ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಿಡಿ: ಇರಾನ್ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ; ವಿಡಿಯೋ ಬಿಡುಗಡೆ ಮಾಡಿದ ಸೆಂಟ್ರಲ್ ಕಮಾಂಡ್!
ಟೆಹ್ರಾನ್: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹೊರ್ಮುಜ್ ಜಲಸಂಧಿ ಸಮುದ್ರ ಮಾರ್ಗದಲ್ಲಿ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಗೆ ಪ್ರತಿಯಾಗಿ, ಅಮೆರಿಕ ಸೇನೆಯು ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇರಾನ್ ಮೇಲಿನ ಈ ಬ್ರಹ್ಮಾಸ್ತ್ರದ ದೃಶ್ಯಗಳನ್ನು(US Iran Airstrikes Video) ಒಳಗೊಂಡ 37 ಸೆಕೆಂಡುಗಳ ಕಿರು ವಿಡಿಯೋವನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಆವರಿಸಿದೆ.
ಕೆಲವೇ ದಿನಗಳ ಹಿಂದಷ್ಟೇ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಆದರೆ, ಈ ಒಪ್ಪಂದ ಮುರಿದು ಇರಾನ್ ನಡೆಸಿದ ಉದ್ಧಟತನಕ್ಕೆ ಅಮೆರಿಕ ಈಗ ಬಾಂಬ್‌ಗಳ ಮಳೆ ಸುರಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ.
ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದ ಇರಾನ್
ಜೂನ್ 25 ರಂದು ಸಿಂಗಾಪುರ ಧ್ವಜದ ಎಮ್‌ವಿ ಎವರ್ ಲವ್ಲಿ (M/V Ever Lovely) ಎಂಬ ವಾಣಿಜ್ಯ ಸರಕು ಸಾಗಣೆ ಹಡಗು ಓಮನ್ ಕರಾವಳಿಯ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿತ್ತು. ಈ ವೇಳೆ ಇರಾನ್ ಸೇನೆಯು ಒನ್-ವೇ ಅಟ್ಯಾಕ್ ಡ್ರೋನ್ ಬಳಸಿ ಈ ಹಡಗಿನ ಮೇಲೆ ಭೀಕರ ದಾಳಿ ನಡೆಸಿತ್ತು.
ಈ ದಾಳಿಯನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇರಾನ್‌ನ ಈ ಕೃತ್ಯವು ಅಂತಾರಾಷ್ಟ್ರೀಯ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಜಾಗತಿಕ ಸಮುದ್ರ ವ್ಯಾಪಾರದ ಅತ್ಯಂತ ಪ್ರಮುಖ ಮಾರ್ಗದಲ್ಲಿ ಮುಕ್ತ ಸಂಚಾರಕ್ಕೆ ಇರಾನ್ ಒಡ್ಡುತ್ತಿರುವ ಭೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಸೇನೆ ಗುಡುಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಮೆರಿಕದ ಯುದ್ಧ ವಿಮಾನಗಳು ಇರಾನ್‌ನ ಕರಾವಳಿ ರೇಡಾರ್ ಕೇಂದ್ರಗಳು, ಕ್ಷಿಪಣಿ ಲಾಂಚರ್‌ಗಳು ಮತ್ತು ಡ್ರೋನ್ ಸಂಗ್ರಹಣಾ ಗೋದಾಮುಗಳ ಮೇಲೆ ನಿಖರವಾದ ದಾಳಿ ನಡೆಸಿ ಧ್ವಂಸಗೊಳಿಸಿವೆ.
ಇರಾನ್‌ನಿಂದಲೂ ಪ್ರತೀಕಾರದ ರಾಕೆಟ್ ದಾಳಿ!
ಅಮೆರಿಕದ ಈ ವಾಯುದಾಳಿಯ ಬೆನ್ನಲ್ಲೇ ಇರಾನ್ ಕೂಡ ಸುಮ್ಮನೆ ಕೂತಿಲ್ಲ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯು ಈ ಪ್ರತ್ಯಾಕ್ರಮಣಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದು, ಈ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ತಾವು ಕೂಡ ಕ್ಷಿಪಣಿ ದಾಳಿ ನಡೆಸಿರುವುದಾಗಿ ಪ್ರಕಟಿಸಿದೆ.
ಈ ಕುರಿತು ತೀವ್ರ ಆಕ್ರೋಶ ಹೊರಹಾಕಿರುವ ಇರಾನ್ ಸಂಸತ್ತಿನ ಪ್ರಮುಖ ಸದಸ್ಯ ಇಬ್ರಾಹಿಂ ಅಜೀಜಿ, ಅಮೆರಿಕದ ಅಧ್ಯಕ್ಷರು ಕದನ ವಿರಾಮದ ನಿಯಮಗಳಿಗೆ ಬದ್ಧವಾಗಿಲ್ಲ. ಶಾಂತಿ ಮಾತುಕತೆಗಳು ನಡೆಯುತ್ತಿರುವ ಮಧ್ಯದಲ್ಲೇ ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ಕಳ್ಳ ದಾಳಿ ನಡೆಸಿದೆ. ಅಮೆರಿಕದ ಈ ಬೇಜವಾಬ್ದಾರಿತನ ಮತ್ತು ಒಪ್ಪಂದದ ಸ್ಪಷ್ಟ ಉಲ್ಲಂಘನೆಗೆ ಅವರು ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಮತ್ತು ಪಶ್ಚಾತ್ತಾಪ ಪಡಬೇಕಾಗುತ್ತದೆ. ಇನ್ನು ಮುಂದೆ ಜಗತ್ತಿನ ಎದುರು ನಮ್ಮ ಮೇಲೆ ಗೂಬೆ ಕೂರಿಸುವ ಅಮೆರಿಕದ ಜಾಣಾಟಗಳು ನಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಜಾಗತಿಕ ಮಾರುಕಟ್ಟೆಗೆ ನಡುಕ
ಕೆಲವೇ ದಿನಗಳ ಹಿಂದೆ ಅಮೆರಿಕ ಮತ್ತು ಇರಾನ್ ವಾರಗಳ ಕಾಲ ನಡೆದ ಭೀಕರ ಮಿಲಿಟರಿ ಸಂಘರ್ಷಕ್ಕೆ ಬ್ರೇಕ್ ಹಾಕಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಆ ಒಪ್ಪಂದದ ಶಾಯಿ ಒಣಗುವ ಮುನ್ನವೇ ಈ ಹೊಸ ಸಂಘರ್ಷ ಭುಗಿಲೆದ್ದಿದೆ. ಹಾರ್ಮುಜ್ ಜಲಸಂಧಿಯ ಮೂಲಕವೇ ಜಗತ್ತಿನ ಶೇಕಡಾ 20 ಕ್ಕೂ ಹೆಚ್ಚು ಕಚ್ಚಾ ತೈಲ ಸಾಗಣೆಯಾಗುವುದರಿಂದ, ಈ ಭಾಗದಲ್ಲಿ ಮತ್ತೆ ಯುದ್ಧ ಆರಂಭವಾಗಿರುವುದು ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆಗೆ ಭಾರಿ ಆತಂಕ ಮೂಡಿಸಿದೆ,(ಏಜೆನ್ಸೀಸ್).