ಪಾಕ್ ಸೈನಿಕರು ಕುಡಿಯುವ ನೀರಿಗಾಗಿ ಪರಸ್ಪರ ಜಗಳವಾಡುತ್ತಿರುವ ವೈರಲ್ ವಿಡಿಯೋದ ದೃಶ್ಯ.
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೇಗಿದೆ ಎಂದು ಹೊಸದಾಗಿ ಹೇಳಬೇಕಿಲ್ಲ. ಆದರೆ ತಾನೊಬ್ಬ ಅಭಿವೃದ್ಧಿ ಹೊಂದುತ್ತಿರುವ ದೇಶ, ಭಾರತ ಬೇಕಂತಲೇ ನಮ್ಮನ್ನು ಕೀಳಾಗಿ ತೋರಿಸುತ್ತದೆ ಎಂದು ಪಾಕ್ ಜಾಗತಿಕ ವೇದಿಕೆಗಳಲ್ಲಿ ಅರಣ್ಯರೋಧನ ಮಾಡಿರುವುದನ್ನು ಕೇಳಿರುತ್ತೇವೆ.
ಆದರೆ, ಇತ್ತೀಚೆಗೆ ದೇಶದ ರಕ್ಷಣೆ ಮಾಡಬೇಕಾದ ಸೈನಿಕರೇ, ಕುಡಿಯುವ ನೀರಿಗಾಗಿ ಪರಸ್ಪರ ಹೊಡೆದಾಡಿಕೊಂಡಿರುವ (Pak Army Fighting) ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪಾಕಿಸ್ತಾನವನ್ನು ಭಿಕಾರಿಸ್ತಾನ್ ಎಂದು ಟ್ರೋಲ್ ಮಾಡಲಾಗುತ್ತಿದೆ.
ಏನಿದು ಘಟನೆ?
ಅಪ್ಪರ್ ಸೌತ್ ವಜೀರಿಸ್ತಾನದ ಅಸ್ಮಾನ್ ಮಂಜಾದಲ್ಲಿರುವ ಬ್ರಿಗೇಡ್ ಪ್ರಧಾನ ಕಚೇರಿಯಲ್ಲಿ ಈ ಹೈಡ್ರಾಮಾ ನಡೆದಿದೆ. ವಿಶೇಷ ಸೇವಾ ಗುಂಪು (SSG) ಕಮಾಂಡೋಗಳು, ಫ್ರಾಂಟಿಯರ್ ಕಾರ್ಪ್ಸ್ (FC) ಪಡೆಗಳು ಮತ್ತು ಮಿಲಿಟರಿ ಗುಪ್ತಚರ ಸಿಬ್ಬಂದಿಗಳು ಬಡಿದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಬರೋಬ್ಬರಿ 22 ಸೈನಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಅಸಲಿ ಕತೆ ಶುರುವಾಗಿದ್ದು ಎಲ್ಲಿ?
ವಜೀರಿಸ್ತಾನದ ಗಡಿ ಪ್ರದೇಶದಲ್ಲಿ ನೀರಿಗೆ ತೀವ್ರ ಹಾಹಾಕಾರವಿದೆ. ದಿನನಿತ್ಯದ ಬಳಕೆಗೆ ಅಲ್ಲಿನ ಸೈನಿಕರು ನೀರಿನ ಟ್ಯಾಂಕರ್‌ಗಳನ್ನೇ ನಂಬಿಕೊಂಡಿದ್ದಾರೆ. ಪ್ರಧಾನ ಕಚೇರಿಗೆ ನೀರಿನ ಟ್ಯಾಂಕರ್ ಬಂದ ತಕ್ಷಣ, 'ಮೊದಲು ನಾನು, ನನ್ನ ಪಾತ್ರೆಗೆ ನೀರು ತುಂಬಿಸಿಬೇಕೆಂದು SSG ಕಮಾಂಡೋಗಳು ಮತ್ತು ಗುಪ್ತಚರ ಅಧಿಕಾರಿಗಳ ನಡುವೆ ವಾಗ್ವಾದ ಶುರುವಾಗಿದೆ.
ಆರಂಭದಲ್ಲಿ ಸಣ್ಣದಾಗಿ ಆರಂಭವಾದ ಮಾತುಕತೆ, ಕ್ಷಣಮಾತ್ರದಲ್ಲಿ ಮಾತಿಗೆ ಮಾತು ಬೆಳೆದು ದೊಡ್ಡ ಜಗಳಕ್ಕೆ ತಿರುಗಿದೆ. ಇತ್ತ ಜಗಳ ಜೋರಾಗುತ್ತಿದ್ದಂತೆ ಫ್ರಾಂಟಿಯರ್ ಕಾರ್ಪ್ಸ್ (FC) ಸಿಬ್ಬಂದಿಗಳೂ ಕೂಡ ಎಂಟ್ರಿ ಕೊಟ್ಟಿದ್ದಾರೆ. ಯಾರು ಯಾರಿಗೆ ಹೊಡೀತಿದ್ದಾರೆಂದೇ ತಿಳಿಯದಷ್ಟು ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ರಸ್ತೆಯಲ್ಲೇ ನಡೆದ ಫ್ರೀ ಸ್ಟೈಲ್ ಕುಸ್ತಿ!
ಸಮವಸ್ತ್ರದಲ್ಲಿದ್ದ ಕಮಾಂಡೋಗಳು ಮತ್ತು ಸಿವಿಲ್ ಬಟ್ಟೆಯಲ್ಲಿದ್ದ ಗುಪ್ತಚರ ಸಿಬ್ಬಂದಿ ಪರಸ್ಪರ ಒದೆದಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಕೆಳಗೆ ನೂಕಿ, ಯದ್ವಾತದ್ವಾ ಬಡಿದಾಡಿಕೊಂಡು, ಮುಖಕ್ಕೆ ಗುದ್ದಿಕೊಂಡಿದ್ದಾರೆ.
ಪ್ರಧಾನ ಕಚೇರಿ ಆವರಣದ ಮೈದಾನದಲ್ಲೇ ಈ ಫ್ರೀ ಸ್ಟೈಲ್ ಕುಸ್ತಿ ಹಲವು ನಿಮಿಷಗಳ ಕಾಲ ನಡೆದಿರುವುದು ಅಲ್ಲಿನ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಗಡಿ ಕಾಪಾಡಬೇಕಾದ ಸೈನಿಕರೇ ನೀರಿನ ಟ್ಯಾಂಕರ್‌ಗಾಗಿ ಬೀದಿಕುಸ್ತಿ ಆಡಿರುವುದು ಪಾಕಿಸ್ತಾನಿ ಸೇನೆಯ ನೈಜ ಸ್ಥಿತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
ಪಾಕ್ ಸೇನೆಯ ಮೌನ ಮತ್ತು ಆಂತರಿಕ ಅಸ್ಥಿರತೆ
ಸೈನಿಕರ ಈ ಅಸಹ್ಯ ವರ್ತನೆ ಮತ್ತು ಅಶಿಸ್ತಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿವೆ. ಆದರೆ, ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಮಾತ್ರ ಈ ಬಗ್ಗೆ ಬಾಯಿಬಿಡದೆ ಮೌನ ವಹಿಸಿದೆ. ಖೈಬರ್ ಪಖ್ತುನ್ಖ್ವಾ ಭಾಗದಲ್ಲಿ ಸೇನೆಗೆ ಮೂಲಭೂತ ಸೌಕರ್ಯಗಳನ್ನೂ ಒದಗಿಸಲು ಅಲ್ಲಿನ ಸರ್ಕಾರ ವಿಫಲವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ, ಗಡಿಯಲ್ಲಿ ದೇಶ ಕಾಯಬೇಕಾದವರು ತಮ್ಮದೇ ಪ್ರಧಾನ ಕಚೇರಿಯಲ್ಲಿ ನೀರಿಗಾಗಿ ಬಡಿದಾಡಿಕೊಂಡಿರುವುದು ನೆಟ್ಟಿಗರ ನಗುವಿಗೆ ಕಾರಣವಾಗಿದ್ದು, ಪಾಕ್ ಸೇನೆಯ ಮರ್ಯಾದೆ ಹರಾಜಾಗಿದೆ, (ಏಜನ್ಸೀಸ್).