Vladimir Putin | ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 
ವಿದೇಶ

ಯುರೋಪ್​ಗೆ ಎಚ್ಚರಿಕೆ ಕೊಟ್ಟ ಪುಟಿನ್; ಶಾಂತಿ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ ಎಂದ ರಷ್ಯಾ ಅಧ್ಯಕ್ಷ | Vladimir Putin

ಮಾಸ್ಕೋ: ನಾವು ಯುರೋಪಿನೊಂದಿಗೆ ಯುದ್ಧವನ್ನು ಬಯಸುವುದಿಲ್ಲ. ಆದರೆ ಯುರೋಪ್ ಸಂಘರ್ಷವನ್ನು ಪ್ರಾರಂಭಿಸಿದರೆ, ನಾವು ಸಿದ್ಧರಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಯುರೋಪಿನ ಸೋಲು ಸಂಪೂರ್ಣ ಖಚಿತವಾಗುತ್ತದೆ ಎಂದಿದ್ದಾರೆ.
ಅಮೆರಿಕದೊಂದಿಗಿನ ಶಾಂತಿ ಸಭೆಯ ಮುನ್ನ ಮಾತನಾಡಿ ರಷ್ಯಾ ಅಧ್ಯಕ್ಷ ಪುಟಿನ್​, ಯುರೋಪಿಯನ್ ರಾಷ್ಟ್ರಗಳಿಗೆ ಬಲವಾದ ಸಂದೇಶ ನೀಡಿದ್ದಾರೆ. ಅಲ್ಲದೆ, ಪೂರ್ವ ಯುಕ್ರೇನ್​ ನಗರವಾದ ಪೊಕ್ರೊವ್ಸ್ಕ್ ಅನ್ನು ರಷ್ಯಾ ವಶಪಡಿಸಿಕೊಂಡಿರುವುದು ತನ್ನ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಆರಂಭಿಕ ಉದ್ದೇಶಗಳನ್ನು ಸಾಧಿಸಲು ಬಲವಾದ ಅಡಿಪಾಯವಾಗಿದೆ ಎಮದು ಹೇಳಿದ್ದಾರೆ.
ಈ ಸಂಘರ್ಷಕ್ಕೆ ಪರಿಹಾರವನ್ನು ಯುರೋಪ್ ತಡೆಯುತ್ತಿದೆ ಎಂದು ಪುಟಿನ್ ಗುಡುಗಿದ್ದಾರೆ. ಅಲ್ಲದೆ, ನಾವು ಯುರೋಪಿನೊಂದಿಗೆ ಯುದ್ಧವನ್ನು ಬಯಸುವುದಿಲ್ಲ, ಆದರೆ ಯುರೋಪ್ ಒಂದನ್ನು ಪ್ರಾರಂಭಿಸಿದರೆ, ನಾವು ಸಿದ್ಧರಿದ್ದೇವೆ. ಯುರೋಪಿನ ಸೋಲು ಎಷ್ಟು ಖಚಿತವಾಗಿರುತ್ತದೆಂದರೆ ಶಾಂತಿ ಒಪ್ಪಂದದ ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ ಎಂದು ಪುಟಿನ್ ಎಚ್ಚರಿಸಿದ್ದಾರೆ.

ಯುಕ್ರೇನ್‌ಗೆ ರಷ್ಯಾ ನೇರ ಎಚ್ಚರಿಕೆ

ಯುಕ್ರೇನ್ ಇತ್ತೀಚೆಗೆ ರಷ್ಯಾದ ನೌಕಾಪಡೆಯನ್ನು, ಅಂದರೆ ಹಳೆಯ ತೈಲ ಸಾಗಿಸುವ ಹಡಗುಗಳನ್ನು ಗುರಿಯಾಗಿಸಿಕೊಂಡಿರುವುದರಿಂದ, ರಷ್ಯಾ ಯುಕ್ರೇನ್ ಬಂದರುಗಳು ಮತ್ತು ಹಡಗುಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಲಿದೆ. ಪುಟಿನ್ ಯುಕ್ರೇನ್‌ನ ರಾಜಕೀಯ ನಾಯಕತ್ವವನ್ನು ಟೀಕಿಸಿದ್ದು, ಕೈವ್‌ನ ನಾಯಕರು ನೆಲದ ಪರಿಸ್ಥಿತಿಯಿಂದ ಸಂಪರ್ಕ ಕಡಿತಗೊಳಿದಿಕೊಂಡಿದ್ದಾರೆ. ಅಲ್ಲದೆ, ಅವರು ಆಂತರಿಕ ಸಮಸ್ಯೆಗಳು ಮತ್ತು ಹಗರಣಗಳಲ್ಲಿ ಹೆಚ್ಚು ಮುಳುಗಿದ್ದಾರೆ ಎಂದು ಹೇಳಿದ್ದಾರೆ.

ಟ್ರಂಪ್ ಮಾತುಕತೆ ವಿಫಲ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಅಮೆರಿಕದ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಸುಮಾರು ಐದು ಗಂಟೆಗಳ ಕಾಲ ನಿರ್ಣಾಯಕ ಮತ್ತು ಬಹುನಿರೀಕ್ಷಿತ ಸಭೆ ನಡೆಸಿದರು. ಅಲ್ಲದೆ, ಚರ್ಚೆಗಳು ಅಮೆರಿಕದ ಶಾಂತಿ ಯೋಜನೆಯ ಮೇಲೆ ಕೇಂದ್ರೀಕೃತವಾಗಿರುವುದರಿಂದ ಈ ಸಭೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಅದರೆ, ಫಲಿತಾಂಶವು ನಿರೀಕ್ಷೆಯಂತೆ ಇರಲಿಲ್ಲ. ಸುದೀರ್ಘ ಚರ್ಚೆಗಳ ಹೊರತಾಗಿಯೂ, ಎರಡೂ ಕಡೆಯವರು ಪ್ರಮುಖ ಒಪ್ಪಂದವನ್ನು ತಲುಪಲು ವಿಫಲವಾಗಿದೆ.
ಈ ಸಭೆಯ ಬಗ್ಗೆ ಮಾಹಿತಿ ನೀಡಿದ ಪುಟಿನ್ ಅವರ ಹಿರಿಯ ಸಲಹೆಗಾರ ಯೂರಿ ಉಷಕೋವ್, ಮಾತುಕತೆಗಳು ಉಪಯುಕ್ತ ಮತ್ತು ರಚನಾತ್ಮಕವಾಗಿದ್ದವು. ಆದರೆ, ಎರಡೂ ಕಡೆಯವರು ಒಪ್ಪಿಕೊಳ್ಳಬಹುದಾದ ಯಾವುದೇ ಜಂಟಿ ಪ್ರಸ್ತಾವನೆಯನ್ನು ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).