ಡೊನಾಲ್ಡ್ ಟ್ರಂಪ್ 
ವಿದೇಶ

ಮೋಸ್ಟ್ ವಾಂಟೆಡ್​ ಐಸಿಸ್ ಉಗ್ರ ಅಬು ಬಿಲಾಲ್ ಅಲ್-ಮಿನುಕಿಯನ್ನು ಹೊಡೆದಾಕಿದ್ದೇವೆ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ | Donald Trump

ವಾಷಿಂಗ್ಟನ್: ವಿಶ್ವದ ನಂ. 01 ಭಯೋತ್ಪಾದಕ ಸಂಘಟನೆ ಐಸಿಸ್​ನ ಮೋಸ್ಟ್ ವಾಂಟೆಡ್ ಮತ್ತು ನಂ. 02 ನಾಯಕ ಅಬು ಬಿಲಾಲ್-ಅಲ್-ಮಿನುಕಿಯನ್ನು ನೈಜೇರಿಯಾ ಸೇನೆಯೊಂದಿಗೆ ಸೇರಿ ಅಮೆರಿಕದ ಪಡೆಗಳ ಹೊಡೆದಾಕಿದ್ದಾವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಶನಿವಾರ(ಮೇ 16) ಘೋಷಣೆ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇಂದು ನನ್ನ ನಿರ್ದೇಶನದ ಮೇರೆಗೆ ಧೈರ್ಯಶಾಲಿ ಅಮೇರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕನನ್ನು ನಿಖರ ಕಾರ್ಯಾಚರಣೆ ಮೂಲಕ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಜಾಗತಿಕವಾಗಿ ಐಸಿಸ್‌ನ ಎರಡನೇ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಆಫ್ರಿಕಾದಲ್ಲಿ ಅಡಗಿಕೊಳ್ಳಬಹುದೆಂದು ಭಾವಿಸಿದ್ದರು, ಆದರೆ ಅವರು ಏನು ಮಾಡುತ್ತಿದ್ದಾರೆಂದು ನಮಗೆ ತಿಳಿಸುವ ಮೂಲಗಳು ನಮ್ಮಲ್ಲಿವೆ ಎಂದು ಅವರಿಗೆ ತಿಳಿದಿರಲಿಲ್ಲ. ಇನ್ನು ಮುಂದೆ ಆಫ್ರಿಕಾದ ಜನರು ಭಯಪಡಬೇಕಿಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕನ್ನರನ್ನು ಗುರಿಯಾಗಿಸುವ ಯಾವುದೇ ಕಾರ್ಯಾಚರಣೆ ಸಕ್ರಿಯವಾಗಲು ಬಿಡಲ್ಲ ಎಂದಿರುವ ಅವರು, ಅಬು-ಬಿಲಾಲ್ ಅಲ್-ಮಿನುಕಿ ಸಾವಿನಿಂದ ಐಸಿಸ್‌ ಸಂಘಟನೆಯ ಜಾಗತಿಕ ಕಾರ್ಯಾಚರಣೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದಿದ್ದಾರೆ. ಈ  ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದ ನೈಜೀರಿಯಾ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಅಬು ಬಿಲಾಲ್​ನನ್ನು 2023ರಲ್ಲಿ ಅಮೆರಿಕ ಸರ್ಕಾರ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಆಫ್ರಿಕಾದ ಸಹೇಲ್ ಪ್ರದೇಶದವನಾಗಿದ್ದಅವನು ಅಂತರರಾಷ್ಟ್ರೀಯ ಮಟ್ಟದಲ್ಲಿ ಐಸಿಸ್ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದು,  ಭಯೋತ್ಪಾದಕ ದಾಳಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದನು ಎನ್ನಲಾಗಿದೆ (ಏಜೆನ್ಸೀಸ್).