38 ವರ್ಷಗಳ ಹಿಂದೆಯೇ ಸಿದ್ಧವಾಗಿತ್ತಾ ಇರಾನ್ ವಿನಾಶದ ಸ್ಕೆಚ್? ಟ್ರಂಪ್ ಹಂಚಿಕೊಂಡ ಆ ವಿಡಿಯೋದಲ್ಲಿ ಅಡಗಿದೆ ಭಯಾನಕ ಸತ್ಯ!
ವಾಷಿಂಗ್ಟನ್ ಡಿಸಿ: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump 1987 Interview) ಹಂಚಿಕೊಂಡಿರುವ ಒಂದು ಹಳೆಯ ವಿಡಿಯೋ ಇಡೀ ವಿಶ್ವವನ್ನು ಬೆಚ್ಚಿಬೀಳಿಸಿದೆ. ಸುಮಾರು 38 ವರ್ಷಗಳ ಹಿಂದೆ, ಅಂದರೆ 1987ರಲ್ಲಿ 41 ವರ್ಷದ ಯುವ ಉದ್ಯಮಿಯಾಗಿದ್ದ ಟ್ರಂಪ್, ಇರಾನ್ ಅನ್ನು ಮಣಿಸಲು ನೀಡಿದ್ದ ಸಲಹೆ ಇಂದು ಅಕ್ಷರಶಃ ಜಾರಿಯಾಗುತ್ತಿರುವಂತೆ ತೋರುತ್ತಿದೆ.
ಇರಾನ್ ಒಳಗಡೆ ನುಗ್ಗಿ, ಅವರ ತೈಲವನ್ನು ವಶಪಡಿಸಿಕೊಳ್ಳಿ" ಎಂದು ಅಂದು ಟ್ರಂಪ್ ಹೇಳಿದ್ದ ಮಾತುಗಳು ಈಗ ಅವರ ಯುದ್ಧತಂತ್ರದ 'ಬ್ಲೂಪ್ರಿಂಟ್' ಆಗಿ ಹೊರಹೊಮ್ಮಿವೆ.
1987ರ ಆ ವಿಡಿಯೋದಲ್ಲೇನಿತ್ತು..?
1987ರಲ್ಲಿ ಇರಾನ್-ಇರಾಕ್ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳನ್ನು ಗುರಿ ಮಾಡುತ್ತಿತ್ತು. ಆ ಸಮಯದಲ್ಲಿ ಎಬಿಸಿ ನ್ಯೂಸ್‌ನ (ABC) ಬಾರ್ಬರಾ ವಾಲ್ಟರ್ಸ್ ಅವರಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅತ್ಯಂತ ನೇರವಾಗಿ ಮಾತನಾಡಿದ್ದರು. ನಾವು ಯಾಕೆ ಇರಾನ್‌ನ ಸಮುದ್ರ ತೀರದಲ್ಲಿರುವ ಅವರ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳಬಾರದು. ಅಲ್ಲದೆ, ನೇರವಾಗಿ ಒಳ ನುಗ್ಗಿ, ತೈಲವನ್ನು ವಶಪಡಿಸಿಕೊಳ್ಳಿ. ಇರಾನ್ ತನ್ನ ಯುದ್ಧವನ್ನು ತಾನೇ ಮಾಡಿಕೊಳ್ಳಲಿ, ನಾವು ಅವರ ತೈಲವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದ್ದರು.
ಅಂದು ಪತ್ರಕರ್ತೆ ವಾಲ್ಟರ್ಸ್ ಅವರು ಸೈನ್ಯದ ಒಳಗೊಳ್ಳುವಿಕೆ ಮತ್ತು ಅಪಾಯದ ಬಗ್ಗೆ ಪ್ರಶ್ನಿಸಿದಾಗಲೂ ಟ್ರಂಪ್ ಎದೆಗುಂದಿರಲಿಲ್ಲ. ದುರ್ಬಲತೆಯಿಂದಲೇ ನಮಗೆ ಸಂಕಷ್ಟ ಎದುರಾಗುತ್ತದೆ. ಒಂದು ವೇಳೆ ಇರಾನ್ ನಮ್ಮ ಮೇಲೆ ದಾಳಿ ಮಾಡಿದರೆ, ಅವರ ಪ್ರಮುಖ ತೈಲ ಸ್ಥಾವರಗಳನ್ನು ವಶಪಡಿಸಿಕೊಂಡು ನಮ್ಮ ನಷ್ಟವನ್ನು ಭರಿಸಿಕೊಳ್ಳಬೇಕು ಎಂದು ಟ್ರಂಪ್ ಪ್ರತಿಪಾದಿಸಿದ್ದರು.
ಈಗಲೇ ಈ ವಿಡಿಯೋ ಯಾಕೆ? ಟ್ರಂಪ್ ನೀಡಿದ ಎಚ್ಚರಿಕೆ!
ಪ್ರಸ್ತುತ ಇರಾನ್ ಜೊತೆ ಸಕ್ರಿಯ ಯುದ್ಧದಲ್ಲಿರುವಾಗ ಟ್ರಂಪ್ ಈ ವಿಡಿಯೋವನ್ನು ಹಂಚಿಕೊಂಡಿರುವುದು ಕೇವಲ ಹಳೆಯ ನೆನಪಲ್ಲ, ಬದಲಿಗೆ ಅದೊಂದು ಯುದ್ಧದ ಎಚ್ಚರಿಕೆಯಾಗಿದೆ. ತನ್ನ ದಶಕಗಳ ಹಳೆಯ ನಿಲುವು ಇಂದಿಗೂ ಬದಲಾಗಿಲ್ಲ ಎಂಬುದನ್ನು ಅವರು ಜಗತ್ತಿಗೆ ಸಾರಿದ್ದಾರೆ.
ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್‌ನ ಹೊಸ ನಾಯಕತ್ವದ ಪೈಕಿ ವಿವೇಚನಾಶೀಲ ಗುಂಪಿನೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ಶಾಂತಿಯ ಮಾತುಗಳ ಬೆನ್ನಲ್ಲೇ ಭೀಕರ ಬೆದರಿಕೆಯನ್ನೂ ಒಡ್ಡಿದ್ದಾರೆ.
ಖರ್ಗ್ ದ್ವೀಪ ಉಡಾಯಿಸುವ ಭೀತಿ: ಸಂಪೂರ್ಣ ನಾಶ
ಒಂದು ವೇಳೆ ಇರಾನ್ ಮಾತುಕತೆಗೆ ಒಪ್ಪದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸದಿದ್ದರೆ, ಇರಾನ್‌ನ ಇಡೀ ಇಂಧನ ಮೂಲವನ್ನೇ ನಾಶಪಡಿಸುವುದಾಗಿ ಟ್ರಂಪ್ ಗುಡುಗಿದ್ದಾರೆ. ನಾವು ಇರಾನ್‌ನಲ್ಲಿರುವ ನಮ್ಮ 'ಅತಿಥಿ ಸತ್ಕಾರವನ್ನು ಕೊನೆಗೊಳಿಸುವುದು ಇರಾನ್‌ನ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳು, ತೈಲ ಬಾವಿಗಳು ಮತ್ತು ಅವರ ಮುಖ್ಯ ತೈಲ ರಫ್ತು ಕೇಂದ್ರವಾದ ಖರ್ಗ್ ದ್ವೀಪವನ್ನು ಸಂಪೂರ್ಣವಾಗಿ ಸ್ಫೋಟಿಸುವ ಮೂಲಕ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಆರ್ಥಿಕತೆಯ ಬೆನ್ನೆಲುಬಿಗೆ ಪೆಟ್ಟು?
ಖರ್ಗ್ ದ್ವೀಪವು ಇರಾನ್‌ನ ಕಚ್ಚಾ ತೈಲ ರಫ್ತಿನ ಶೇ. 90ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. ಒಂದು ವೇಳೆ ಟ್ರಂಪ್ ಹೇಳಿದಂತೆ ಈ ದ್ವೀಪ ಮತ್ತು ತೈಲ ಬಾವಿಗಳ ಮೇಲೆ ದಾಳಿ ನಡೆದರೆ ಇರಾನ್ ಆರ್ಥಿಕವಾಗಿ ಸಂಪೂರ್ಣವಾಗಿ ಕುಸಿಯಲಿದೆ. ಅಮೆರಿಕದ ಪಡೆಗಳು ಈಗಾಗಲೇ ಇರಾನ್‌ನ ನೌಕಾಪಡೆ ಮತ್ತು ಕ್ಷಿಪಣಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿವೆ. ಈಗ ತೈಲ ನಿಕ್ಷೇಪಗಳ ಮೇಲೆ ಕಣ್ಣಿಟ್ಟಿರುವುದು ಇರಾನ್ ಅನ್ನು ಅಕ್ಷರಶಃ ಮಣಿಸುವ ತಂತ್ರವಾಗಿದೆ.
ವಿಶ್ವ ಮಾರುಕಟ್ಟೆಯಲ್ಲಿ ಆತಂಕ
ಟ್ರಂಪ್ ಅವರ ಈ ಗ್ರ್ಯಾಬ್ ಅಂಡ್ ಕೀಪ್ ನೀತಿಯು ಅಂತಾರಾಷ್ಟ್ರೀಯ ಕಾನೂನುಗಳ ದೃಷ್ಟಿಯಿಂದ ಚರ್ಚೆಗೆ ಗ್ರಾಸವಾಗಿದ್ದರೂ, ಯುದ್ಧಭೂಮಿಯಲ್ಲಿ ಟ್ರಂಪ್ ಯಾವುದೇ ನಿಯಮಗಳಿಗೆ ಬದ್ಧರಾಗುವಂತೆ ಕಾಣುತ್ತಿಲ್ಲ. ಇರಾನ್‌ನ ವಿದ್ಯುತ್ ಮತ್ತು ತೈಲ ಮೂಲಗಳನ್ನು ಗುರಿಯಾಗಿಸುವುದು ಎಂದರೆ ಆ ದೇಶವನ್ನು ಕತ್ತಲೆಯಲ್ಲಿ ತಳ್ಳುವುದು ಮಾತ್ರವಲ್ಲದೆ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಏರಿಳಿತಕ್ಕೆ ಕಾರಣವಾಗುವುದು ಎಂದರ್ಥ.
ಒಟ್ಟಾರೆಯಾಗಿ, 1987ರಲ್ಲಿ ಒಬ್ಬ ಉದ್ಯಮಿಯಾಗಿ ಟ್ರಂಪ್ ಕಂಡಿದ್ದ ತೈಲ ವಶಪಡಿಸಿಕೊಳ್ಳುವ ಕನಸು, ಇಂದು ಅಮೆರಿಕದ ಅಧ್ಯಕ್ಷರಾಗಿ ಅವರು ಜಾರಿಗೆ ತರಲು ಹೊರಟಿರುವ ಅತ್ಯಂತ ಕ್ರೂರ ಮಿಲಿಟರಿ ತಂತ್ರವಾಗಿ ಮಾರ್ಪಟ್ಟಿದೆ. ಇರಾನ್ ಈಗ ಮಾತುಕತೆಗೆ ಬರುತ್ತದೆಯೇ ಅಥವಾ ಟ್ರಂಪ್ ಅವರ ಸಂಪೂರ್ಣ ವಿನಾಶ ತಂತ್ರಕ್ಕೆ ಬಲಿಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ,(ಏಜೆನ್ಸೀಸ್).