ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕ್ ಪಕ್ಷ ಸೋಲನ್ನು ಕಂಡಿದೆ. ದೇಶದಲ್ಲಿ ಇಷ್ಟೊಂದು ದೊಡ್ಡ ಮುಖಭಂಗವಾದರೂ ಇರಾನ್ ಮೇಲಿನ ದ್ವೇಷ ಇನ್ನು ಕಡಿಮೆಯಾಗಿಲ್ಲ. "ಇರಾನ್ನ ಇಂಚಿಂಚೂ ನೆಲವನ್ನು ಧ್ವಂಸ ಮಾಡುತ್ತೇವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಕಿ ಉಗುಳಿದ್ದಾರೆ.
ಆದರೆ, ಇರಾನ್ ಜಾಣ್ಮೆಯ ಹೆಜ್ಜೆಯಿಟ್ಟು ವಾಷಿಂಗ್ಟನ್ಗೆ ಹೊಸದೊಂದು ಪರಮಾಣು ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದರೆ, ಈ ಆಫರ್ ಹಿಂದೆ ಇರಾನ್ ಅಮೆರಿಕದ ಮುಂದೆ ಇಟ್ಟಿರುವ ಷರತ್ತುಗಳು ಈಗ ಜಗತ್ತಿನ ನಿದ್ದೆಗೆಡಿಸಿವೆ.
ಕತಾರ್ ಮಧ್ಯಸ್ಥಿಕೆಯಲ್ಲಿ ರವಾನೆಯಾಗಿರುವ ಈ ರಹಸ್ಯ ಪ್ರಸ್ತಾವನೆಯಲ್ಲಿ, "ನಾವು ಇಟ್ಟಿರುವ 7 ಷರತ್ತುಗಳನ್ನು ಅಮೆರಿಕ ಸಂಪೂರ್ಣವಾಗಿ ಈಡೇರಿಸಿದರೆ ಮಾತ್ರ ಮಾತುಕತೆ ಸಾಧ್ಯ. ಇಲ್ಲದಿದ್ದರೆ ಜಾಗತಿಕ ತೈಲ ಸಾಗಣೆಯ ಜೀವನಾಡಿ ಹೊರ್ಮುಜ್ ಜಲಸಂಧಿಯನ್ನು ತೆರೆಯುವ ಮಾತೇ ಇಲ್ಲ" ಎಂದು ಇರಾನ್ ಸ್ಪಷ್ಟ ಸಂದೇಶ ರವಾನಿಸಿದೆ.
ವರದಿ ಪ್ರಕಾರ, ಇರಾನ್, ಕತಾರ್ ಮೂಲಕ ಅಮೆರಿಕಕ್ಕೆ ಈ ಪ್ರಸ್ತಾವನೆ ತಲುಪಿದ್ದು, ವಾಷಿಂಗ್ಟನ್ ಇದರ ಪರಿಶೀಲನೆ ನಡೆಸುತ್ತಿದೆ. ಆದರೆ ಒಳಗೆ ಏನಿದೆ ಎಂಬ ಗುಟ್ಟನ್ನು ಇನ್ನುವರೆಗೆ ಬಿಟ್ಟುಕೊಟ್ಟಿಲ್ಲ.
ಇರಾನ್ನ ಉನ್ನತ ಭದ್ರತಾ ಅಧಿಕಾರಿ ಮೊಹ್ಸೆನ್ ರೆಜೈ ಈ ಬಗ್ಗೆ ನೇರವಾಗಿಯೇ ಎಚ್ಚರಿಕೆ ರವಾನಿಸಿದ್ದು, "ರಾಜತಾಂತ್ರಿಕತೆ ಇರಲಿ, ಯುದ್ಧವೇ ಇರಲಿ, ನಾವು ಅಮೆರಿಕದ ಮುಂದೆ 7 ಷರತ್ತುಗಳನ್ನು ಸ್ಪಷ್ಟವಾಗಿ ಇಟ್ಟಿದ್ದೇವೆ. ಅವರು ಇವುಗಳನ್ನು ಒಪ್ಪಿಕೊಳ್ಳದಿದ್ದರೆ ಮೊರ್ಮುಜ್ ಜಲಸಂಧಿ ತೆರೆಯುವುದೂ ಇಲ್ಲ, ಮಾತುಕತೆ ಬರುವುದೂ ಇಲ್ಲ" ಎಂದು ಗುಡುಗಿದ್ದಾರೆ. ವಿಶ್ವದ ಶೇಕಡಾ 20 ಕ್ಕೂ ಹೆಚ್ಚು ಕಚ್ಚಾ ತೈಲ ಸಾಗುವ ಹೊರ್ಮುಜ್ ಜಲಸಂಧಿಯನ್ನೇ ಅಸ್ತ್ರವಾಗಿಸಿಕೊಂಡು ಇರಾನ್ ಈಗ ಅಮೆರಿಕಕ್ಕೆ ಸವಾಲೆಸೆದಿದೆ.
ಮಾಹಿತಿ ಪ್ರಕಾರ, ಟೆಹ್ರಾನ್ ಅಮೆರಿಕದ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳ ಪಟ್ಟಿ ಹೀಗಿದೆ:
ಲೆಬನಾನ್ ಯುದ್ಧಕ್ಕೆ ಫುಲ್ಸ್ಟಾಪ್: ಲೆಬನಾನ್ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ನೌಕಾ ದಿಗ್ಬಂಧನ ತೆರವು: ಇರಾನ್ನ ಪ್ರಮುಖ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಬೇಕು.
ನಿರ್ಬಂಧಗಳ ರದ್ದು: ಇರಾನ್ ಮೇಲೆ ಹೇರಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ರದ್ದುಗೊಳಿಸಬೇಕು.
ಆಸ್ತಿ ಬಿಡುಗಡೆ: ವಿದೇಶಗಳಲ್ಲಿ ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ನ ಬಿಲಿಯನ್ಗಟ್ಟಲೆ ಡಾಲರ್ ಮೌಲ್ಯದ ಆಸ್ತಿಯನ್ನು ಮುಕ್ತಗೊಳಿಸಬೇಕು.
ಅಮೆರಿಕ ಸೇನೆ ವಾಪಸ್: ಮಧ್ಯಪ್ರಾಚ್ಯ ಭಾಗದಲ್ಲಿ ಬೀಡುಬಿಟ್ಟಿರುವ ಅಮೆರಿಕದ ಸೇನಾ ಪಡೆಯನ್ನು ಗಣನೀಯವಾಗಿ ಕಡಿತಗೊಳಿಸಬೇಕು.
ಯುದ್ಧ ನಷ್ಟ ಪರಿಹಾರ: ಈವರೆಗೆ ನಡೆದಿರುವ ದಾಳಿ ಮತ್ತು ಹಾನಿಗೆ ಅಮೆರಿಕವೇ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು.
ದಾಳಿಗೆ ಬ್ರೇಕ್: ಇರಾನ್ ಭೂಪ್ರದೇಶದ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು.
ಇತ್ತ ವಾಷಿಂಗ್ಟನ್ ಮಾತ್ರ, ಯಾವುದೇ ಶಾಂತಿ ಮಾತುಕತೆ ಶುರುವಾಗಬೇಕಿದ್ದರೂ ಮೊದಲು ಇರಾನ್ನ ಅಣ್ವಸ್ತ್ರ ಕಾರ್ಯಕ್ರಮಗಳ ಮೇಲೆಯೇ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದಿದೆ.
ಅಮೆರಿಕದ ಮಧ್ಯಂತರ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಇರಾನ್ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಸುಳಿವನ್ನು ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಸರ್ವಸನ್ನದ್ಧವಾಗಿದ್ದು, ಅಮೆರಿಕ ಏನಾದರೂ ತಪ್ಪು ಹೆಜ್ಜೆಯಿಟ್ಟರೆ ಹಿಂದೆಂದೂ ಕಾಣದ ಭೀಕರ ಪ್ರತೀಕಾರ ತೀರಿಸಿಕೊಳ್ಳುವ ಪ್ಲಾನ್ ಮಾಡಿಕೊಂಡಿದೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದಾಗಿನಿಂದ ಈ ಕಿಡಿ ಹೊತ್ತಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಗಳನ್ನೇ ಗುರಿಯಾಗಿಸಿಕೊಂಡು ಕ್ಷಿಪಣಿ ಮಳೆಗರೆದಿತ್ತು. ಈಗ ಸಂಘರ್ಷ ಲೆಬನಾನ್ನ ಹೆಜ್ಬೊಲ್ಲಾ ಮತ್ತು ಯೆಮೆನ್ನ ಹೂತಿ ಬಂಡುಕೋರರವರೆಗೂ ವ್ಯಾಪಿಸಿದೆ. ಸೌದಿ ಅರೇಬಿಯಾದ ತೈಲ ಘಟಕಗಳು ಮತ್ತು ವಿಮಾನ ನಿಲ್ದಾಣಗಳ ಮೇಲೂ ದಾಳಿಗಳು ನಡೆದಿವೆ.
ಒಟ್ಟಿನಲ್ಲಿ, ಯುದ್ಧದ ಗಂಡಾಂತರ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, ಇರಾನ್ ಎಸೆದಿರುವ ಈ 7 ಷರತ್ತುಗಳ ದಾಳಕ್ಕೆ ಟ್ರಂಪ್ ಆಡಳಿತ ಮಣಿಯುತ್ತಾ ಅಥವಾ ಜಗತ್ತು ಮೂರನೇ ಮಹಾಯುದ್ಧದ ಅಂಚಿಗೆ ತಳ್ಳಲ್ಪಡುತ್ತಾ ಎಂಬುದನ್ನು ಕಾದುನೋಡಬೇಕಿದೆ, (ಏಜೆನ್ಸೀಸ್).