ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಯುವಕನನ್ನು ವರಿಸಿದ ಸಯಾಮಿ ಅವಳಿ: ಲೈಂಗಿಕತೆ ಕುರಿತ ಪ್ರಶ್ನೆಗಳಿಗೆ ಕೊಟ್ಟ ಉತ್ತರ ವೈರಲ್! Conjoined Twins
- ಸಯಾಮಿ ಅವಳಿ ಕಾರ್ಮೆನ್, ಡೇನಿಯಲ್ ಮೆಕ್‌ಕಾರ್ಮ್ಯಾಕ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ
- ಕಾರ್ಮೆನ್ ಮದುವೆಗೆ ಲುಪಿತಾ ಅವರ ಸಂಪೂರ್ಣ ಬೆಂಬಲವಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ
- ಆರೋಗ್ಯ ಸಮಸ್ಯೆ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಮಕ್ಕಳು ಮಾಡಿಕೊಳ್ಳದಿರಲು ಈ ಜೋಡಿ ನಿರ್ಧರಿಸಿದೆ
- ಖಾಸಗಿ ವಿಚಾರಗಳ ಬಗ್ಗೆ ಮುಜುಗರದ ಪ್ರಶ್ನೆ ಕೇಳುವವರಿಗೆ ಪತಿ ಡೇನಿಯಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ
Conjoined Twins : ಇಪ್ಪತೈದು ವರ್ಷದ ಕಾರ್ಮೆನ್ ಮತ್ತು ಲುಪಿತಾ ಆಂಡ್ರೇಡ್ ಎಂಬುವವರು ವಿಭಿನ್ನ ವ್ಯಕ್ತಿತ್ವ ಹೊಂದಿರುವ ಸಯಾಮಿ ಅವಳಿ ಸಹೋದರಿಯರು. ಸೊಂಟದ ಭಾಗದಿಂದ ಅಂಟಿಕೊಂಡಿರುವ ಇವರು ಒಂದೇ ರಕ್ತಪರಿಚಲನೆ ಮತ್ತು ಪ್ರಜನನ ವ್ಯವಸ್ಥೆಯನ್ನು ಹಂಚಿಕೊಂಡಿದ್ದರೂ, ಇಬ್ಬರಿಗೂ ಪ್ರತ್ಯೇಕ ಹೃದಯ ಮತ್ತು ಹೊಟ್ಟೆಗಳಿವೆ. ಈ ಇಬ್ಬರಲ್ಲಿ ಇತ್ತೀಚೆಗೆ ಕಾರ್ಮೆನ್ ವಿವಾಹವಾಗಿದ್ದು, ಈ ಬಗ್ಗೆ ಕೇಳಿಬಂದ ಟೀಕೆಗಳಿಗೆ ಹಾಗೂ ತಮ್ಮ ಮುಂದಿನ ಜೀವನ ಮತ್ತು ಮಕ್ಕಳು ಮಾಡಿಕೊಳ್ಳುವ ಪ್ಲಾನ್ಗಳ ಬಗ್ಗೆ ಸಹೋದರಿಯರು ಮುಕ್ತವಾಗಿ ಪ್ರತಿಕ್ರಿಯಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ, ಕಾರ್ಮೆನ್ ತನ್ನ ಒಂದು ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತಿ ಡೇನಿಯಲ್ ಮೆಕ್‌ಕಾರ್ಮ್ಯಾಕ್ ಅವರೊಂದಿಗೆ ಆಚರಿಸಿಕೊಂಡರು. ಅಂದಹಾಗೆ, ಈ ಜೋಡಿ 2020ರಲ್ಲಿ ಹಿಂಜ್ ಹೆಸರಿನ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದರು. ಇದಾದ ಬಳಿಕ ಇಬ್ಬರು ತಮ್ಮ ಆಪ್ತರ ಸಮ್ಮುಖದಲ್ಲಿ ವಿವಾಹವಾದರು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು ಕೂಡ ಸಹೋದರಿ ಲುಪಿತಾ ಈ ಸಂಬಂಧವನ್ನು ಬೆಂಬಲಿಸುತ್ತಿಲ್ಲ ಎಂದು ಆನ್‌ಲೈನ್‌ನಲ್ಲಿ ಕೆಲವರು ಆರೋಪಿಸಿದ್ದಾರೆ.
ಮೆಕ್ಸಿಕೋದಲ್ಲಿ ಜನಿಸಿದ ಈ ಸಯಾಮಿ ಸಹೋದರಿಯರು ಅಮೆರಿಕದ ಕನೆಕ್ಟಿಕಟ್ ರಾಜ್ಯದ ಒಂದು ಸಣ್ಣ ಪಟ್ಟಣದಲ್ಲಿ ಬೆಳೆದರು. ಇದೀಗ ತಮ್ಮ ಜೀವನದ ಅನೇಕ ಸಂಗತಿಗಳನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಇಬ್ಬರು ತೆರೆದಿಟ್ಟಿದ್ದಾರೆ.
ರೊಸನ್ನಾ ಪನ್ಸಿನೊ ಎಂಬುವರು ನಡೆಸಿಕೊಡುವ 'ರಾಡಿಕುಲಸ್ ಪಾಡ್‌ಕಾಸ್ಟ್'ನಲ್ಲಿ ಕಾರ್ಮೆನ್ ಮತ್ತು ಲುಪಿತಾ ತಮ್ಮ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರು ಯಾವಾಗಲೂ ಜಗಳವಾಡುತ್ತೇವೆ ಎಂಬುದು ಜನರ ತಪ್ಪು ತಿಳುವಳಿಕೆ ಎಂದು ಕಾರ್ಮೆನ್ ಹೇಳಿದರೆ, ತಾನು ಕಾರ್ಮೆನ್ ಪತಿಯನ್ನು ದ್ವೇಷಿಸುತ್ತೇನೆ ಎಂಬ ವದಂತಿಯನ್ನು ಲುಪಿತಾ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಈ ವ್ಯಕ್ತಿ ಒಳ್ಳೆಯವನಂತೆ ಕಾಣುತ್ತಾನೆ, ಇವನನ್ನೇ ಆಯ್ಕೆ ಮಾಡಿಕೊ" ಎಂದು ಕಾರ್ಮೆನ್‌ಗೆ ಸಲಹೆ ನೀಡಿದ್ದೇ ನಾನು ಎಂದು ಹೇಳುವ ಮೂಲಕ ಲುಪಿತಾ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತನ್ನ ಮತ್ತು ಡೇನಿಯಲ್ ಸಂಬಂಧದ ಬಗ್ಗೆ ಲುಪಿತಾಗೆ ಯಾವುದೇ ಕಹಿ ಭಾವನೆ ಇಲ್ಲವೆಂದು ಸ್ಪಷ್ಟಪಡಿಸಿದ ಕಾರ್ಮೆನ್, ನನ್ನ ತಂಗಿ ಲುಪಿತಾ ನನಗೆ ಬೆಂಬಲವಾಗಿ ನಿಲ್ಲುತ್ತಾಳೆ ಎಂದು ಹೇಳಿದ್ದಾರೆ. ಲುಪಿತಾ ಈಗ ಡೇನಿಯಲ್‌ನನ್ನು ತನ್ನ ಸ್ವಂತ ಸಹೋದರನಂತೆ ಪ್ರೀತಿಸುತ್ತಿದ್ದಾಳೆ. ಆದರೆ, ಕಾರ್ಮೆನ್‌ನ ಹಳೆಯ ಪ್ರೇಮಿಯ ಬಗ್ಗೆ ಲುಪಿತಾಗೆ ಅಸಮಾಧಾನವಿದೆ. ಆತನನ್ನು ಭಯಾನಕ ವ್ಯಕ್ತಿ ಎಂದು ಕರೆದಿದ್ದಲ್ಲದೆ, ನಾನು ಆತನನ್ನು ದ್ವೇಷಿಸುತ್ತೇನೆ ಎಂದು ಲುಪಿತಾ ನೇರವಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮೆನ್, ನಮ್ಮ ಕುಟುಂಬದಲ್ಲಿ ಯಾರೂ ಕೂಡ ಸತ್ಯವನ್ನು ಹೇಳಲು ಹಿಂಜರಿಯುವುದಿಲ್ಲ ಎಂದು ಮುಗುಳ್ನಕ್ಕರು. ಇನ್ನು ಡೇನಿಯಲ್ ಜೊತೆ ಮುಂದಿನ ದಿನಗಳಲ್ಲಿ ಮಕ್ಕಳನ್ನು ಹೊಂದುವ ಬಗ್ಗೆಯೂ ಕಾರ್ಮೆನ್ ಬಹಳ ಆಲೋಚಿಸಿ ಉತ್ತರಿಸಿದ್ದಾರೆ.
ಕಾರ್ಮೆನ್ ತನ್ನ ಮತ್ತು ತನ್ನ ಸಂಗಾತಿಯ ನಿರ್ಧಾರದ ಬಗ್ಗೆ ಮುಕ್ತವಾಗಿ ತಿಳಿಸಿದ್ದಾರೆ. ನಮಗೆ ಮಕ್ಕಳಾಗುವ ಸಾಧ್ಯತೆ ಇಲ್ಲದಿರುವುದು ಮತ್ತು ಬಾಲ್ಯದಿಂದಲೂ ಪೋಷಕರಾಗಬೇಕೆಂಬ ಆಸೆ ತನಗಿಲ್ಲದಿರುವುದನ್ನು ಕಾರ್ಮೆನ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಬೇಬಿ ಸಿಟ್ಟಿಂಗ್ ಮತ್ತು ಮಕ್ಕಳ ಕ್ಯಾಂಪ್‌ಗಳಲ್ಲಿ ಕೆಲಸ ಮಾಡಿದ ಅನುಭವವು, ತಾನು ಮಕ್ಕಳನ್ನು ಸಾಕಲು ಯೋಗ್ಯಳಲ್ಲ ಎಂಬ ನಿರ್ಧಾರಕ್ಕೆ ಬರಲು ಅವರಿಗೆ ಸಹಾಯ ಮಾಡಿದೆ. ಎಂಡೊಮೆಟ್ರಿಯೊಸಿಸ್ ನೋವಿನಿಂದ ಬಳಲುತ್ತಿರುವ ನಾನು, ಪೋಷಕರ ಜವಾಬ್ದಾರಿಯನ್ನು ತುಂಬಾ ಗೌರವಿಸುತ್ತೇನೆ. ಆದರೆ, ನಾನು ಆ ಜವಾಬ್ದಾರಿಯಲ್ಲಿ ಸೋಲುವ ಮೂಲಕ ಮಗುವಿನ ಜೀವನವನ್ನು ಹಾಳುಮಾಡಲು ಇಷ್ಟಪಡುವುದಿಲ್ಲ ಎಂದು ಕಾರ್ಮೆನ್ ತಿಳಿಸಿದ್ದಾರೆ.
ಅಂದಹಾಗೆ, ಕಾರ್ಮೆನ್ ಮತ್ತು ಲುಪಿತಾ ಎಂಬ ಸಯಾಮಿ ಅವಳಿ ಸಹೋದರಿಯರು ಹುಟ್ಟಿದಾಗ ಕೇವಲ ಮೂರು ದಿನಗಳ ಕಾಲ ಮಾತ್ರ ಬದುಕುತ್ತಾರೆ ಎಂದು ವೈದ್ಯರು ಹೇಳಿದ್ದರು. ಆದರೆ, ಇಂದು ಅವರು ಪ್ರಾಣಿಗಳನ್ನು ಆರೈಕೆ ಮಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿ ಸಾಧನೆ ಮಾಡಿದ್ದಾರೆ. ಇದರ ನಡುವೆ, ಕೆಲ ಜನರು ಕಾರ್ಮೆನ್ ಮತ್ತು ಡೇನಿಯಲ್ ಅವರ ಖಾಸಗಿ ಜೀವನದ ಬಗ್ಗೆ ಅಸಭ್ಯ ಮತ್ತು ಮುಜುಗರದ ಪ್ರಶ್ನೆಗಳನ್ನು ಕೇಳುತ್ತಾರಂತೆ. ಇದಕ್ಕೆ ಡೇನಿಯಲ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದು, ಇದು ನಮ್ಮ ವೈಯಕ್ತಿಕ ವಿಷಯ, ಬೇರೆಯವರಿಗೆ ಸಂಬಂಧಿಸಿದ್ದಲ್ಲ ಎನ್ನುವ ಮೂಲಕ ಜನರ ಅತಿಯಾದ ಕುತೂಹಲವನ್ನು ಖಂಡಿಸಿದ್ದಾರೆ, (ಏಜೆನ್ಸೀಸ್).