"ಇಂದು ರಾತ್ರಿ ಇರಾನ್ ಮೇಲೆ ಭೀಕರ ದಾಳಿ ಮಾಡ್ತೀವಿ! ತೈಲ ಕೇಂದ್ರ ಖಾರ್ಗ್ ದ್ವೀಪ ನಮ್ಮದಾಗುತ್ತೆ" ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ!
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಈಗ ಕಂಪನ ಸೃಷ್ಟಿಸಿದೆ. ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಂದು ಅತ್ಯಂತ ಭೀಕರ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ಇಂದೇ ರಾತ್ರಿ ನಾವು ಇರಾನ್ ಮೇಲೆ ಅತ್ಯಂತ ಭೀಕರವಾದ ದಾಳಿ ನಡೆಸಲಿದ್ದೇವೆ ಎಂದು ಟ್ರಂಪ್ ಬಹಿರಂಗವಾಗಿ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಇರಾನ್‌ನ ಇಡೀ ಆರ್ಥಿಕತೆಯ ಬೆನ್ನೆಲುಬಾಗಿರುವ ಜಗತ್ಪ್ರಸಿದ್ಧ ಖಾರ್ಗ್ ದ್ವೀಪ ಸೇರಿದಂತೆ ಇರಾನ್‌ನ ಎಲ್ಲಾ ಪ್ರಮುಖ ತೈಲ ಮತ್ತು ಅನಿಲ ಮಾರುಕಟ್ಟೆಗಳನ್ನು ಅಮೆರಿಕ ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ಟ್ರಂಪ್ ನೀಡಿರುವ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ.
ಇರಾನ್ ರಕ್ಷಣಾ ವ್ಯವಸ್ಥೆ ಸಂಪೂರ್ಣ ಧ್ವಂಸ: ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಆರ್ಭಟ!
ಈ ಬಗ್ಗೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಮಿಲಿಟರಿ ಶಕ್ತಿಗೆ ಇರಾನ್ ಈಗಾಗಲೇ ಅರ್ಧದಷ್ಟು ನಾಶವಾಗಿದೆ. ಇರಾನ್‌ನ ನೌಕಾಪಡೆ, ವಾಯುಪಡೆ, ರೇಡಾರ್ ವ್ಯವಸ್ಥೆಗಳು, ವಿಮಾನ ನಿರೋಧಕ ಕ್ಷಿಪಣಿಗಳು ಮತ್ತು ಇಡೀ ರಕ್ಷಣಾ ಪಡೆಗಳು ನಮ್ಮ ದಾಳಿಗೆ ಸಂಪೂರ್ಣವಾಗಿ ಧೂಳೀಪಟವಾಗಿವೆ. ಅವರ ಆಕ್ರಮಣಕಾರಿ ಶಕ್ತಿಯೂ ಮುಗಿದುಹೋಗಿದೆ. ಹೀಗಿದ್ದರೂ ಅವರು ನಡೆಸಿದ ದುಸ್ಸಾಹಸಕ್ಕೆ ಇಂದೇ ರಾತ್ರಿ ಅಮೆರಿಕ ಅತ್ಯಂತ ಕಠಿಣವಾದ ಶಿಕ್ಷೆ ನೀಡಲಿದೆ ಎಂದು ಗುಡುಗಿದ್ದಾರೆ.
ಇರಾನ್‌ನ ತೈಲ ನೆಲೆಗಳ ಮೇಲೆ ಕಣ್ಣಿಟ್ಟಿರುವ ಟ್ರಂಪ್, ನಾವು ತೀರಾ ಹತ್ತಿರದ ಭವಿಷ್ಯದಲ್ಲೇ ಇರಾನ್‌ನ ಖಾರ್ಗ್ ದ್ವೀಪ ಹಾಗೂ ಇತರೆ ಪ್ರಮುಖ ತೈಲ ಮೂಲಸೌಕರ್ಯಗಳನ್ನು ವಶಪಡಿಸಿಕೊಳ್ಳಲಿದ್ದೇವೆ. ಇರಾನ್‌ನ ತೈಲ ಮತ್ತು ಅನಿಲ ಮಾರುಕಟ್ಟೆಯ ಸಂಪೂರ್ಣ ನಿಯಂತ್ರಣವನ್ನು ನಾವು ನಮ್ಮ ಕೈಗೆ ತೆಗೆದುಕೊಳ್ಳಲಿದ್ದೇವೆ. ಈ ಹಿಂದೆ ನಾವು ವೆನೆಜುವೆಲಾದಲ್ಲಿ ಇದೇ ರೀತಿ ಮಾಡಿದ್ದೆವು. ಅದು ವೆನೆಜುವೆಲಾ ಮತ್ತು ಅಮೆರಿಕ ಇಬ್ಬರಿಗೂ ಅದ್ಭುತವಾಗಿ ಕೆಲಸ ಮಾಡಿದೆ. ಈಗ ಇರಾನ್ ಸರದಿ ಎಂದು ಬರೆದುಕೊಂಡಿದ್ದಾರೆ.
ಯುದ್ಧದ ನಡುವೆಯೂ ರಹಸ್ಯ ಸಂಧಾನ: ಬಿಲಿಯನ್ ಡಾಲರ್ ಹಣಕ್ಕಾಗಿ ಇರಾನ್ ಪಟ್ಟು!
ಒಂದೆಡೆ ಮೈದಾನದಲ್ಲಿ ಕ್ಷಿಪಣಿಗಳು ಮತ್ತು ಬಾಂಬ್‌ಗಳು ಅಪ್ಪಳಿಸುತ್ತಿದ್ದರೆ, ಇನ್ನೊಂದೆಡೆ ತೆರೆಮರೆಯಲ್ಲಿ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ರಹಸ್ಯ ಸಂಧಾನ ಮಾತುಕತೆಗಳು ಮುಂದುವರಿದಿವೆ ಎಂಬ ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಉಭಯ ದೇಶಗಳ ರಾಜತಾಂತ್ರಿಕರು ಪ್ರಾಥಮಿಕ ಒಪ್ಪಂದದ ತಯಾರಿಯಲ್ಲಿದ್ದಾರೆ. ಆದರೆ, ವಿದೇಶಿ ಬ್ಯಾಂಕುಗಳಲ್ಲಿ ಸ್ಥಗಿತಗೊಳಿಸಲಾಗಿರುವ ಇರಾನ್‌ನ ಬಿಲಿಯನ್ ಗಟ್ಟಲೆ ಡಾಲರ್ ಹಣವನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಇಬ್ಬರ ನಡುವೆ ಭಾರಿ ಜಗಳ ನಡೆಯುತ್ತಿದೆ.
ವಿದೇಶಿ ಬ್ಯಾಂಕುಗಳಲ್ಲಿ ಲಾಕ್ ಆಗಿರುವ ತನ್ನ 6 ಬಿಲಿಯನ್‌ನಿಂದ 12 ಬಿಲಿಯನ್ ಡಾಲರ್ (ಅಂದಾಜು 50,000 ಕೋಟಿಯಿಂದ 1 ಲಕ್ಷ ಕೋಟಿ ರೂಪಾಯಿ) ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ಆದರೆ ಅಮೆರಿಕ ಇದಕ್ಕೆ ಒಪ್ಪುತ್ತಿಲ್ಲ. ನಾವು ಹಣವನ್ನು ಒಂದೇ ಬಾರಿಗೆ ನೀಡುವುದಿಲ್ಲ, ಹಂತ ಹಂತವಾಗಿ ನೀಡುತ್ತೇವೆ. ಅದೂ ಸಹ ಕೇವಲ ಮಾನವೀಯ ಅಗತ್ಯಗಳಿಗೆ (ಔಷಧಿ, ಆಹಾರ) ಮಾತ್ರ ಬಳಸಬೇಕು ಎಂದು ಅಮೆರಿಕ ಕಠಿಣ ಷರತ್ತು ವಿಧಿಸಿದೆ. ಇರಾನ್ ಮೂಲಗಳ ಪ್ರಕಾರ, ಮಿಲಿಟರಿ ಶಕ್ತಿಯಿಂದ ಅಮೆರಿಕಕ್ಕೆ ತನ್ನ ಗುರಿ ತಲುಪಲು ಸಾಧ್ಯವಿಲ್ಲ, ಹಾಗಾಗಿ ಯುದ್ಧ ನಿಲ್ಲಿಸಿ ತನ್ನ ಹಣವನ್ನು ವಾಪಸ್ ಪಡೆಯುವುದೇ ಇರಾನ್‌ನ ಮೊದಲ ಆದ್ಯತೆಯಾಗಿದೆ,(ಏಜೆನ್ಸೀಸ್).