ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
Iranian President: ಇಸ್ರೇಲ್ ಮತ್ತು ಅಮೆರಿಕಾದ ಜೊತೆಗಿನ ಯುದ್ದದಲ್ಲಿ ನೆರೆಯ ಗಲ್ಫ್ ದೇಶಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕ್ಷಮೆ ಕೇಳಿದ್ದು, ಇನ್ಮುಂದೆ ಅಲ್ಲಿಂದ ದಾಳಿ ಮಾಡದ ಹೊರತು ನೆರೆ ರಾಷ್ಟ್ರಗಳನ್ನು ಗುರಿಯಾಗಿಸಲ್ಲ ಎಂದು ಹೇಳಿದ್ದಾರೆ.
ಈ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಅಮೆರಿಕಾದ ಮಿಲಿಟರಿ ಬೇಸ್ ಗುರಿಯಾಗಿಸಿ ನೆರೆಯ ರಾಷ್ಟ್ರಗಳ ಮೇಲೆ ಇರಾನ್ ಮಾಡಿದ ದಾಳಿಗೆ ನಾನು ಕ್ಷಮೆಯಾಚಿಸುತ್ತೇನೆ. ಇನ್ಮುಂದೆ ಇರಾನ್ ಮೇಲೆ ಆ ದೇಶಗಳಿಂದ ದಾಳಿ ಮಾಡದ ಹೊರತು ಯಾವುದೇ ಕ್ಷಿಪಣಿಯನ್ನು ಹಾರಿಸುವುದಿಲ್ಲ ಎಂದು ಮಧ್ಯಂತರ ನಾಯಕತ್ವ ಮಂಡಳಿಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ ಇರಾನ್ ಎಂದಿಗೂ ಶರಣಾಗುವುದಿಲ್ಲ. ಇರಾನ್ ಜನರ ಶರಣಾಗತಿಯ ಆಶಯವನ್ನು ಶತ್ರುಗಳು ತಮ್ಮ ಸಮಾಧಿಗೆ ಕೊಂಡೊಯ್ಯಬೇಕು ಎಂದು ಪ್ರತಿಪಾದಿಸಿದ್ದಾರೆ.
ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ ಬಳಿಕ, ಅದಕ್ಕೆ ಪ್ರತೀಕಾರವಾಗಿ ಒಂದು ವಾರದಿಂದ ನೆರೆಯ ದುಬೈ, ಅಬುಧಾಬಿ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಅನೇಕ ಗಲ್ಫ್ ಪ್ರದೇಶಗಳಲ್ಲಿರುವ ಅಮೆರಿಕ ಮಿಲಿಟರಿ ಬೇಸ್ ಗುರಿಯಾಗಿಸಿ ಕ್ಷಿಪಣಿಗಳನ್ನು ಉಡಾಯಿಸಿದೆ. ಅವುಗಳಲ್ಲಿ ಕೆಲವು ಸಾರ್ವಜನಿಕ ಪ್ರದೇಶದಲ್ಲಿ ಬಿದ್ದು ಹಾನಿಗೊಳಿಸಿವೆ.
ಫೆ. 28ರಂದು ಇರಾನ್ ಪರಮಾಣು ಚಟುವಟಿಕೆಗಳನ್ನು ಪುನಾರರಂಭಿಸಿದೆ ಎಂದು ಅಮೆರಿಕ ಮತ್ತು ಇಸ್ರೇಲ್ ಇರಾನ್‌ನಾದ್ಯಂತ 'ಆಪರೇಷನ್ ಎಪಿಕ್ ಫ್ಯೂರಿ' ಎಂಬ ಹೆಸರಿನಲ್ಲಿ ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿವು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಮಗಳು, ಅಳಿಯ ಮತ್ತು ಮೊಮ್ಮಗಳು ಕುಟುಂಬ ಸಮೇತರಾಗಿ ಕೊಲ್ಲಲ್ಪಟ್ಟರು (ಏಜೆನ್ಸೀಸ್).