ಇಸ್ರೇಲ್, ಬಹ್ರೇನ್, ಯುಎಇ, ಕತಾರ್ ಮೇಲೆ ಮಿಸೈಲ್​ ಹಾರಿಸಿದ ಇರಾನ್​ 
ವಿದೇಶ

ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ: ಯುಎಇ, ಕತಾರ್ ಮೇಲೆ ಕ್ಷಿಪಣಿ ದಾಳಿ; ಇದು ಕೇವಲ ಟ್ರೇಲರ್ ಎಂದ ಇರಾನ್​! Middle East

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲೆ ಇ್ರೇಲ್​ ಮತ್ತು ಅಮೆರಿಕ ಜಂಟಿ ದಾಳಿ
  • ಇಸ್ರೇಲ್, ಬಹ್ರೇನ್, ಯುಎಇ, ಕತಾರ್ ಮೇಲೆ ಮಿಸೈಲ್​ ಹಾರಿಸಿದ ಇರಾನ್​
  • ನಡೆದೇ ಬಿಡುತ್ತಾ ಮೂರನೇ ಮಹಾಯುದ್ಧ?
ಇರಾನ್/ಇಸ್ರೇಲ್: ಮಧ್ಯಪ್ರಾಚ್ಯ (Middle East) ದಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಬಳಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಏಕಕಾಲದಲ್ಲಿ ಇಸ್ರೇಲ್, ಬಹ್ರೇನ್, ಯುಎಇ, ಕತಾರ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.
ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸ್ಫೋಟಗಳು ಕೇಳಿಬಂದಿದ್ದು, ಕತಾರ್​ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಹಲವಾರು ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದು ವರದಿಯಾಗಿದೆ. ಅಬುಧಾಬಿ ಮತ್ತು ಕತಾರ್‌ನ ದೋಹಾದಲ್ಲಿರುವ ಯುಎಸ್ ವಾಯುನೆಲೆಗಳ ಮೇಲೆ ಇರಾನ್​ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಅಬುಧಾಬಿಯಲ್ಲಿ, ಯುಎಇ ವಾಯುಪಡೆ ಮತ್ತು ಯುಎಸ್ ವಾಯುಪಡೆಗಳು ಅಲ್ ಧಾಫ್ರಾ ವಾಯುನೆಲೆಯನ್ನು ಹಂಚಿಕೊಂಡಿವೆ. ದೋಹಾದಲ್ಲಿ, 24 ಹೆಕ್ಟೇರ್ ವಿಸ್ತೀರ್ಣದ ಅಲ್ ಉದೈದ್ ವಾಯುನೆಲೆಯು ಯುಎಸ್ ಸೆಂಟ್ರಲ್ ಕಮಾಂಡ್‌ನ ಮುಂಚೂಣಿ ಪ್ರಧಾನ ಕಚೇರಿಯಾಗಿದೆ.
ದ್ವೀಪ ಸಾಮ್ರಾಜ್ಯದಲ್ಲಿರುವ ಯುಎಸ್ ನೌಕಾಪಡೆಯ 5 ನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಬಹ್ರೇನ್ ಹೇಳಿದೆ. ಆದರೆ ದಾಳಿಯ ಬಗ್ಗೆ ಇತರೆ ಯಾವುದೇ ಮಾಹಿತಿಯನ್ನು ಇರಾನ್​ ನೀಡಿಲ್ಲ.
ಅಮೆರಿಕದ ಸಹಾಯದಿಂದ ಇಸ್ರೇಲ್ ಇರಾನ್ ಮೇಲೆ ಪೂರ್ವಭಾವಿ ದಾಳಿಗಳನ್ನು ಪ್ರಾರಂಭಿಸಿತು, ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳು ತಮ್ಮ ದೇಶದ ಜನರನ್ನು ರಕ್ಷಿಸುವ ಉದ್ದೇಶವಾಗಿದೆ ಎಂದು ಘೋಷಿಸಿದರು.
ಸ್ವಲ್ಪ ಸಮಯದ ಹಿಂದೆ, ಅಮೆರಿಕ ಸೇನೆಯು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇರಾನಿನ ಆಡಳಿತದಿಂದ ಬೆದರಿಕೆಗಳನ್ನು ತೆಗೆದುಹಾಕುವ ಮೂಲಕ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ ಎಂದು ಟ್ರಂಪ್ ಹೇಳಿದರು.
https://x.com/BoldlySaidblog/status/2027646848668721499?s=20
ದುರುದ್ದೇಶಪೂರಿತ ಜನರಾದ ಇರಾನಿಯನ್ನರ ಬಳಿ ಪರಮಾಣು ಶಸ್ತ್ರವನ್ನು ಹೊಂದಿರಬಾರದು. ಇರಾನಿನ ಬಳಿ ಇರುವ ಪರಮಾಣು ಶಸ್ತ್ರಾಸ್ತ್ರಗಳು ಅಮೆರಿಕದ ಮಿಲಿಟರಿ ಶಕ್ತಿಗೆ ಸವಾಲಾಗಿದೆ. ನಾವು ಅವರ ಕ್ಷಿಪಣಿಗಳನ್ನು ನಾಶಪಡಿಸುತ್ತೇವೆ ಮತ್ತು ಅವರ ಕ್ಷಿಪಣಿ ಉದ್ಯಮವನ್ನು ಸಂಪೂರ್ಣವಾಗಿ ನಾಶಪಡಿಸಲಾಗುವುದು ಎಂದು ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ.

ಇರಾನ್​ ಏನು ಹೇಳುತ್ತಿದೆ?

ಅಮೆರಿಕ ಮತ್ತು ಇಸ್ರೇಲಿನ ಆಸ್ತಿಗಳ ಮೇಲೆ ತಾನು ಮಾಡಿರುವ ದಾಳಿಯನ್ನು ಸಮರ್ಥಿಸಿಕೊಂಡಿರುವ ಇರಾನಿನ ಅಧಿಕಾರಿ, ಇದು ಕೇವಲ ಟ್ರೇಲರ್​, ಮುಂದೆ ಎದುರಾಗಲಿರುವ ಭೀಕರತೆಗೆ ಸಿದ್ಧವಾಗಿರಿ, ನಮ್ಮ ಮುಂದಿನ ದಾಳಿಯೂ ಸಾರ್ವಜನಿಕರವಾಗಿರುತ್ತದೆ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೇರಿಕನ್​ ಮತ್ತು ಇಸ್ರೇಲಿ ಬೇಸ್​ಗಳು ಇರಾನಿನ ಭದ್ರತೆಗೆ ಅಡ್ಡಿಯಾಗಿದ್ದು, ನಾವು ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡದೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್​ ಈ ಯುದ್ಧವನ್ನು ಆರಂಭಿಸಿವೆ. ಈ ಜಂಟಿ ಆಕ್ರಮಣವನ್ನು ನಾವು ತಡೆಯಲಿದ್ದು, ಅವರ ಮೇಲೆ ಪ್ರತಿದಾಳಿ ನಡೆಸಿ, ಅವರನ್ನು ಖಂಡಿತವಾಗಿ ಬಗ್ಗು ಬಡೆಯಲಿದ್ದೇವೆ, ಶರಣಾಗತಿಯ ಮಾತೇ ಇಲ್ಲ ಎಂದು ಇರಾನಿನ ಅಧಿಕಾರಿಯೊಬ್ಬರು ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ಇಸ್ರೇಲ್​ನ ಪ್ರತಿಕ್ರಿಯೆ ಏನು?
ಇರಾನ್​ ನಮ್ಮ ದೇಶಕ್ಕೆ ಬೆದರಿಕೆ ಒಡ್ಡುತ್ತಿದ್ದ ಹಿನ್ನಲೆಯಲ್ಲಿ ಈ ದಾಳಿಯನ್ನು ನಾವು ನಡೆಸಿದ್ದೇವೆ, ನಂತರ ತಮ್ಮ ಮೇಲೆ ಇರಾನ್‌ನಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ದೃಢಪಡಿಸಿವೆ.
ಇರಾನಿನಿಂದ ಇನ್ನೂ ಹೆಚ್ಚಿನ ಪ್ರತಿಕ್ರಿಯೆ ಬರುವ ನಿರೀಕ್ಷಯಿದ್ದು, ಇಸ್ರೇಲಿನಾದ್ಯಂತ ಸೈರನ್​ನ್ನು ಮೊಳಗಿಸಲಾಗುತ್ತಿದ್ದು, ಇರಾನಿನ ಕ್ಷಿಪಣಿಗಳನ್ನು ಹೊಡೆದುರಳಿಸುವ ಸಾಮರ್ಥ್ಯ ತಮಗಿದೆ ಎಂದು ಇಸ್ರೇಲ್​ ಹೇಳಿದೆ. ನಾವು ಸಹ ಇರಾನಿನ ಈ ದಾಳಿಗೆ ಪ್ರತಿಕ್ರಿಯೆ ನೀಡಲಿದ್ದು, ಇಸ್ರೇಲ್​ನ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಸುಮ್ಮನಿರುವ ಪ್ರಮೆಯವೇ ಇಲ್ಲ ಎಂದು ಸ್ಪಷ್ಟ ಎಚ್ಚರಿಕೆಯನ್ನುಇಸ್ರೇಲ್​, ಇರಾನಿಗೆ ರವಾನಿಸಿದೆ,(ಏಜನ್ಸೀಸ್​).