- ಪಾಕಿಸ್ತಾನವು ಭಾರತದ ಆಕ್ರಮಣಕ್ಕೆ ಬಲವಾಗಿ ಪ್ರತಿಕ್ರಿಯೆ ನೀಡಿದೆ
- ಪಾಕಿಸ್ತಾನದೊಂದಿಗೆ ಯುದ್ಧ ಮಕ್ಕಳ ಆಟವಲ್ಲ ಎನ್ನುವ ಸ್ಪಷ್ಟ ಸಂದೇಶ ದೆಹಲಿಗೆ ರವಾನೆಯಾಗಿದೆ
- ನರೇಂದ್ರ ಮೋದಿ ನಮ್ಮ ಫೀಲ್ಡ್ ಮಾರ್ಷಲ್ ಹೆಸರು ಕೇಳಿದರೆ ಹೆದರುತ್ತಾರೆ: ಬಿಲಾವಲ್ ಭುಟ್ಟೋ
ಪಾಕಿಸ್ತಾನ: ಮೇ ತಿಂಗಳಲ್ಲಿ ಭಾರತದೊಂದಿಗಿನ ಸಂಘರ್ಷದ ಸಮಯದಲ್ಲಿ, ಪಾಕಿಸ್ತಾನವು ಭಾರತದ ಆಕ್ರಮಣಕ್ಕೆ ಬಲವಾಗಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದೊಂದಿಗೆ ಯುದ್ಧ (War) ಮಕ್ಕಳ ಆಟವಲ್ಲ ಎನ್ನುವ ಸ್ಪಷ್ಟ ಸಂದೇಶ ದೆಹಲಿಗೆ ರವಾನೆಯಾಗಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.
ಶನಿವಾರ (ಡಿ.27) ರಂದು ಪಾಕ್ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುಣ್ಯತಿಥಿಯಂದು ಕರಾಚಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಜರ್ದಾರಿ, ಪಾಕಿಸ್ತಾನದ ಸಂಯಮಕ್ಕೆ ಭಾರತ ಕೃತಜ್ಞರಾಗಿರಬೇಕು, ಪಾಕಿಸ್ತಾನ ಬಯಸಿದ್ದರೆ ಇನ್ನೂ ಹೆಚ್ಚಿನ ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಬಹುದಿತ್ತು ಎಂದು ಹೇಳಿದರು. ಪಾಕಿಸ್ತಾನವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ಭಾರತದ ಪ್ರಧಾನಿಗೆ ಅರ್ಥವಾಗಿದೆ. ನಮ್ಮ ತಂಟೆಗೆ ಮತ್ತೊಮ್ಮೆ ಬಂದರೆ ಪಾಕಿಸ್ತಾನವು ಭಾರತದೊಂದಿಗೆ ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನರೇಂದ್ರ ಮೋದಿ ನಮ್ಮ ಫೀಲ್ಡ್ ಮಾರ್ಷಲ್ ಹೆಸರು ಕೇಳಿದರೆ ಹೆದರುತ್ತಾರೆ: ಬಿಲಾವಲ್ ಭುಟ್ಟೋ
ಮೇ ತಿಂಗಳಲ್ಲಿ ನಡೆದ ಸಂಘರ್ಷದಲ್ಲಿ ಪಾಕಿಸ್ತಾನವು ಭಾರತವನ್ನು ಸಂಪೂರ್ಣವಾಗಿ ಸೋಲಿಸಿತು ಎಂದು ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಹೇಳಿದ್ದಾರೆ. ನಮ್ಮ ಫೀಲ್ಡ್ ಮಾರ್ಷಲ್ ಆಸೀಮ್ ಮುನೀರ್ ಹೆಸರನ್ನು ಕೇಳಿದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆದರಿ ಅಡಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಜುಲ್ಫಿಕರ್ ಅಲಿ ಭುಟ್ಟೋ ಪಾಕಿಸ್ತಾನವನ್ನು ಪರಮಾಣು ಶಕ್ತಿಯಾಗಿ ಮಾಡಿದರು ಮತ್ತು ಆಸಿಫ್ ಅಲಿ ಜರ್ದಾರಿ ಚೀನಾದೊಂದಿಗಿನ ಸಂಬಂಧಗಳನ್ನು ಬಲಪಡಿಸುವ ಮೂಲಕ ಸಿಪಿಇಸಿಗೆ ಅಡಿಪಾಯ ಹಾಕಿದರು ಎಂದು ಹೇಳಿದರು, (ಏಜನ್ಸೀಸ್).