ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಓಸ್ಲೋ: ಮೊಲ್ಡೊವಾದಿಂದ ನಾರ್ವೆಯ ಓಸ್ಲೋಗೆ ಪ್ರಯಾಣಿಸುತ್ತಿದ್ದ ವೇಳೆ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಅವರಿದ್ದ ವಿಮಾನವು ಡ್ರೋನ್ ಡಿಕ್ಕಿ ಹೊಡೆಯುವ ಅಂಚಿನಿಂದ ಕೂದಲೆಳೆಯುವ ಅಂತರದಲ್ಲಿ ಪಾರಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ನಾರ್ವೆಯ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಡ್ರೋನ್ ಆತಂಕದಿಂದ ಸ್ವಲ್ಪದರಲ್ಲೇ ಬಚಾವ್!
ಫೆಬ್ರವರಿ 2022 ರಿಂದ ರಷ್ಯಾ ನಡೆಸುತ್ತಿರುವ ಭೀಕರ ದಾಳಿಯ ವಿರುದ್ಧ ಯೂಕ್ರೇನ್ ಅನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿರುವ ಝೆಲೆನ್ಸ್ಕಿ, ನಾರ್ವೆಯ ರಾಜ ಹರಾಲ್ಡ್ V ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಾರ್ವೆ ರಾಜಧಾನಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮೊಲ್ಡೊವಾದಿಂದ ವಿಮಾನ ಹಾರಾಟದ ವೇಳೆ ಈ ಭಯಾನಕ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮೊಲ್ಡೊವಾದಿಂದ ಹೊರಡುವಾಗ ಅವರ ವಿಮಾನ ಡ್ರೋನ್‌ಗೆ ಬಹುತೇಕ ಡಿಕ್ಕಿ ಹೊಡೆಯುವಂತಿತ್ತು ಎಂದು ನಾರ್ವೇಜಿಯನ್ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಆದಾಗ್ಯೂ, ಡ್ರೋನ್ ಎಷ್ಟು ಹತ್ತಿರ ಬಂದಿತ್ತು ಎಂಬ ನಿಖರ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಮೊಲ್ಡೊವಾ ಸರ್ಕಾರದಿಂದಲೂ ಘಟನೆ ದೃಢೀಕರಣ!
ನಾರ್ವೆ ಪ್ರಧಾನಿ ಹೇಳಿಕೆಯ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮೊಲ್ಡೊವಾ ಸರ್ಕಾರದ ವಕ್ತಾರರು, ಝೆಲೆನ್ಸ್ಕಿಯ ವಿಮಾನ ಟೇಕ್ ಆಫ್ ಆಗುವ ಮುನ್ನವೇ ಈ ಘಟನೆ ನಡೆದಿದೆ ಎಂದಿದ್ದಾರೆ. ರಷ್ಯಾದ ಡ್ರೋನ್ ಸಂಚರಿಸುತ್ತಿರುವ ಮಾಹಿತಿ ಲಭ್ಯವಾದ ತಕ್ಷಣವೇ ಮೊಲ್ಡೊವನ್ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ವಾಯುಪ್ರದೇಶವನ್ನು ತುರ್ತಾಗಿ ಮುಚ್ಚಿದ್ದರು.
ಇದರಿಂದಾಗಿ ವಿಮಾನದ ನಿರ್ಗಮಣದಲ್ಲಿ ಸ್ವಲ್ಪ ವಿಳಂಬವಾಗಿತ್ತು. ಬಳಿಕ ಡ್ರೋನ್ ಮೊಲ್ಡೊವಾ ಭೂಪ್ರದೇಶದಲ್ಲಿ ಬಿದ್ದಿರುವುದು ಖಚಿತವಾದ ನಂತರವೇ ಝೆಲೆನ್ಸ್ಕಿ ಅವರ ವಿಮಾನಕ್ಕೆ ಹಾರಾಟ ನಡೆಸಲು ಗ್ರೀನ್ ಸಿಗ್ನಲ್ ನೀಡಲಾಯಿತು ಎಂದು ಹೇಳಿದ್ದಾರೆ.
ಓಸ್ಲೋದಲ್ಲಿ ಮಹತ್ವದ ರಕ್ಷಣಾ ಚರ್ಚೆ!
ಸಾವಿನ ದವಡೆಯಿಂದ ಬಚಾವಾಗಿ ನಾರ್ವೆ ತಲುಪಿದ ಝೆಲೆನ್ಸ್ಕಿ, ಅಲ್ಲಿನ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಹಾಗೂ ಪ್ರಮುಖ ರಕ್ಷಣಾ ಉದ್ಯಮದ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿಶೇಷವಾಗಿ ಯುರೋಪಿಯನ್ ಬ್ಯಾಲಿಸ್ಟಿಕ್ ವಿರೋಧಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಉಭಯ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಯುರೋಪಿನ ಆಕಾಶವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಪಾಲುದಾರ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲು ಮುಂದಾಗಿರುವುದು ಸಂತೋಷ ತಂದಿದೆ ಎಂದು ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದೆಡೆ, ಯೂಕ್ರೇನ್‌ನಲ್ಲಿ ರಷ್ಯಾದ ದಾಳಿಗಳು ಮುಂದುವರಿದಿದ್ದು, ಇತ್ತೀಚಿನ ದಾಳಿಗಳಲ್ಲಿ ಕನಿಷ್ಠ ಎಂಟು ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ನಿತ್ಯವೂ ಸಾವು-ನೋವುಗಳ ನಡುವೆಯೂ ಝೆಲೆನ್ಸ್ಕಿ ಅವರು ತಮ್ಮ ದೇಶದ ರಕ್ಷಣೆಗಾಗಿ ನಡೆಸುತ್ತಿರುವ ಸಾಹಸಮಯ ಹೋರಾಟಕ್ಕೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ, (ಏಜನ್ಸೀಸ್).