ಅರಬ್ಬರ ತೈಲ ನಮಗೆ ಬೇಕಿಲ್ಲ! ಅಮೆರಿಕದತ್ತ ಧಾವಿಸುತ್ತಿವೆ ವಿಶ್ವದ ಬೃಹತ್ ನೌಕೆಗಳು: ಟ್ರಂಪ್ ಪ್ಲಾನ್ ನೋಡಿ ಜಗತ್ತೇ ಶಾಕ್!
ನ್ಯೂಯಾರ್ಕ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಿರ್ಣಾಯಕ ಮಾತುಕತೆಗಳು ಆರಂಭವಾಗಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೊಸದೊಂದು ಎನರ್ಜಿ ವಾರ್ ಶುರು ಮಾಡಿದ್ದಾರೆ. ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರಗಳಿಗಿಂತಲೂ ಹೆಚ್ಚು ತೈಲ ನಿಕ್ಷೇಪ ಅಮೆರಿಕದ ಬಳಿಯಿದೆ ಎಂದು ಗುಡುಗಿರುವ ಟ್ರಂಪ್, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದಾರೆ.
ಈ ಬಗ್ಗೆ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕದ ಇಂಧನ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಇರಾನ್ ಮೇಲೆ ಪರೋಕ್ಷ ಒತ್ತಡ ಹೇರಿದ್ದಾರೆ.
ಅಮೆರಿಕದತ್ತ ಮುಖ ಮಾಡಿದ ಖಾಲಿ ತೈಲ ನೌಕೆಗಳ ಸೈನ್ಯ!
ಅಧ್ಯಕ್ಷ ಟ್ರಂಪ್ ಅವರ ಪೋಸ್ಟ್ ಅತ್ಯಂತ ಕುತೂಹಲಕಾರಿಯಾಗಿದೆ. ವಿಶ್ವದ ಅತಿದೊಡ್ಡ ತೈಲ ಟ್ಯಾಂಕರ್‌ಗಳು ಈಗ ಅಮೆರಿಕದತ್ತ ಖಾಲಿಯಾಗಿ ಧಾವಿಸುತ್ತಿವೆ. ಇವು ಅಮೆರಿಕದಲ್ಲಿರುವ ವಿಶ್ವದ ಅತ್ಯಂತ ಗುಣಮಟ್ಟದ ಮತ್ತು ಸಿಹಿಯಾದ ತೈಲ ಹಾಗೂ ಅನಿಲವನ್ನು ತುಂಬಿಸಿಕೊಳ್ಳಲು ಬರುತ್ತಿವೆ. ನಮ್ಮ ಬಳಿ ಮುಂದಿನ ಎರಡು ದೊಡ್ಡ ತೈಲ ಆರ್ಥಿಕತೆಗಳನ್ನು ಒಟ್ಟುಗೂಡಿಸಿದರೂ ಸಿಗದಷ್ಟು ತೈಲ ನಿಕ್ಷೇಪವಿದೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಈ ಮೂಲಕ, ಇರಾನ್‌ನ ತೈಲ ಅವಲಂಬನೆಯನ್ನು ಜಗತ್ತು ಕಡಿಮೆ ಮಾಡಬಹುದು ಮತ್ತು ಅಮೆರಿಕ ಏಕಪಕ್ಷೀಯವಾಗಿ ಜಾಗತಿಕ ಇಂಧನ ಬೇಡಿಕೆಯನ್ನು ಪೂರೈಸಬಲ್ಲದು ಎಂಬ ಬಲವಾದ ಸಂದೇಶವನ್ನು ಅವರು ರವಾನಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಸಂಧಾನದ ಮೇಜಿನ ಮೇಲೆ ಕುಳಿತಿರುವ ಇರಾನ್ ಪ್ರತಿನಿಧಿಗಳಿಗೆ ಇದು ಅಮೆರಿಕದ ಆರ್ಥಿಕ ಶಕ್ತಿಯ ಪ್ರದರ್ಶನದಂತೆ ಕಂಡಿದೆ.
ಇಸ್ಲಾಮಾಬಾದ್‌ನಲ್ಲಿ ಬಿಗುವಿನ ವಾತಾವರಣ: ಸಂಧಾನಕ್ಕೆ ಮುನ್ನವೇ ವಿಘ್ನ?
ಒಂದೆಡೆ ಟ್ರಂಪ್ ತೈಲ ರಾಜಕೀಯ ಮಾಡುತ್ತಿದ್ದರೆ, ಇನ್ನೊಂದೆಡೆ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗಳು ಹಳಿ ತಪ್ಪುವ ಲಕ್ಷಣಗಳು ಕಾಣುತ್ತಿವೆ. ಇರಾನ್‌ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನೇತೃತ್ವದ 71 ಸದಸ್ಯರ ಬೃಹತ್ ನಿಯೋಗ ಇಸ್ಲಾಮಾಬಾದ್ ತಲುಪಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಜಾರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ ಈಗಾಗಲೇ ಬೀಡುಬಿಟ್ಟಿದ್ದಾರೆ.
ಆದರೆ, ಮೂಲಗಳ ಪ್ರಕಾರ ಉಭಯ ದೇಶಗಳ ಪ್ರತಿನಿಧಿಗಳು ಒಂದೇ ನಗರದಲ್ಲಿದ್ದರೂ, ಇದುವರೆಗೆ ಯಾವುದೇ ನೇರ ಮಾತುಕತೆ ನಡೆದಿಲ್ಲ. ಪರಸ್ಪರ ನಂಬಿಕೆಯಿಲ್ಲದ ಕಾರಣ ಉಭಯ ದೇಶಗಳ ನಡುವೆ ಶೀತಲ ಸಮರ ಮುಂದುವರಿದಿದೆ.
ಇರಾನ್ ಹಾಕಿರುವ ಕಠಿಣ ಷರತ್ತುಗಳು
ಮಾತುಕತೆ ಮುಂದುವರಿಯಬೇಕಾದರೆ ಇರಾನ್ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ.
ಲೆಬನಾನ್ ಮೇಲೆ ದಾಳಿ ನಿಲ್ಲಬೇಕು: ಇಸ್ರೇಲ್ ತಕ್ಷಣವೇ ಲೆಬನಾನ್‌ನಲ್ಲಿ ಸಂಘರ್ಷ ನಿಲ್ಲಿಸಬೇಕು.
ಆಸ್ತಿ ಬಿಡುಗಡೆ: ವಿದೇಶಗಳಲ್ಲಿ ಸ್ಥಗಿತಗೊಳಿಸಲಾಗಿರುವ ಇರಾನ್‌ನ ಹಣಕಾಸು ಆಸ್ತಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
ಪ್ರಾದೇಶಿಕ ಭದ್ರತೆ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಹಸ್ತಕ್ಷೇಪ ತಗ್ಗಿಸುವ ಗ್ಯಾರಂಟಿ ಬೇಕು.
ಮಧ್ಯಸ್ಥಿಕೆಗೆ ಮುಂದಾದ ಪಾಕಿಸ್ತಾನ: ಟ್ರಿಲಾವರ್ ಮಾದರಿ ಯಶಸ್ವಿಯಾಗುತ್ತಾ..?
ನೇರ ಮಾತುಕತೆ ನಡೆಯದ ಕಾರಣ, ಆತಿಥೇಯ ರಾಷ್ಟ್ರ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ತ್ರಿಪಕ್ಷೀಯ ಮಾತುಕತೆ ನಡೆಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಅಮೆರಿಕದ ಶ್ವೇತಭವನವು ತನ್ನ ಮೂಲ ಬೇಡಿಕೆಗಳಿಂದ ಹಿಂದೆ ಸರಿಯುವ ಲಕ್ಷಣ ತೋರುತ್ತಿಲ್ಲ. ಇರಾನ್‌ನ ಪರಮಾಣು ಚಟುವಟಿಕೆಗಳಿಗೆ ಬ್ರೇಕ್ ಹಾಕುವುದು ಅಮೆರಿಕದ ಮೊದಲ ಆದ್ಯತೆಯಾಗಿದೆ.
ತಜ್ಞರ ವಿಶ್ಲೇಷಣೆ: ಇದೊಂದು ಮ್ಯಾಕ್ಸಿಮಮ್ ಲೇವರಿಜ್ ತಂತ್ರ!
ರಾಜತಾಂತ್ರಿಕ ತಜ್ಞರ ಪ್ರಕಾರ, ಟ್ರಂಪ್ ಅವರ ಈ ಪೋಸ್ಟ್ ಕೇವಲ ಆರ್ಥಿಕ ಅಸಂಬದ್ಧತೆಯಲ್ಲ, ಬದಲಿಗೆ ಇದೊಂದು ರಾಜತಾಂತ್ರಿಕ ತಂತ್ರವಾಗಿದ್ದು. ಇರಾನ್ ತನ್ನ ತೈಲದ ಮೇಲೆ ಜಗತ್ತನ್ನು ಹೆದರಿಸಲು ಯತ್ನಿಸುತ್ತಿದ್ದರೆ, ಟ್ರಂಪ್ ಅಮೆರಿಕದ ತೈಲ ಸಂಗ್ರಹವನ್ನು ಮುಂದಿಟ್ಟು ಆ ಬೆದರಿಕೆಯನ್ನು ನಿಷ್ಕ್ರಿಯಗೊಳಿಸುತ್ತಿದ್ದಾರೆ. ನಾವು ನಿಮ್ಮ ತೈಲಕ್ಕಾಗಿ ಕಾಯುತ್ತಿಲ್ಲ, ನೀವೇ ನಮ್ಮ ಶಕ್ತಿಗೆ ಮಣಿಯಬೇಕು ಎಂಬುದು ಟ್ರಂಪ್ ಅವರ ಗುರಿಯಾಗಿದೆ.
ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮುಂದಿನ 48 ಗಂಟೆಗಳು ವಿಶ್ವದ ಭವಿಷ್ಯವನ್ನು ನಿರ್ಧರಿಸಲಿವೆ. ಟ್ರಂಪ್ ಅವರ 'ತೈಲ ಅಸ್ತ್ರ' ಇರಾನ್ ಅನ್ನು ಬಗ್ಗಿಸುತ್ತದೆಯೇ ಅಥವಾ ಇರಾನ್ ತನ್ನ ಷರತ್ತುಗಳಿಗೆ ಅಂಟಿಕೊಳ್ಳುತ್ತದೆಯೇ ಎಂಬುದು ಈಗಿನ ಕುತೂಹಲ,(ಏಜೆನ್ಸೀಸ್).