ಜಲಪ್ರಳಯಕ್ಕೆ ಸವಾಲಾಗಿ ನಿಂತ ಹಸಿರು ಕಟ್ಟಡದ ರಹಸ್ಯ ಬಿಚ್ಚಿಟ್ಟ 'ಎಕ್ಸ್' ವಿಡಿಯೋ
- ನೇಪಾಳದಲ್ಲಿ ಸಂಭವಿಸಿದ ಹಠಾತ್ ಜಲಪ್ರಳಯಕ್ಕೆ ಕನಿಷ್ಠ 794 ಮಂದಿ ದುರಂತ ಸಾವು
- ಪ್ರವಾಹದ ಭೀಕರತೆಗೆ ಕೊಚ್ಚಿಹೋದ ಅದೆಷ್ಟೋ ಬೃಹತ್ ಕಟ್ಟಡಗಳು, ಕಾರುಗಳು
- ಈ ಮಧ್ಯೆ, ರಣ ಭೀಕರ ಪ್ರವಾಹದಲ್ಲಿ ಕಿಂಚಿತ್ತು ಅಲುಗಾಡಲಿಲ್ಲ ಹಸಿರು ಬಣ್ಣದ ಮನೆ
Nepal Floods: ನೇಪಾಳದಲ್ಲಿ ಸಂಭವಿಸಿದ ಹಠಾತ್ ಜಲಪ್ರಳಯಕ್ಕೆ ಇದೀಗ ನೂರಾರು ಮಂದಿ ದುರಂತ ಅಂತ್ಯ ಕಂಡಿದ್ದು, 2,600ಕ್ಕೂ ಅಧಿಕ ಜನರು ಇನ್ನೂ ಮಿಸ್ಸಿಂಗ್ ಪಟ್ಟಿಯಲ್ಲಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್ ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರ ಜೀವ ಮತ್ತು ಬದುಕುವ ಭರವಸೆಯನ್ನು ಕಸಿದುಕೊಂಡಿರುವುದು ನಿಜಕ್ಕೂ ಘೋರ ದುರಂತ. ಈ ಮಧ್ಯೆ, ರಕ್ಕಸ ಪ್ರವಾಹಕ್ಕೂ ಅಲುಗಾಡದ ಹಸಿರು ಬಣ್ಣದ ಮನೆಯೊಂದು ಸದ್ಯ ಅನೇಕರ ಹುಬ್ಬೇರಿಸಿರುವುದು ಮಾತ್ರವಲ್ಲ, ಕಟ್ಟಡದಲ್ಲಿ ಒಂದು ಭಾಗವು ಕೊಚ್ಚಿಹೋಗದಿರಲು ಕಾರಣವೇನು ಎಂದು ತಿಳಿಯಲು ಜಾಲತಾಣಗಳನ್ನು ತೀವ್ರ ತಡಕಾಡಿದ್ದಾರೆ.
ಭಟೆಕೋಶಿ ನದಿಯು ಉಕ್ಕಿ ಹರಿದಿದ್ದು, ನೇಪಾಳದ ಉತ್ತರ ಭಾಗವನ್ನು ಭಾಗಶಃ ಧ್ವಂಸಗೊಳಿಸಿದೆ. ನದಿಯ ರಭಸದ ಹರಿವಿಗೆ ಸಮೀಪದ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ಮತ್ತೊಂದೆಡೆ, ದೈತ್ಯ ಗಾತ್ರದ ಬಂಡೆಗಳು, ಕೆಸರು ಮತ್ತು ಬುಡಮೇಲಾದ ಮರಗಳಿಂದ ಕೂಡಿದ ಭೋರ್ಗರೆಯುವ ಪ್ರವಾಹದ ಅಲೆಗಳಿಗೆ ದೊಡ್ಡ ದೊಡ್ಡ ಕಟ್ಟಡಗಳೇ ಕೊಚ್ಚಿ ಹೋಗುತ್ತಿರುವಾಗ, ಅಲ್ಲೊಂದು ಹಸಿರು ಬಣ್ಣದ ಮನೆಯೊಂದು ಮಾತ್ರ ಕಿಂಚಿತ್ತು ಅಲುಗಾಡದೆ ಇದ್ದಲ್ಲೇ ಇದ್ದಿದ್ದನ್ನು ಕಂಡು ನೆಟ್ಟಿಗರು ಭಾರಿ ಅಚ್ಚರಿಗೆ ಒಳಗಾದರು. ಎಲ್ಲ ಮನೆಗಳು ಉರುಳಿದರೂ ಇದರೊಂದು ಬಚಾವ್ ಆಗಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಟ್ಟರೆ, ಇನ್ನೂ ಕೆಲವರು ವಿಜ್ಞಾನದ ಮೊರೆ ಹೋಗಿ ಉತ್ತರ ಕಂಡುಕೊಂಡಿದ್ದಾರೆ.
ಬಾಲ್ಕನಿಯಲ್ಲಿದ್ದ ಕುಟುಂಬಸ್ಥರು ಸುರಕ್ಷಿತ
ವಿಡಿಯೋದಲ್ಲಿ ನೋಡಿರುವಂತೆ ಹಸಿರು ಬಣ್ಣದ ಮನೆಯ ಬಾಲ್ಕನಿಯಲ್ಲಿ ಕುಟುಂಬದವರು ಜೀವ ಭಯದಿಂದ ನಿಂತಲ್ಲೇ ನಿಂತಿದ್ದರು. ಸಾವು ತಮ್ಮನ್ನು ಯಾವಾಗ ಕರೆದುಕೊಂಡು ಹೋಗುತ್ತದೋ ಎಂಬ ಆತಂಕದಿಂದಲೇ ಉಸಿರು ಬಿಗಿಹಿಡಿದು ನಿಂತಿದ್ದವರು ಕೊನೆಗೂ ಬದುಕುಳಿದಿದ್ದು ಈಗ ಪವಾಡ ಎನ್ನುವಂತಾಗಿದೆ. ದೃಶ್ಯ ವೈರಲ್ ಬೆನ್ನಲ್ಲೇ ಮನೆ ಕಟ್ಟಿದವನ ಬಗ್ಗೆ ನೆಟ್ಟಿಗರು ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮನೆಯ ಸುತ್ತಮುತ್ತಲೂ ರಭಸದಿಂದ ಹರಿಯುತ್ತಿದ್ದ ನದಿಯು, ವಾಹನಗಳನ್ನು ತನ್ನೊಂದಿಗೆ ಕರೆದುಕೊಂಡು ಹೋದರೂ ಸಹ ಇದೊಂದನ್ನು ಬಿಟ್ಟಿದ್ದು ಹಲವರನ್ನು ಬೆರಗಾಗಿಸಿದೆ. ಬಾಲ್ಕನಿಯಲ್ಲಿದ್ದ ಕುಟುಂಬಸ್ಥರು ಸುರಕ್ಷಿತವಾಗಿ ಪಾರಾಗಿರುವ ಬಗ್ಗೆ ಮಾಹಿತಿಯೂ ಲಭಿಸಿದೆ.
ವಿಡಿಯೋ ವೈರಲ್ ಆದ ಕೆಲವೇ ಕ್ಷಣಗಳಲ್ಲಿ, ನೆಟ್ಟಿಗರು ಈ ಮನೆಯನ್ನು ಕಟ್ಟಿಸಿದ, ಅಷ್ಟು ಭದ್ರ ಅಡಿಪಾಯ ಹಾಕಿದ ವ್ಯಕ್ತಿಗೆ ಖಂಡಿತವಾಗಿ ನೇಪಾಳ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಹಾಸ್ಯಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು, ಹಿಂದಿನ ತಲೆಮಾರಿನವರ ನಿರ್ಮಾಣ ಕೌಶಲ್ಯಕ್ಕೆ ಇದೊಂದು ಅದ್ಭುತ ಹಾಗೂ ಜ್ವಲಂತ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಯನ್ನು ಕಟ್ಟಿದ ರೀತಿಯೇ ಪ್ರವಾಹಕ್ಕೆ ದೊಡ್ಡ ಸವಾಲು ಎಸೆದಿರುವುದು ಎಂದು ಒಂದಷ್ಟು ಮಂದಿ ವಾದಿಸಿದ್ದಾರೆ. ಇದಕ್ಕೆ 'ಎಕ್ಸ್' ವಿಡಿಯೋವೊಂದು ನೆಟ್ಟಿಗರ ಕುತೂಹಲಕಾರಿ ಪ್ರಶ್ನೆಗಳಿಗೆ ದೃಶ್ಯದ ಮೂಲಕ ಉತ್ತರ ಕೊಟ್ಟಿದೆ.
ಇಂಜಿನಿಯರಿಂಗ್ ತಜ್ಞರು ಹೇಳಿದ್ದೇನು?
ನೇಪಾಳದ ಇತರೆ ಮನೆಗಳು ಕ್ಷಣಾರ್ಧದಲ್ಲಿ ಕೊಚ್ಚಿಹೋದರೆ, ಈ ಮನೆ ಮಾತ್ರ ಸುರಕ್ಷಿತವಾಗಿ ಉಳಿಯಲು ಕೇವಲ ಅದೃಷ್ಟವಷ್ಟೇ ಕಾರಣವಲ್ಲ! ಬದಲಿಗೆ ಅದರ ವೈಜ್ಞಾನಿಕ ನಿರ್ಮಾಣ ಶೈಲಿಯು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ರಚನಾತ್ಮಕ ಇಂಜಿನಿಯರಿಂಗ್ ವಿಡಿಯೋ ಮೂಲಕ ತೋರಿಸಿದ್ದಾರೆ. ಆರ್‌ಸಿಸಿ ಫ್ರೇಮ್‌ವರ್ಕ್ (Reinforced Concrete Frame), ಹಿಮಾಲಯದ ಕಣಿವೆ ಪ್ರದೇಶಗಳಲ್ಲಿ ಹೆಚ್ಚಿನ ಮನೆಗಳನ್ನು ಕೇವಲ ಕಲ್ಲು ಮತ್ತು ಮಣ್ಣಿನಿಂದಲೇ ನಿರ್ಮಿಸಲಾಗುತ್ತದೆ. ಇಂತಹ ಮನೆಗಳು ಮೇಲಿನಿಂದ ಬೀಳುವ ತೂಕವನ್ನು ತಡೆಯಬಲ್ಲವೇ ಹೊರತು, ಪಕ್ಕದಿಂದ ಅಪ್ಪಳಿಸುವ (Lateral Pressure) ಪ್ರವಾಹದ ಭಾರಿ ಒತ್ತಡಕ್ಕೆ ತಡೆದುಕೊಳ್ಳಲಾಗದೆ ಒಳಗಿನಿಂದ ಕುಸಿದುಬೀಳುತ್ತವೆ. ಆದರೆ, ಈ ಹಸಿರು ಮನೆಯನ್ನು ಆರ್‌ಸಿಸಿ (RCC) ಟೆಕ್ನಾಲಜಿಯಿಂದಲೇ ನಿರ್ಮಿಸಲಾಗಿದೆ ಎಂದು ವಿವರಿಸಲಾಗಿದೆ.
ಉಕ್ಕಿನ ಕಂಬಿಗಳು (Steel Rebar) ಮನೆಯ ಕಂಬಗಳು, ಬೀಮ್‌ಗಳು ಮತ್ತು ತಡಿಪಾಯವನ್ನು (Foundation) ಒಂದಕ್ಕೊಂದು ಗಟ್ಟಿಯಾಗಿ ಹಿಡಿದಿಟ್ಟುಕೊಂಡು, ಇಡೀ ಕಟ್ಟಡವನ್ನು ಒಂದೇ ದೃಢವಾದ ಅಸ್ಥಿಪಂಜರದಂತೆ (Rigid Skeleton) ಬಿಗಿಯಾಗಿ ಹಿಡಿದಿತ್ತು. ಪ್ರವಾಹವು ಬಂದು ಅಪ್ಪಳಿಸಿದಾಗ, ಈ ಫ್ರೇಮ್ ಆ ಭಾರಿ ಬಲವನ್ನು ಹೀರಿಕೊಂಡು ನೇರವಾಗಿ ಭೂಮಿಗೆ ವರ್ಗಾಯಿಸಿರುವುದು ಗಮನಾರ್ಹ. ಮುಖ್ಯವಾಗಿ, ನದಿ ಹರಿದುಬರುವ ದಿಕ್ಕಿನಲ್ಲಿ ಮನೆಯ ಕಟ್ಟಡ ವಿನ್ಯಾಸವು 'ವಿ' ಶೇಪ್ನಲ್ಲಿರುವುದನ್ನು ಕಾಣಬಹುದು. ಇದು ಪ್ರವಾಹದ ಹೊಡೆತವನ್ನು ತಡೆದುಕೊಳ್ಳಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ.
ನೇಪಾಳದಲ್ಲಿ ಮುಂದುವರಿದ ಸಾವು-ನೋವು
ಹಿಮನದಿ ಕುಸಿತದಿಂದ ಸಂಭವಿಸಿದ ಹಠಾತ್ ಪ್ರವಾಹಕ್ಕೆ ನೇಪಾಳದಲ್ಲಿ ಇಲ್ಲಿಯವರೆಗೆ 794 ಜನರು ಮೃತಪಟ್ಟಿದ್ದು, 2600ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಈ ಭೀಕರತೆಯ ನಡುವೆ ಈ ಹಸಿರು ಬಣ್ಣದ ಮನೆ ಮತ್ತು ಅದರೊಳಗಿದ್ದ ಕುಟುಂಬವು ಸಣ್ಣ ಗಾಯಕ್ಕೂ ಒಳಗಾಗದೆ ಪವಾಡದಂತೆ ಬದುಕುಳಿದ ಘಟನೆಯು ಸದ್ಯ ಇಡೀ ಜಗತ್ತನ್ನೇ ಅಕ್ಷರಶಃ ಬೆರಗಾಗಿಸಿದೆ. ಕೆಲವರು ಇದೊಂದು ವಿಸ್ಮಯವೇ ಸರಿ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).