ಉತ್ತರ ಕೊರಿಯಾ: ಪ್ರತಿಯೊಬ್ಬ ಮಹಿಳೆಯೂ ಸೌಂದರ್ಯದಿಂದ ಕಾಣಬೇಕು ಎಂಬ ಆಸೆ ಸಾಮಾನ್ಯವಾಗಿರುತ್ತದೆ. ಅದಕ್ಕಾಗಿ ಅವರು ಅಂದವಾಗಿ ಕಾಣುವಂತೆ ಮೇಕಪ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಮಹಿಳೆಯರಿಗೆ ಕೆಂಪು ಲಿಪ್‌ಸ್ಟಿಕ್ (Red Lipstick) ಎಂದರೆ ಸೌಂದರ್ಯ ಮತ್ತು ಆತ್ಮವಿಶ್ವಾಸದ ಸಂಕೇತ. ಆದರೆ, ವಿಶ್ವದ ಭೂಪಟದಲ್ಲಿ ಸೌಂದರ್ಯಕ್ಕೂ ನಿಷೇಧ ಇರುವ ದೇಶವೊಂದಿದೆ. ಅದು ಯಾವುದು ಅಂತೀರಾ? ಅದುವೇ ಕಿಮ್ ಜಾಂಗ್ ಉನ್ ಆಡಳಿತದ ಉತ್ತರ ಕೊರಿಯಾ ಇಲ್ಲಿ ಮಹಿಳೆಯರು ಕೆಂಪು ಲಿಪ್‌ಸ್ಟಿಕ್ ಬಳಸುವುದನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ.
ಕೆಂಪು ಬಣ್ಣಕ್ಕೇಕೆ ನಿಷೇಧ?
ಉತ್ತರ ಕೊರಿಯಾದಲ್ಲಿ ಕೆಂಪು ಬಣ್ಣವನ್ನು ಬಂಡಾಯ, ಬಂಡವಾಳಶಾಹಿ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಲ್ಲಿನ ಮಹಿಳೆಯರು ಗಾಢ ಕೆಂಪು ಬಣ್ಣದ ಲಿಪ್‌ಸ್ಟಿಕ್ ಧರಿಸುವುದರಿಂದ ಅಲ್ಲಿನ ಕಟ್ಟುನಿಟ್ಟಾದ ಸಮಾಜವಾದಿ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಮಹಿಳೆಯರು ಕೇವಲ ತಿಳಿ ಬಣ್ಣದ ಅಥವಾ ನೈಸರ್ಗಿಕವಾಗಿ ಕಾಣುವ ಬಣ್ಣಗಳನ್ನು ಮಾತ್ರ ಬಳಸುವಂತೆ ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ.
ಆದಾಗ್ಯೂ, ಮಹಿಳೆಯರು ಆಕರ್ಷಕವಾಗಿ ಬಟ್ಟೆಗಳನ್ನು ಧರಿಸುವುದನ್ನು ಸಮಾಜವಾದಿ ಮೌಲ್ಯಗಳಿಗೆ ಅನುಗುಣವಾಗಿಲ್ಲ ಎಂದು ಹೇಳುತ್ತಾರೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ 'ಬ್ಲೂ ಜೀನ್ಸ್' ಅಥವಾ ಸ್ಕಿನ್ನಿ ಫಿಟ್ ಜೀನ್ಸ್‌ಗಳನ್ನು ಧರಿಸುವಂತಿಲ್ಲ. ಈ ಸಂಬಂಧ ನಾಗರಿಕರು ಸರಿಯಾದ ಉಡುಗೆಗಳನ್ನು ತೊಟ್ಟಿದ್ದಾರೆಯೇ ಅಥವಾ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು 'ಫ್ಯಾಷನ್ ಪೊಲೀಸ್' ಎಂಬ ವಿಶೇಷ ತಂಡವನ್ನು ಹೊಂದಿದೆ.
ಇದಷ್ಟೇ ಅಲ್ಲದೇ, ಅಲ್ಲಿನ ಪುರುಷರು ಮತ್ತು ಮಹಿಳೆಯರು ಸರ್ಕಾರ ಅನುಮೋದಿಸಿದ ನಿರ್ದಿಷ್ಟ ಕೇಶ ವಿನ್ಯಾಸವನ್ನು ಮಾತ್ರ ಮಾಡಿಸಿಕೊಳ್ಳಬೇಕು. ಉದ್ದನೆಯ ಕೂದಲು ಬಿಡುವುದು ಅಥವಾ ವಿಭಿನ್ನವಾಗಿ ಕೂದಲನ್ನು ಬಿಡುವುದು ಕೂಡಾ ಅಪರಾಧವಾಗಿದ್ದು, ಈ ರೀತಿಯ ವರ್ತನೆಗಳು ಕಂಡುಬಂದರೆ, ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಕಿಮ್ ಜಾಂಗ್ ಉನ್ ಅವರ ಸರ್ವಾಧಿಕಾರಿ ಧೋರಣೆ ಮತ್ತು ವಿಚಿತ್ರ ಆದೇಶಗಳಿಗೆ ಹೆಸರುವಾಸಿ ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರಿಂದ ಅಲ್ಲಿನ ಜನರು ಅವರ ವಿರುದ್ಧ ಮಾತನಾಡಲು ಧೈರ್ಯ ಮಾಡುವುದಿಲ್ಲ (ಏಜೆನ್ಸೀಸ್).