ವಾಷಿಂಗ್ಟನ್: ಗ್ರೀನ್ಲ್ಯಾಂಡ್ನ ಮೇಲಿನ ಡೆನ್ಮಾರ್ಕ್ನ ಸಾರ್ವಭೌಮತ್ವವನ್ನು ಪಕ್ಕಕ್ಕೆ ಸರಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಳ್ಳೆಯ ರೀತಿಯಲ್ಲೋ, ಕೆಟ್ಟ ರೀತಿಯಲ್ಲೋ, ಅವರು ಇಷ್ಟಪಡಲಿ, ಪಡದೇ ಇರಲಿ ನಾವು ಮಾತ್ರ ಅದನ್ನು ವಶಕ್ಕೆ ಪಡೆದುಕೊಳ್ತೇವೆ ಎಂದು ಹೇಳಿದ್ದಾರೆ.
ವೆನಿಜುವೆಲಾವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿನ ತೈಲದ ಲಾಭಕ್ಕಾಗಿ ಶ್ವೇತಭವನದಲ್ಲಿ ತಮ್ಮ ದೇಶದ ತೈಲ ನಿರ್ವಾಹಕರೊಂದಿಗೆ ಸಭೆ ನಡೆಸಿರುವ ಟ್ರಂಪ್, ನಾನು ಸುಲಭವಾದ ರೀತಿಯಲ್ಲಿ ಗ್ರೀನ್ ಲ್ಯಾಂಡ್ ಪಡೆಯಲು ಒಪ್ಪಂದ ಮಾಡಿಕೊಳ್ಳಲು ಬಯಸುತ್ತೇನೆ. ಆದರೆ ಅದು ಸುಲಭವಾದ ರೀತಿಯಲ್ಲಿ ಆಗದಿದ್ದರೆ ಬಲ ಪ್ರಯೋಗದ ಮೂಲಕ ವಶಪಡಿಸಿಕೊಳ್ತೇವೆ ಎಂದಿದ್ದಾರೆ.
ಆರ್ಕ್ಟಿಕ್‌ನಲ್ಲಿ ರಷ್ಯಾ ಮತ್ತು ಚೀನಾದ ಮಿಲಿಟರಿ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಖನಿಜ ಸಮೃದ್ಧ ದ್ವೀಪವನ್ನು ನಿಯಂತ್ರಿಸುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾಗಿದೆ. ನಾವು ರಷ್ಯಾ ಅಥವಾ ಚೀನಾಕ್ಕೆ ಗ್ರೀನ್ಲ್ಯಾಂಡ್ ಆಕ್ರಮಿಸಲು ಬಿಡುವುದಿಲ್ಲ. ನಾವು ಆಕ್ರಮಿಸದಿದ್ದರೆ, ಅವರು ಆಕ್ರಮಿಸಿಕೊಳ್ತಾರೆ. ಆದ್ದರಿಂದ ಗ್ರೀನ್ಲ್ಯಾಂಡ್ನ್ನು ನಾವೇ ವಶಕ್ಕೆ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಗ್ರೀನ್ಲ್ಯಾಂಡ್ನಲ್ಲಿ ಹಕ್ಕು ಸಾಧಿಸಲು ಹೊರಟಿರುವ ಅಮೆರಿಕಾದ ಬೆದರಿಕೆಗೆ ಡೆನ್ಮಾರ್ಕ್ & ಇತರೆ ಯುರೋಪಿಯನ್ ಮಿತ್ರ ರಾಷ್ಟ್ರಗಳು ಆಘಾತ ವ್ಯಕ್ತಪಡಿಸಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಡೆನ್ಮಾರ್ಕ್ ಒಂದು ವೇಳೆ ಅಮೆರಿಕವು ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ತಂದು ಆಕ್ರಮಣ ಮಾಡಲು ಮುಂದಾದರೆ, ಅಲ್ಲಿನ ಸೈನಿಕರು "ಮೊದಲು ಗುಂಡು ಹಾರಿಸಿ, ನಂತರ ಪ್ರಶ್ನಿಸುವ" ಆದೇಶವನ್ನು ಪಾಲಿಸಲಿದ್ದಾರೆ ಎಂದು ಎಚ್ಚರಿಸಿದೆ (ಏಜೆನ್ಸೀಸ್).