ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಯುದ್ಧದ ಕಾರ್ಮೋಡ 
ವಿದೇಶ

ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಯುದ್ಧದ ಕಾರ್ಮೋಡ: ಕಾಬೂಲ್ ಮೇಲೆ ಭೀಕರ ವೈಮಾನಿಕ ದಾಳಿ; 133 ತಾಲಿಬಾನಿಗಳ ಸಾವು? Pakistan Afghanistan War

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ತಾರಕಕ್ಕೇರಿದ ಗಡಿ ಸಂಘರ್ಷ
  • ಅಫ್ಘಾನ್​ ಮೇಲೆ ಪಾಕ್​ ವೈಮಾನಿಕ ದಾಳಿ
  • ದಾಳಿಯಲ್ಲಿ 133 ತಾಲಿಬಾನಿಗಳು ಸತ್ತಿದ್ದಾರೆಂದ ಪಾಕ್​
  • 55 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡ ತಾಲಿಬಾನ್​ ಸರ್ಕಾರ
ಕಾಬೂಲ್​/ಇಸ್ಲಾಮಾಬಾದ್​: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Pakistan Afghanistan War) ದ ನಡುವಿನ ಪರಿಸ್ಥಿತಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಈದೀಗ ಪಾಕಿಸ್ತಾನವು, ಅಫ್ಘಾನಿಸ್ತಾನದ ಮೇಲೆ ಯುದ್ಧವನ್ನು ಘೋಷಿಸಿದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.
ಶುಕ್ರವಾರ (ಫೆ.27) ಮುಂಜಾನೆ ಇಸ್ಲಾಮಾಬಾದ್​ನಿಂದ ಅಫ್ಘಾನಿಸ್ತಾನದ ಕಾಬೂಲ್​ ಮತ್ತು ಕಂದಹಾರ್​ ಮೇಲೆ ಬಾಂಬಿಂಗ್​ನ್ನು ಮಾಡಲಾಗಿದ್ದು, ಈ ವಾಯುದಾಳಿಯಲ್ಲಿ ಸುಮಾರು 133 ತಾಲಿಬಾನ್​ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಪಾಕ್​ ಮೂಲದ ಸುದ್ದಿ ಸಂಸ್ಥೆಗಳು ವರದಿಮಾಡಿವೆ. ಆದರೆ ಈ ವರದಿಗಳನ್ನು ಅಲ್ಲಗೆಳಿದಿರುವ ಅಫ್ಘಾನಿಸ್ತಾನ ಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಪಾಕಿಸ್ತಾನದ 55 ಸೈನಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುತ್ತಿದೆ.
ಈ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ, ನಮ್ಮ ತಾಳ್ಮೆಯ ಕಟ್ಟೆ ಒಡೆದಿದ್ದು, ನಾವೀಗ ನಿಮ್ಮ ಮೇಲೆ ಮುಕ್ತ ಯುದ್ಧಕ್ಕೆ ಸಜ್ಜಾಗಿದ್ದೇವೆ ಎಂದು ಅಫ್ಘಾನಿಸ್ತಾನದ ವಿರುದ್ಧ ಘಜಾಬ್ ಲಿಲ್ ಹಕ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಎಕ್ಸ್​ (ಟ್ವಿಟರ್​) ನಲ್ಲಿ ಬರೆದುಕೊಂಡಿದ್ದಾರೆ.

ಅಫ್ಘಾನಿಸ್ತಾನ ಏನು ಹೇಳುತ್ತಿದೆ?

ಕಾಬೂಲ್​ನ ಸುತ್ತ-ಮುತ್ತ ಸುಮಾರು ಮೂರು ಕಡೆಗಳಲ್ಲಿ ಪಾಕಿಸ್ತಾನದಿಂದ ವಾಯುದಾಳಿ ನಡೆದಿದ್ದು, ಆದರೆ ಸಾವುಗಳ ಬಗ್ಗೆ ನಿಖರವಾಗಿ ಮಾಹಿತಿ ದೊರೆತಿಲ್ಲ. ಹಾಗೆಯೇ ಪಾಕಿಸ್ತಾನದ ದಕ್ಷಿಣದಲ್ಲಿರುವ ಕಂದಹಾರ್ ಮತ್ತು ಆಗ್ನೇಯದಲ್ಲಿರುವ ಪಕ್ತಿಯಾದಲ್ಲಿಯೂ ವೈಮಾನಿಕ ದಾಳಿ ನಡೆದಿದೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಕಳೆದ ಭಾನುವಾರ ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತೀಕಾರವೆಂಬಂತೆ ಅಫ್ಘಾನಿಸ್ತಾನ ಗುರುವಾರ (ಫೆ.26) ಪಾಕಿಸ್ತಾನದ ಮೇಲೆ ದಾಳಿ ಮಾಡಿ ಸುಮಾರು ಎರಡು ಡಜನ್​ ಪಾಕ್​ ಸೈನಿಕರನ್ನು ಕೊಂದು ಮಿಲಿಟರಿ ಪ್ರದೇಶವನ್ನು ತಮ್ಮ ನಿಯಂತ್ರಣದಲ್ಲಿ ಪಡೆದಿರುವುದಾಗಿ ತಾಲಿಬಾನ್​ ಸರ್ಕಾರ ಹೇಳಿದೆ. ಅಂತೆಯೇ ಈ ಕಾರ್ಯಾಚರಣೆಯಲ್ಲಿ ತನ್ನ 8 ಜನ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಿಕೆ ನೀಡಿದೆ.

ಪಾಕಿಸ್ತಾನದ ನಿಲುವೇನು?

ಕಾಬೂಲ್​, ಕಂದಹಾರ್​ ಮತ್ತು ಪಕ್ತಿಯಾ ಪ್ರಾಂತ್ಯಗಳು ಅಫ್ಘಾನಿಸ್ತಾನದ ಪ್ರಮುಖ ಸೇನಾ ನೆಲೆಗಳಾಗಿದ್ದು ಇವುಗಳನ್ನು ಗುರುತಿಸಿ ವೈಮಾನಿಕ ದಾಳಿಯನ್ನು ನಡೆಸಿದೆ ಎಂದು ವರದಿಯಾಗಿದೆ.
ಕಳೆದ ಭಾನುವಾರ ಪಾಕಿಸ್ತಾನ ನಡೆಸಿದ್ದ ವಾಯುದಾಳಿ ಬಳಿಕ, ಅಫ್ಘಾನಿಸ್ತಾನ, ಪಾಕಿಸ್ತಾನದ ಮೇಲೆ ದಾಳಿ ಮಾಡಿ ಸೈನ್ಯ ಶಿಬಿರಗಳನ್ನು ವಶಪಡಿಸಿಕೊಂಡಿರುವ ವಾದವನ್ನು ಪಾಕ್​ ಅಲ್ಲಗೆಳಿದಿದ್ದು, ಅಫ್ಘಾನಿಸ್ತಾನವು ಪಾಕಿಸ್ತಾನದಲ್ಲಿರುವ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಡುತ್ತಿದೆ ಎಂದು ಆರೋಪಿಸಿದೆ.
ಭಾನುವಾರ ನಾವು ನಡಿಸಿದ ದಾಳಿಯು ತಾಲಿಬಾನಿನ ಭಯೋತ್ಪಾದಕರ ವಿರುದ್ಧವಾಗಿದ್ದು, ಬಳಿಕ ಅಫ್ಘಾನಿಸ್ತಾನ ನಮ್ಮ ಮೇಲೆ ದಾಳಿ ಮಾಡಿದ ಪರಿಣಾಮ ನಾವೀಗ ಅವರ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದೇವೆ ಎಂದು ಪಾಕಿಸ್ತಾನಿ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾವು ಕೈಗೊಂಡ ಈ ದಾಳಿಯಲ್ಲಿ ಕಾಬೂಲ್‌ನಲ್ಲಿ ಕನಿಷ್ಠ ಎರಡು ಬ್ರಿಗೇಡ್ ಪ್ರಧಾನ ಕಚೇರಿಗಳು ನಾಶವಾಗಿದ್ದು, ಕಂದಹಾರ್‌ನಲ್ಲಿ ಒಂದು ಕಾರ್ಪ್ಸ್ ಪ್ರಧಾನ ಕಚೇರಿ ಮತ್ತು ಒಂದು ಬ್ರಿಗೇಡ್ ಪ್ರಧಾನ ಕಚೇರಿ ಮತ್ತು ಕಂದಹಾರ್‌ನಲ್ಲಿ ಒಂದು ಮದ್ದುಗುಂಡು ಡಿಪೋ ಮತ್ತು ಲಾಜಿಸ್ಟಿಕ್ಸ್ ನೆಲೆ ನಾಶವಾಗಿದೆ ಹಾಗೂ ಪಕ್ತಿಯಾದಲ್ಲಿ ಒಂದು ಕಾರ್ಪ್ಸ್ ಪ್ರಧಾನ ಕಚೇರಿ ನಾಶವಾಗಿದೆ ಎಂದು ಅವರು ತಿಳಿಸಿದ್ದಾರೆ,(ಏಜನ್ಸೀಸ್​).