ನಾವು ಸಾಯಲ್ಲ, ನೀವೇ ಅಂತ್ಯವಾಗ್ತೀರಿ! ಗಲ್ಫ್ ರಾಷ್ಟ್ರಗಳಿಗೆ ಇರಾನ್ ವಿದೇಶಾಂಗ ಸಚಿವ ನೀಡಿದ ಆ ಭೀಕರ ಎಚ್ಚರಿಕೆ ಹಿಂದಿನ ಮರ್ಮಾವೇನು?
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಮಹಾಸಮರ ಈಗ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಇರಾನ್‌ನ ದಕ್ಷಿಣ ಕರಾವಳಿಯಲ್ಲಿರುವ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಶನಿವಾರ ನಾಲ್ಕನೇ ಬಾರಿಗೆ ದಾಳಿ ನಡೆಸಿವೆ. ಈ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ(Abbas Araghchi), ಗಲ್ಫ್ ರಾಷ್ಟ್ರಗಳಿಗೆ ಬೆಚ್ಚಿಬೀಳಿಸುವ ಎಚ್ಚರಿಕೆ ನೀಡಿದ್ದು, ಪರಮಾಣು ವಿಕಿರಣ ಸೋರಿಕೆಯಾದರೆ ಅದು ಟೆಹ್ರಾನ್ ಅನ್ನು ಮಾತ್ರವಲ್ಲ, ಇಡೀ ಗಲ್ಫ್ ರಾಷ್ಟ್ರಗಳ ರಾಜಧಾನಿಗಳನ್ನೇ ಸರ್ವನಾಶ ಮಾಡಲಿದೆ ಎಂದು ಗುಡುಗಿದ್ದಾರೆ.
ಬುಶೆಹರ್ ಮೇಲೆ ಕ್ಷಿಪಣಿ ದಾಳಿ: ಒಬ್ಬನ ಸಾವು
ಶನಿವಾರ ಮುಂಜಾನೆ ನಡೆದ ದಾಳಿಯಲ್ಲಿ ಬುಶೆಹರ್ ಪರಮಾಣು ಸ್ಥಾವರದ ಪರಿಧಿಯೊಳಗೆ ಕ್ಷಿಪಣಿಯೊಂದು ಅಪ್ಪಳಿಸಿದೆ. ಈ ಘಟನೆಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ 'ತಸ್ನಿಮ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಾನಿಯ ವಿವರ: ದಾಳಿಯಿಂದಾಗಿ ಸ್ಥಾವರದ ಪ್ರಮುಖ ಘಟಕಕ್ಕೆ ಹಾನಿಯಾಗಿಲ್ಲವಾದರೂ, ಪೂರಕ ಕಟ್ಟಡವೊಂದು ಧ್ವಂಸಗೊಂಡಿದೆ.
ವಿಕಿರಣ ಭೀತಿ: ಕಟ್ಟಡಕ್ಕೆ ಹಾನಿಯಾಗಿರುವುದು ವಿಕಿರಣ ಸೋರಿಕೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಈ ಸ್ಥಾವರವು ರಷ್ಯಾದ ನೆರವಿನಿಂದ ನಿರ್ಮಾಣವಾಗಿದ್ದು, ಸುಮಾರು 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇರಾನ್ ವಿದೇಶಾಂಗ ಸಚಿವರ ಕಠಿಣ ಎಚ್ಚರಿಕೆ
ಪರಮಾಣು ಸ್ಥಾವರದ ಮೇಲಿನ ದಾಳಿಯನ್ನು ಖಂಡಿಸಿರುವ ವಿದೇಶಾಂಗ ಸಚಿವ ಅರಾಗ್ಚಿ, ಪಾಶ್ಚಿಮಾತ್ಯ ದೇಶಗಳ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. ಯುಕ್ರೇನ್‌ನ ಝಪೋರಿಝಿಯಾ ಪರಮಾಣು ಸ್ಥಾವರದ ಮೇಲೆ ದಾಳಿಯಾದಾಗ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತಪಡಿಸಿದವರು, ಈಗ ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿಯಾಗುತ್ತಿದ್ದರೂ ಮೌನವಾಗಿದ್ದಾರೆ ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ವಿಕಿರಣ ಹರಡಿದರೆ ಅದರ ನೇರ ಪರಿಣಾಮ ಅಬುಧಾಬಿ, ರಿಯಾದ್ ಮತ್ತು ಕುವೈತ್‌ನಂತಹ ಗಲ್ಫ್ ನಗರಗಳ ಮೇಲೆ ಬೀರುತ್ತದೆ, ಇದು ಅಲ್ಲಿನ ಜೀವನವನ್ನೇ ಅಂತ್ಯಗೊಳಿಸಬಹುದು ಎಂದು ಎಚ್ಚರಿಸಿದ್ದಾರೆ.
ಟ್ರಂಪ್‌ರಿಂದ 'ಆಪರೇಷನ್ ಎಪಿಕ್ ಫ್ಯೂರಿ' ತೀವ್ರಗೊಳಿಸುವ ಮುನ್ಸೂಚನೆ
ಈ ಬಗ್ಗೆ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ಸೇನೆ ಇನ್ನೂ ಇರಾನ್ ಅನ್ನು ಪೂರ್ತಿ ಧ್ವಂಸ ಮಾಡಿಲ್ಲ. ಮುಂದಿನ ಗುರಿ ಇರಾನ್‌ನ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳಾಗಿವೆ. ಅಲ್ಲದೆ, ಹೊಸ ಆಡಳಿತಕ್ಕೆ ಏನು ಮಾಡಬೇಕು ಎಂಬುದು ಗೊತ್ತು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ವಿಮಾನ ಪತನದ ಬಗ್ಗೆ ಉದಾಸೀನ: ಅಮೆರಿಕದ ಯುದ್ಧ ವಿಮಾನಗಳು ಇರಾನ್‌ನಿಂದ ಪತನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ಇದು ಯುದ್ಧ, ಇಲ್ಲಿ ವಿಮಾನಗಳು ಬೀಳುವುದು ಸಹಜ. ಇದು ಮಾತುಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಸಡ್ಡೆ ತೋರಿದ್ದಾರೆ.
ಇರಾನ್‌ನ ಪ್ರತಿದಾಳಿಯ ಬೆದರಿಕೆ
ಅಮೆರಿಕದ ಬೆದರಿಕೆಗೆ ಪ್ರತಿಯಾಗಿ ಇರಾನ್‌ನ ಸಶಸ್ತ್ರ ಪಡೆಗಳ ಕೇಂದ್ರ ಕಛೇರಿಯು ಕಠಿಣ ಸಂದೇಶ ರವಾನಿಸಿದೆ. ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಮತ್ತು ಇಸ್ರೇಲ್‌ನ ಎಲ್ಲಾ ಸೇನಾ ನೆಲೆಗಳ ಮೇಲೆ ಭೀಕರ ದಾಳಿ ನಡೆಸಲಾಗುವುದು ಎಂದು ಇರಾನ್ ವಕ್ತಾರ ಇಬ್ರಾಹಿಂ ಝೋಲ್ಫಾಘರಿ ತಿಳಿಸಿದ್ದಾರೆ. ವಿಶೇಷವಾಗಿ ಅಮೆರಿಕಕ್ಕೆ ನೆಲೆ ನೀಡಿರುವ ನೆರೆ ರಾಷ್ಟ್ರಗಳಿಗೂ ಈ ಎಚ್ಚರಿಕೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಯೂರೇನಿಯಂ ಸಮೃದ್ಧಿ ಮತ್ತು ಯುದ್ಧದ ಉದ್ದೇಶ
ಅಮೆರಿಕ ಮತ್ತು ಇಸ್ರೇಲ್ ಈ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿವೆ. ಇರಾನ್ ಈಗಾಗಲೇ ಶೇ. 60 ಕ್ಕಿಂತ ಹೆಚ್ಚು ಪುಷ್ಟೀಕರಿಸಿದ ಯೂರೇನಿಯಂ ಅನ್ನು ಸಂಗ್ರಹಿಸಿದೆ, ಇದು ಪರಮಾಣು ಬಾಂಬ್ ತಯಾರಿಸಲು ಸಾಕಾಗುತ್ತದೆ ಎಂಬುದು ಅವರ ವಾದವಾಗಿದ್ದು. ಹೀಗಾಗಿ, ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದೇ ಈ ಯುದ್ಧದ ಮುಖ್ಯ ಗುರಿಯಾಗಿದೆ ಎಂದು ವೈಟ್ ಹೌಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಶೆಹರ್ ಪರಮಾಣು ಸ್ಥಾವರದ ಮೇಲಿನ ದಾಳಿಯು ಕೇವಲ ಇರಾನ್ ಮತ್ತು ಅಮೆರಿಕದ ನಡುವಿನ ಕದನವಲ್ಲ, ಇದು ಇಡೀ ಮಧ್ಯಪ್ರಾಚ್ಯದ ಪರಿಸರ ಮತ್ತು ಜನರ ಜೀವಕ್ಕೆ ಸಂಚಕಾರ ತರುವಂತಿದೆ. ವಿಕಿರಣ ಸೋರಿಕೆಯಾದರೆ ಅದು ಯಾವುದೇ ಗಡಿಗಳನ್ನು ನೋಡುವುದಿಲ್ಲ. ಟ್ರಂಪ್ ಅವರ ಶಿಲಾಯುಗಕ್ಕೆ ಕಳುಹಿಸುವ ಹಠ ಮತ್ತು ಇರಾನ್‌ನ ಪ್ರತಿಯೊಬ್ಬರ ಪ್ರಾಣವನ್ನಾದರೂ ಪಣಕ್ಕಿಡುವ ಹಠಮಾರಿ ಧೋರಣೆ ಜಗತ್ತನ್ನು ಮತ್ತೊಂದು ದೊಡ್ಡ ದುರಂತದತ್ತ ತಳ್ಳುತ್ತಿದೆ,(ಏಜೆನ್ಸೀಸ್).