ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(DonaldTrump) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ, ಅಗತ್ಯ ಬಿದ್ದರೆ ಅಮೆರಿಕದ ಭೂ ಸೇನಾ ಪಡೆಗಳನ್ನು (Ground Troops) ಇರಾನ್‌ಗೆ ಕಳುಹಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ.
'ನ್ಯೂಯಾರ್ಕ್ ಪೋಸ್ಟ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ನಾನು ನೆಲದ ಪಡೆಗಳನ್ನು ಕಳುಹಿಸುವುದನ್ನು ತಳ್ಳಿಹಾಕುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ. "ಸಾಮಾನ್ಯವಾಗಿ ಎಲ್ಲಾ ಅಧ್ಯಕ್ಷರು 'ನಾವು ನೆಲದ ಮೇಲೆ ಪಡೆಗಳನ್ನು(ಭೂಸೇನಾ) ಕಳುಹಿಸುವುದಿಲ್ಲ' ಎಂದು ಹೇಳುತ್ತಾರೆ. ಆದರೆ ನಾನು ಹಾಗೆ ಹೇಳುವುದಿಲ್ಲ. ಅಗತ್ಯ ಬಿದ್ದರೆ ನಾವು ಅದನ್ನು ಮಾಡುತ್ತೇವೆ," ಎಂದು ಅವರು ತಿಳಿಸಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನೆಲದ ಪಡೆಗಳ ಅವಶ್ಯಕತೆ ಇಲ್ಲದಿರಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರದಿಂದ ಇರಾನ್ ವಿರುದ್ಧ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಆರಂಭವಾಗಿದೆ. ಇರಾನ್‌ನ ಪರಮಾಣು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಗಳನ್ನು ನಡೆಸುತ್ತಿವೆ. ಈ ನಡುವೆ, ಇರಾನ್ ಕೂಡ ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳನ್ನು ತೀವ್ರಗೊಳಿಸಿದೆ.
ಜಾಗತಿಕ ಪ್ರತಿಕ್ರಿಯೆ ಮತ್ತು ಆತಂಕ
ಟ್ರಂಪ್ ಅವರ ಈ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇರಾನ್‌ನಲ್ಲಿ ಅಮೆರಿಕದ ಪಡೆಗಳ ನಿಯೋಜನೆಯು ಯುದ್ಧವನ್ನು ಮತ್ತಷ್ಟು ವಿಸ್ತರಿಸಬಹುದು ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ,(ಏಜೆನ್ಸೀಸ್).