Ceasefire 
ವಿದೇಶ

ಯುದ್ಧದ ಕಿಚ್ಚು: ಇರಾನ್ ಮೇಲೆ ದಾಳಿ ಮುಂದುವರಿಸಲು ನೆತನ್ಯಾಹು ಪಟ್ಟು; ಕದನ ವಿರಾಮಕ್ಕೆ ಟ್ರಂಪ್ ಯತ್ನ! | Ceasefire

ಜೆರುಸಲೇಂ/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮಕ್ಕಾಗಿ(Ceasefire) ಒತ್ತಾಯಿಸುತ್ತಿದ್ದರೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತ್ರ ಇರಾನ್ ಮತ್ತು ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ. ಸೋಮವಾರ ನಡೆದ ಮಹತ್ವದ ದೂರವಾಣಿ ಸಂಭಾಷಣೆಯಲ್ಲಿ, ಇಸ್ರೇಲ್ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ನೆತನ್ಯಾಹು, "ನನ್ನ ಮಿತ್ರ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿದ್ದೇನೆ. ಯುದ್ಧದ ಗುರಿಗಳನ್ನು ಸಾಧಿಸಲು ಮತ್ತು ಇಸ್ರೇಲ್‌ನ ಪ್ರಮುಖ ಹಿತಾಸಕ್ತಿಗಳನ್ನು ಕಾಪಾಡುವ ಒಪ್ಪಂದವನ್ನು ಮಾಡಿಕೊಳ್ಳಲು ಈಗ ಸುಸಮಯ ಎಂದು ಟ್ರಂಪ್ ನಂಬಿದ್ದಾರೆ" ಎಂದು ತಿಳಿಸಿದ್ದಾರೆ. ಆದರೆ, ಇದೇ ವೇಳೆ ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಹತ್ತಿಕ್ಕುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಗುಡುಗಿದ್ದಾರೆ.

ಮುಂದುವರಿದ ದಾಳಿ

ಇಸ್ರೇಲ್ ಪ್ರಧಾನಿ ನೀಡಿರುವ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. "ನಾವು ಇರಾನ್ ಮತ್ತು ಲೆಬನಾನ್ ಮೇಲೆ ಸತತ ದಾಳಿ ನಡೆಸುತ್ತಿದ್ದೇವೆ. ಹಿಜ್ಬುಲ್ಲಾಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡುತ್ತಿದ್ದೇವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಇರಾನ್‌ನ ಇಬ್ಬರು ಪ್ರಮುಖ ಪರಮಾಣು ವಿಜ್ಞಾನಿಗಳನ್ನು ನಾವು ಹತ್ಯೆ ಮಾಡಿದ್ದೇವೆ" ಎಂದು ನೆತನ್ಯಾಹು ಬಹಿರಂಗಪಡಿಸಿದ್ದಾರೆ. ಇರಾನ್‌ನ ಪರಮಾಣು ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸುವುದೇ ಇಸ್ರೇಲ್‌ನ ಅಂತಿಮ ಗುರಿ ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿದೆ.

ಇರಾನ್ ಜೊತೆ ಟ್ರಂಪ್ ಸಂಧಾನ?

ಇತ್ತ ವಾಷಿಂಗ್ಟನ್‌ನಲ್ಲಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಇರಾನ್ ಜೊತೆಗಿನ ಮಾತುಕತೆಗಳು 'ಸಕಾರಾತ್ಮಕವಾಗಿವೆ' ಎಂದು ಹೇಳಿದ್ದಾರೆ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಗಳ ಮೇಲೆ ದಾಳಿ ನಡೆಸದಂತೆ ಅಮೆರಿಕ ಮಿಲಿಟರಿಗೆ ಟ್ರಂಪ್ ಐದು ದಿನಗಳ ಕಾಲ ತಡೆ ನೀಡಿದ್ದಾರೆ. "ನಾವು ಇರಾನ್ ಜೊತೆ ಉತ್ತಮ ಮಾತುಕತೆ ನಡೆಸುತ್ತಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ನಾವು ಒಮ್ಮತಕ್ಕೆ ಬರುವ ಸಾಧ್ಯತೆಯಿದೆ" ಎಂದು ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ಇರಾನ್‌ನಿಂದ ತಿರಸ್ಕಾರ: 'ಇದು ಸುಳ್ಳು ಸುದ್ದಿ'

ಆದರೆ, ಟ್ರಂಪ್ ಅವರ ಈ ಹೇಳಿಕೆಯನ್ನು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ತೈಲ ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಕುಶಲತೆಯಿಂದ ಇಳಿಸಲು ಮತ್ತು ಇಸ್ರೇಲ್ ಅನುಭವಿಸುತ್ತಿರುವ ಹಿನ್ನಡೆಯಿಂದ ಜಗತ್ತಿನ ಗಮನ ಬೇರೆಡೆ ಸೆಳೆಯಲು ಅಮೆರಿಕ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ" ಎಂದು ಘಾಲಿಬಾಫ್ ಕಿಡಿಕಾರಿದ್ದಾರೆ.
ಒಂದು ಕಡೆ ಅಮೆರಿಕ ಶಾಂತಿಯ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ ತಾರಕಕ್ಕೇರುತ್ತಿದೆ. ಇದು ಜಾಗತಿಕ ಆರ್ಥಿಕತೆ ಮತ್ತು ಶಾಂತಿಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ,(ಏಜೆನ್ಸೀಸ್​​).