ಇಥಿಯೋಪಿಯಾದ ಉತ್ತರ ಭಾಗದಲ್ಲಿ ಹಾಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಿಸಿದ ಪರಿಣಾಮ ಸೃಷ್ಟಿಯಾದ ಬೂದಿ ಮೋಡವು ಪ್ರಬಲ ಗಾಳಿಯಿಂದಾಗಿ ಕೆಂಪು ಸಮುದ್ರ ಮಾರ್ಗವಾಗಿ ಯೆಮೆನ್ ಮತ್ತು ಒಮನ್ನತ್ತ ಸಾಗಿತು. ನಂತರ ಅರಬ್ಬಿ ಸಮುದ್ರದ ಮೇಲಿಂದ ಪಶ್ಚಿಮ ಹಾಗೂ ಉತ್ತರ ಭಾರತದತ್ತ ತಲುಪಿತು. ಸೋಮವಾರ ಮೊದಲು ಗುಜರಾತ್ ಪ್ರವೇಶಿಸಿತ್ತು. ಬೂದಿ ಕ್ರಮೇಣ ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್ನತ್ತ ಹಾರಿತು. ಮಂಗಳವಾರ ಸಂಜೆ 7.30ರ ಹೊತ್ತಿಗೆ ಭಾರತ ಪ್ರದೇಶದಿಂದ ಹೊರಬಿದ್ದ ಬೂದಿ ಮೋಡ, ಚೀನಾದತ್ತ ತೆರಳಿತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಜ್ವಾಲಾಮುಖಿಯ ಬೂದಿಯಲ್ಲಿ ಸೂಕ್ಷ್ಮ ಬೂದುಕಣ(ಪಿಎಂ 2.5) ಮತ್ತು ಸಲ್ಫರ್ ಡೈ ಆಕ್ಸೈಡ್ ಅಂಶಗಳು ಇರುವುದರಿಂದ ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಕಣ್ಣು ಉರಿ, ತಲೆನೋವು, ಹಾಗೂ ಕೆಮ್ಮು, ದಮ್ಮು, ಗಂಟಲು ಕೆರೆತ ಜತೆಗೆ ಶ್ವಾಸಕೋಶ ಸಮಸ್ಯೆಗಳು ಉಂಟಾಗಬಹುದು.
ಪ್ರಮುಖ ದುರಂತಗಳು
ಜ್ವಾಲಾಮುಖಿ ಮತ್ತು ಸ್ಥಳ ವರ್ಷ ಮೃತರ ಸಂಖ್ಯೆ
ಟಾಂಬೊರಾ, ಇಂಡೋನೇಷ್ಯಾ; 1815 92 ಸಾವಿರ
ಕ್ರಾಕಟೋವಾ, ಇಂಡೋನೇಷ್ಯಾ; 1883 36 ಸಾವಿರ
ಮಾಂಟ್ ಪೆಲೀ, ಮಾರ್ಟಿನಿಕ್ (ಕೆರಿಬಿಯನ್); 1902- 30 ಸಾವಿರ
ಎಲ್ ಚಿಕಾನ್, ಮೆಕ್ಸಿಕೋ;1982- 2 ಸಾವಿರ
ನೆವಾಡೊ ಡೆಲ್ ರೂಯಿಜ್, ಕೊಲಂಬಿಯಾ; 1985 25 ಸಾವಿರ
ಎಲ್ಲಿ ಉಂಟಾಗುತ್ತದೆ?
ಪ್ರಧಾನವಾಗಿ ಮೂರು ಸ್ಥಳಗಳಲ್ಲಿ ಸಂಭವಿಸುತ್ತದೆ. ಟೆಕ್ಟೋನಿಕ್ ಪ್ಲೇಟ್ಗಳ ಗಡಿಗಳಲ್ಲಿ. ಉದಾಹರಣೆಗೆ, ಮಧ್ಯ&ಅಟ್ಲಾಂಟಿಕ್ ರಿಜ್ (ಪ್ಲೇಟ್ಗಳು ದೂರವಾಗುತ್ತಿರುವಲ್ಲಿ), ರಿಂಗ್ ಆ್ ಫೈರ್ (ಪೆಸಿಫಿಕ್ ಸಾಗರದ ಸುತ್ತ ಪ್ಲೇಟ್ಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಿರುವಲ್ಲಿ). ಹಾಟ್ಸ್ಪಾಟ್ಗಳಲ್ಲಿ.
ಪೆಸಿಫಿಕ್ ಅಗ್ನಿ ವರ್ತುಲ
ಇಂಡೋನೇಷ್ಯಾ ಎಂಬ ಸುಂದರ ದ್ವೀಪರಾಷ್ಟ್ರ ಜ್ವಾಲಾಮುಖಿಗಳಿಗೆ ಹೆಸರುವಾಸಿ. ಇಲ್ಲಿ ಸುಮಾರು 130 ಜೀವಂತ ಜ್ವಾಲಾಮುಖಿಗಳಿವೆ. "ಪೆಸಿಫಿಕ್ ರಿಂಗ್ ಆಫ್ ಫೈರ್' ಅಥವಾ ಅಗ್ನಿ ವರ್ತುಲ ಪ್ರದೇಶದಲ್ಲೇ ಇವೆಲ್ಲ ಇರುವುದು. ಪೆಸಿಫಿಕ್ ಮಹಾಸಾಗರದ ಸುತ್ತಲಿನ ತೀರ ಪ್ರದೇಶವನ್ನೊಳಗೊಂಡ 40 ಸಾವಿರ ಕಿ.ಮೀ. ಭೂಭಾಗವನ್ನು "ಪೆಸಿಫಿಕ್ ರಿಂಗ್ ಆಫ್ ಫೈರ್' ಎಂದು ಕರೆಯಲಾಗುತ್ತದೆ. ಇಡೀ ಜಗತ್ತಿನ ಶೇಕಡ 90ರಷ್ಟು ಸಾಧಾರಣ ಹಾಗೂ ಶೇ. 81ರಷ್ಟು ತೀವ್ರ ಕಂಪನಾಂಕದ ಭೂಕಂಪನಗಳು ಇಲ್ಲಿಯೇ ಸಂಭವಿಸುತ್ತವೆ. ಈ ಪ್ರದೇಶದಲ್ಲಿ ಒಟ್ಟು 452 ಜ್ವಾಲಾಮುಖಿಗಳಿವೆ. ಜಗತ್ತಿನ ಶೇ. 75ರಷ್ಟು ಜೀವಂತ ಹಾಗೂ ಸುಪ್ತ ಜ್ವಾಲಾಮುಖಿಗಳ ತವರು ಈ ಪ್ರದೇಶ. ಇಂಡೋನೇಷ್ಯಾದ ಮೆರಾಪಿಯಲ್ಲಿ 2010ರಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ 353 ಜನರು ಪ್ರಾಣ ಕಳೆದುಕೊಂಡರು ಮತ್ತು ಫುಯೆಗೊದಲ್ಲಿ (ಗ್ವಾಟೆಮಾಲಾ) 2018ರಲ್ಲಿ ನಡೆದ ಜ್ವಾಲಾಮುಖಿ ದುರಂತದಲ್ಲಿ 190 ಜನರು ಮೃತಪಟ್ಟಿದ್ದರು.
ಜ್ವಾಲಾಮುಖಿ ಅಂದ್ರೇನು?
ಭೂಮಿಯ ಮೇಲ್ಮೆ ಅಥವಾ ಚಿಪ್ಪಿನಲ್ಲಿ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಭಾಗದಿಂದ ಕುದಿಯುವ ದ್ರವ ರೂಪದ ಕಲ್ಲು (ಮ್ಯಾಗ್ಮಾ), ಬೂದಿ ಮತ್ತು ಅನಿಲಗಳು ಹೊರ ಚಿಮ್ಮಿ ಲಾವಾ ಆಗಿ ಹರಡುತ್ತವೆ. ಪರ್ವತಗಳ ಶಿಖರ ಭಾಗದಲ್ಲಿ ಜ್ವಾಲಾಮುಖಿಗಳು ಇರುತ್ತವೆ.
ಮ್ಯಾಗ್ಮಾ ಉತ್ಪತ್ತಿ
ಭೂಮಿಯ ಒಳಗೆ ಮ್ಯಾಂಟಲ್ (Mantle) ಎಂಬ ಪದರದಲ್ಲಿ ಬಂಡೆಗಳು ಅತ್ಯಂತ ಬಿಸಿಯಿರುತ್ತವೆ (1000&1500 ಡಿಗ್ರಿ ಸೆಲ್ಸಿಯಸ್). ಒತ್ತಡ ಕಡಿಮೆಯಾದಾಗ ಅಥವಾ ನೀರು/ಇತರ ಅನಿಲಗಳು ಸೇರಿದಾಗ ಈ ಬಂಡೆಗಳು ಕರಗಿ ಮ್ಯಾಗ್ಮಾ ಆಗುತ್ತವೆ. ಮ್ಯಾಗ್ಮಾ ಸುತ್ತಮುತ್ತಲಿನ ಬಂಡೆಗಳಿ ಗಿಂತ ತಾಪಮಾನದಲ್ಲಿ ಹೆಚ್ಚು ಮತ್ತು ಸಾಂದ್ರತೆ ಯಲ್ಲಿ ಕಡಿಮೆ ಇರುತ್ತದೆ. ಆದ್ದರಿಂದ ಅದು ತೇಲುವಂತೆ ಮೇಲೆ ಬರುತ್ತದೆ.
ಸ್ಫೋಟದ ಪರಿ
ಮ್ಯಾಗ್ಮಾ ಮೇಲೆ ಬರುತ್ತ ಅದರಲ್ಲಿರುವ ಅನಿಲಗಳು ಒತ್ತಡದಿಂದ ಹೊರಬರಲು ಪ್ರಯತ್ನಿಸುತ್ತವೆ. ಮ್ಯಾಗ್ಮಾ ಭೂಮಿಯ ಮೇಲ್ಮೆಗೆ ಬಂದಾಗ ಲಾವಾ ಆಗುತ್ತದೆ. ಒತ್ತಡ ತಡೆಯಲಾಗದಷ್ಟು ಹೆಚ್ಚಾದರೆ ಸ್ಫೋಟ ಉಂಟಾಗುತ್ತದೆ. ಮ್ಯಾಗ್ಮಾ ದ್ರವವಾಗಿದ್ದರೆ ಶಾಂತವಾಗಿ ಹರಿದುಹೋಗುತ್ತದೆ.
ಬಾಲಿಯ ಕರಾಳ ನೆನಪು
ಇಂಡೋನೇಷ್ಯಾದ ಬಾಲಿ ದ್ವೀಪದ ಮೌಂಟ್ ಅಗಂಗ್ನಲ್ಲಿ 2017ರ ನವೆಂಬರ್ 26ರಂದು ಜ್ವಾಲಾಮುಖಿ ಹೊರಹೊಮ್ಮಿದ ಪರಿಣಾಮ ಬೆಟ್ಟದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಅಪಾಯಕಾರಿ ವಲಯ ಎಂದು ಘೋಷಿಸಿ, 40 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಜ್ವಾಲಾಮುಖಿಯಿಂದಾಗಿ ಅಗಂಗ್ ಬೆಟ್ಟದ ಮೇಲೆ 3 ಸಾವಿರ ಮೀಟರ್ (9,800 ಅಡಿ) ಎತ್ತರಕ್ಕೆ ಬಿಳಿ ಹೊಗೆ ಮತ್ತು ಬೂದಿ ಚಿಮ್ಮಿತ್ತು. ಜ್ವಾಲಾಮುಖಿ ಸ್ಫೋಟದ ಕೆಲ ದಿನಗಳ ಮುನ್ನ ಬೆಟ್ಟ ಅಲುಗಾಡಿದ ಅನುಭವ ಸ್ಥಳಿಯರಿಗಾಗಿತ್ತು.
ಪತ್ತೆಗೆ ಹೊಸ ತಂತ್ರ
ಬೆಂಕಿಯ ಕಾರಂಜಿಯಂತೆ ಲಾವಾರಸವನ್ನು ಉಗುಳುವ ಜ್ವಾಲಾಮುಖಿಯ ಪರಿಣಾಮದಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲಾಗುತ್ತಿಲ್ಲ. ಜ್ವಾಲಾಮುಖಿ ಯಾವ ಸಂದರ್ಭದಲ್ಲಿ ಸ್ಫೋಟಗೊಳ್ಳಬಹುದು ಎನ್ನುವುದನ್ನು ಕರಾರುವಾಕ್ಕಾಗಿ ಊಹಿಸಲಾಗದ ಕಾರಣ, ಅನಾಹುತದ ಪರಿಣಾಮ ಹೆಚ್ಚು. ಆದ್ದರಿಂದಲೇ ವಿಜ್ಞಾನಿಗಳು ಜ್ವಾಲಾಮುಖಿಯ ಚಲನೆಯನ್ನು ಪತ್ತೆ ಹಚ್ಚಲು ಹೊಸ ತಂತ್ರ ಕಂಡುಕೊಂಡಿದ್ದಾರೆ. ಜ್ವಾಲಾಮುಖಿ ಸ್ಫೋಟಗೊಳ್ಳುವುದನ್ನು "ಫ್ರಿಕ್ಷನಲ್ ಮೆಲ್ಟಿಂಗ್'ನಿಂದ ತಿಳಿದುಕೊಳ್ಳಲು ಸಾಧ್ಯವಿದೆ. ಅಗ್ನಿ ಪರ್ವತಗಳಿಂದ ಮೊದಲು ಹರಿದು ಬರುವ ಶಿಲಾರಸದ ಪ್ರಮಾಣ ಹಾಗೂ ಎದುರಿಸುವ ರ್ಷಣೆಯ ಪ್ರಮಾಣವನ್ನು ಆಧರಿಸಿ ಜ್ವಾಲಾಮುಖಿಯ ಪ್ರಭಾವವನ್ನು ಊಹಿಸಬಹುದಾಗಿದೆ ಎನ್ನುತ್ತಿದ್ದಾರೆ ತಜ್ಞರು. ಭೂಗರ್ಭದ ಅತಿಯಾದ ತಾಪಮಾನದ ಪರಿಣಾಮದಿಂದ ಶಿಲಾರಸ ಹಾಗೂ ಕಲ್ಲುಗಳು ರ್ಷಣೆಗೆ ಒಳಪಟ್ಟು ಕರಗುತ್ತವೆ. ಇದರ ಪರಿಣಾಮ ಒತ್ತಡ ಹೆಚ್ಚಾಗಿ ಶಿಲಾರಸವು ಪರ್ವತದ ತುದಿಯಿಂದ ಭೂಮಿಯ ಮೇಲ್ಭಾಗಕ್ಕೆ ಚಿಮ್ಮುತ್ತದೆ. ಭೂಗರ್ಭದಿಂದ ಒತ್ತಡ ಹೆಚ್ಚುವವರೆಗೂ ಶಿಲಾರಸ ಶಿಲಾಪರ್ವತಕ್ಕೆ ಅಂಟಿಕೊಂಡು ಹರಿಯುವುದನ್ನು ನಿಲ್ಲಿಸಿರುತ್ತದೆ. ಶಿಲಾರಸ ಹರಿಯುವ ವೇಗವನ್ನು ಅವಲಂಬಿಸಿ, ರ್ಷಣೆಯ ಪ್ರಯೋಗಗಳಿಂದ ಜ್ವಾಲಾಮುಖಿಯ ಪ್ರಭಾವವನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು. ಇದರಿಂದ ಅಗ್ನಿ ಪರ್ವತಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸ್ವಲ್ಪ ಮೊದಲೇ ಸೂಚನೆಯನ್ನು ರವಾನಿಸಬಹುದಾಗಿದೆ.
ಭೂಕಂಪನದ ನಂತರ
ರಷ್ಯಾದ ಪೂರ್ವ ಭಾಗದಲ್ಲಿರುವ ಕಮ್ಚಟ್ಕಾದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇದೇ ವರ್ಷದ ಆಗಸ್ಟ್ನಲ್ಲಿ 600 ವರ್ಷಗಳ ಬಳಿಕ ಸ್ಫೋಟಗೊಂಡಿತ್ತು. ಆಗಸ್ಟ್ ಮೊದಲ ವಾರದಲ್ಲಿ ಕಮ್ಚಟ್ಕಾದ ಕರಾವಳಿಯಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ಭೂಕಂಪನದ ತೀವ್ರತೆಗೆ ಜಪಾನ್, ಹವಾಯಿ ಸೇರಿದಂತೆ ಪೆಸಿಫಿಕ್ ಮಹಾಸಾಗರದ ಕರಾವಳಿಯುದ್ದಕ್ಕೂ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಈ ವೇಳೆ ಕಮ್ಚಟ್ಕಾ ಪ್ರದೇಶದಲ್ಲಿರುವ ಸಕ್ರಿಯ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಇದರ ಬೆನ್ನಲ್ಲೇ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿಯೂ ಸ್ಫೋಟಗೊಂಡಿತು. ಇದಕ್ಕೂ ಮುನ್ನ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ 1463ರಲ್ಲಿ ಸ್ಫೋಟಗೊಂಡಿತ್ತು.
ಆ ಬಳಿಕ ಜ್ವಾಲಾಮುಖಿ ಸಕ್ರಿಯ ವಾಗಿರಲಿಲ್ಲ. ಆದರೆ, 2025ರ ಆಗಸ್ಟ್ ನಲ್ಲಿ ಏಕಾಏಕಿ ಸ್ಫೋಟಗೊಂಡ ಪರಿಣಾಮ 6000 ಮೀ. (3.7 ಮೈಲು) ಎತ್ತರದವರೆಗೆ ಬೂದಿ ಹಾರುತ್ತಿತ್ತು.