೆ, ಎರಡನೇ ಸಿಬ್ಬಂದಿಯ ಸ್ಥಿತಿಯ ಬಗ್ಗೆ ಗೊಂದಲದ ವರದಿಗಳು ಲಭ್ಯವಾಗುತ್ತಿವೆ. ಕೆಲವು ಮಾಧ್ಯಮಗಳು ಅವರು ಇರಾನ್ ವಶದಲ್ಲಿದ್ದಾರೆ ಎಂದು ವರದಿ ಮಾಡಿದರೆ, ಇನ್ನು ಕೆಲವು ವರದಿಗಳು ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಹೇಳುತ್ತಿವೆ.
ಮತ್ತೊಂದು ಅಮೆರಿಕನ್ ಯುದ್ಧ ವಿಮಾನ ಈ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಈ ಎರಡನೇ ವಿಮಾನವು ಅಪಘಾತಕ್ಕೀಡಾಗಿದೆಯೇ ಅಥವಾ ಇರಾನ್‌ನಿಂದ ಹೊಡೆದುರುಳಿಸಲ್ಪಟ್ಟಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನ್ಯೂಯಾರ್ಕ್ ಟೈಮ್ಸ್ ಕೂಡ ಈ ಎರಡನೇ ವಿಮಾನ ಪತನದ ಸುದ್ದಿಯನ್ನು ದೃಢಪಡಿಸಿದ್ದು, ಸಿಬ್ಬಂದಿಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಪ್ರಯತ್ನಗಳಿಗೆ ತೀವ್ರ ಹಿನ್ನಡೆಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಸ್ಥಾಪಿಸಲು ಪಾಕಿಸ್ತಾನ ಸೇರಿದಂತೆ ಪ್ರಾದೇಶಿಕ ದೇಶಗಳು ನಡೆಸುತ್ತಿದ್ದ ಮಧ್ಯಸ್ಥಿಕೆ ಪ್ರಯತ್ನಗಳು ಸ್ಥಗಿತಗೊಂಡಿವೆ. ಅಮೆರಿಕ ವಿಧಿಸಿರುವ ಬೇಡಿಕೆಗಳು ಸ್ವೀಕಾರಾರ್ಹವಲ್ಲ ಎಂದು ಇರಾನ್ ತಿಳಿಸಿದ್ದು, ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡಲು ನಿರಾಕರಿಸಿದೆ. ಈ ಬೆಳವಣಿಗೆಯು ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಆಶಯಕ್ಕೆ ದೊಡ್ಡ ಹೊಡೆತ ನೀಡಿದೆ ಎನ್ನಬಹುದು(ಏಜೆನ್ಸೀಸ್).