ಇಂದೋರ್ : ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅಮೋಘ ಶತಕದ ಬಲದಿಂದ ನ್ಯೂಜಿಲೆಂಡ್ ತಂಡ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 41 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದ್ದು, ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡವು ಭಾರತದ ನೆಲದಲ್ಲಿ ಕಳೆದ 37 ವರ್ಷಗಳಲ್ಲೇ ಮೊದಲ ಬಾರಿಗೆ ಏಕದಿನ ಸರಣಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
ಏಕಾಂಗಿ ಹೋರಾಟ ನಡೆಸಿದ ಕಿಂಗ್
338 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದ್ದು, ನಾಯಕ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಬೇಗನೆ ಔಟಾದಾಗ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ, ಮತ್ತೊಮ್ಮೆ ತಾನು ಚೇಸ್ ಮಾಸ್ಟರ್ ಎಂಬುದನ್ನು ನಿರೂಪಿಸಿದರು. ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ ಕಿಂಗ್, ಒತ್ತಡದ ನಡುವೆಯೂ ತಮ್ಮ ವೃತ್ತಿಜೀವನದ 85 ನೇ ಶತಕ ಪೂರೈಸಿದರು.
ಇತ್ತ ಒಂದು ಕಡೆ ವಿರಾಟ್ ರೂಪ ಪ್ರದರ್ಶನವಾಗುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಕೊಹ್ಲಿಗೆ ಸರಿಯಾದ ಸಾಥ್ ಸಿಗಲಿಲ್ಲ. ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೊನೆಯಲ್ಲಿ ಆಲ್ರೌಂಡರ್ ಹರ್ಷಿತ್ ರಾಣಾ ಆಕ್ರಮಣಕಾರಿ ಅರ್ಧಶತಕ ಬಾರಿಸಿದರು ಕೂಡ ಗೆಲುವಿನ ದಡ ಸೇರಲಾಗಲಿಲ್ಲ. ಅಂತಿಮವಾಗಿ 44ನೇ ಓವರ್‌ನಲ್ಲಿ ಕೊಹ್ಲಿ (124 ರನ್) ಔಟಾಗುವುದರೊಂದಿಗೆ ಭಾರತದ ಗೆಲುವು ಮರೀಚಿಕೆಯಾಯಿತು. ಟೀಮ್ ಇಂಡಿಯಾ 296 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಮತ್ತೇ ವಿಲನ್ ಆದ ಮಿಚೆಲ್..ಫಿನಿಕ್ಸ್ನಂತೆ ಎದ್ದು ಬಂದ ಫಿಲಿಪ್ಸ್
ಟಾಸ್ ಗೆದ್ದ ಭಾರತ ತಂಡವು ನ್ಯೂಜಿಲೆಂಡ್‌ಗೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಆರಂಭಿಕ ಆಘಾತದ ನಡುವೆಯೂ ಚೇತರಿಸಿಕೊಂಡ ನ್ಯೂಜಿಲೆಂಡ್, ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಭಾರತದ ಬೌಲಿಂಗ್ ಪಡೆ ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸುವಲ್ಲಿ ವಿಫಲವಾಗಿದ್ದು ದೊಡ್ಡ ಮೊತ್ತಕ್ಕೆ ಕಾರಣವಾಯಿತು.
37 ವರ್ಷಗಳ ನಂತರ ಐತಿಹಾಸಿಕ ಸಾಧನೆ
ನ್ಯೂಜಿಲೆಂಡ್ ತಂಡವು ಕೊನೆಯ ಬಾರಿಗೆ ಭಾರತದಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನು ಗೆದ್ದಿದ್ದು 1988ರಲ್ಲಿ. ಅಂದಿನಿಂದ ಇಂದಿನವರೆಗೆ ಕಿವೀಸ್ ಪಡೆಯು ಭಾರತದ ನೆಲದಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ(ಏಜೆನ್ಸೀಸ್).