ವಿದೇಶ

ಟೆಕ್ಸಾಸ್​ನಿಂದ ಬಹಾಮಾಸ್​ಗೆ ತೆರಳುತ್ತಿದ್ದ ವಿಮಾನ ಪತನ; ಒಂಬತ್ತು ಮಂದಿ ಸಾವು..Florida

  • ಆಸ್ಟಿನ್-ಬರ್ಗ್‌ಸ್ಟ್ರಾಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ ಪತನ.

  • ವಿಮಾನದಲ್ಲಿದ್ದ ಎಲ್ಲಾ ಒಂಬತ್ತು ಜನರೂ ಮೃತಪಟ್ಟಿದ್ದಾರೆ ಎಂದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ.

  • ಜನವಸತಿ ಪ್ರದೇಶದ ಬಳಿ ವಿಮಾನ ಪತನಗೊಂಡಿದೆ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ.

ಫ್ಲೋರಿಡಾ: ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿನ ವಸತಿ ಪ್ರದೇಶವೊಂದರ ಬಳಿ ಭಾನುವಾರ ವಿಮಾನವೊಂದು ಪತನಗೊಂಡು ಒಂಭತ್ತು ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ. ವಿಮಾನವು ಮನೆ, ಕಾರುಗಳ ಸಮೀಪ ಪತನಗೊಂಡಿದ್ದರೂ ಸಹ ಪ್ರದೇಶದಲ್ಲಿದ್ದ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಫ್ಲೋರಿಡಾ ಗವರ್ನರ್​ ರಾನ್ ಡಿಸಾಂಟಿಸ್ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಅಲ್ಲಿನ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಆಸ್ಟಿನ್‌ನಿಂದ ಬಹಾಮಾಸ್‌ಗೆ ತೆರಳುತ್ತಿದ್ದ ಒಂಬತ್ತು ಪ್ರಯಾಣಿಕರಿದ್ದ ಲಿಯರ್‌ಜೆಟ್ 60 ವಿಮಾನವು, ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯ ಗ್ರೀನ್‌ಆಕರ್ಸ್ ಪ್ರದೇಶದಲ್ಲಿ ಮದ್ಯಾಹ್ನ 12:50 ರ ಸುಮಾರಿಗೆ ಪತನಗೊಂಡಿದೆ. ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಬೆಂಕಿನುಂಡೆಯಾಗಿ ಸ್ಫೋಟಗೊಂಡಿತ್ತು. ಸುತ್ತಲು ಬೆಂಕಿ ಕಾಣಿಸಿಕೊಂಡಿರುವ ದೃಶ್ಯಗಳು ಎಕ್ಸ್​​ನಲ್ಲಿ ವೈರಲ್ ಆಗಿದೆ.

ಸೂಕ್ತ ತನಿಖೆಗೆ ಸೂಚನೆ

ಈ ದುರಂತದ ಬಗ್ಗೆ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದೊಂದು ಭಯಾನಕ ದುರಂತ ಅಪಘಾತದ ಕಾರಣ ಪತ್ತೆ ಹಚ್ಚಲು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ(NTBS) ಈ ಬಗ್ಗೆ ಸೂಕ್ತ ತನಿಖೆ ನಡೆಸಲಿದೆ. ಫೆಡರಲ್​​ ವಿಮಾನಯಾನ ಆಡಳಿತದ(FAA) ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು, ತನಿಖೆಗೆ ನೆರವಾಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಘಟನೆಗೂ ಮುನ್ನ ಮಾತುಕತೆ

ಫ್ಲೈಟ್ ಪತನಗೊಳ್ಳುವ ಮುನ್ನ ಕಾಕ್​ಪಿಟ್​ನಲ್ಲಿ ಪೈಲಟ್​​ಗಳು ಮಾತನಾಡಿರುವ ಸಂಭಾಷಣೆಯ ಧ್ವನಿ ಮುದ್ರಣವನ್ನು LiveATC.net ಸಂಗ್ರಹಿಸಿದ್ದು, ವಿಮಾನದ ಮೇಲೆ ಮಂಜುಗಡ್ಡೆ ಶೇಖರಣೆಯಾಗುತ್ತಿರುವ ಸಮಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 700 ಅಡಿಗಳಷ್ಟು (213 ಮೀಟರ್) ಪ್ರಕ್ಷುಬ್ಧತೆ ಉಂಟಾಗುತ್ತಿರುವ ಬಗ್ಗೆ ಹಾಗೂ ಪರಿಸ್ಥಿತಿ ನಿಭಾಯಿಸುವ ಸ್ಥಿತಿಯಲ್ಲಿದೆ ಎಂತಲೂ ಹೇಳಿದ್ದರು. ಆನಂತರ ಸದ್ಯ ವಿಮಾನ ಕೆಳಕ್ಕೆ ವೇಗವಾಗಿ ಇಳಿಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಆತಂಕದಿಂದ ನಾವು ನೆಲಕ್ಕೆ ಅಪ್ಪಳಿಸುತ್ತಿದ್ದೇವೆ ಎಂದು ಕೂಗಾಡಿರುವುದು ಸಂಭಾಷಣೆಯಲ್ಲಿದೆ.

ಪೈಲಟ್ ಮೇ ಡೇ ತುರ್ತು ಸಂದೇಶ ನೀಡಿ, ವಿಮಾನದ ನಿಯಂತ್ರಣ ಕಳೆದುಕೊಳ್ಳುತ್ತಿರುವುದಾಗಿ ಮತ್ತು ಅತಿವೇಗದಲ್ಲಿ ಕೆಳಗೆ ಬೀಳುತ್ತಿರುವುದಾಗಿ ರೇಡಿಯೋ ಮೂಲಕ ತಿಳಿಸಿ ಅಂತಿಮವಾಗಿ ದುರಂತ ಸಂಭವಿಸಿತು.

ಟ್ರಂಪ್​ ನಿವಾಸದ ಬಳಿ ಪತನ

ವಿಮಾನ ಪತನಗೊಂಡ ಸ್ಥಳವು ಮಾರ್​ ಎ ಲಾಗೋ ನಿವಾಸದಿಂದ 11 ಕಿಲೋ ಮೀಟರ್​ ದೂರದಲ್ಲಿದೆ. ಟ್ರಂಪ್​​​ ಭಾನುವಾರ ಬೆಳಿಗ್ಗೆ ನಿವಾಸದಲ್ಲಿಯೇ ತಂಗಿದ್ದರು. ವಿಮಾನ ಪತನಗೊಳ್ಳುವ ಕೆಲವು ಗಂಟೆಯ ಹಿಂದೆ ಅವರು ಅಲ್ಲಿಂದ ನಿರ್ಗಮಿಸಿದ್ದರು, (ಏಜೆನ್ಸೀಸ್).