ಮೊಮೊ-ಚಾನ್ ಎಂಬ ಮಂಗವನ್ನು ಪ್ರೇಯಸಿ ಮಾಡಿಕೊಂಡ ಪಂಚ್!
- ವೈರಲ್ ಮರಿ ಕೋತಿ 'ಪಂಚ್' ಜೀವನದಲ್ಲಿ ಹೊಸ ಬದಲಾವಣೆ
- ಮೊಮೊ-ಚಾನ್ ಎಂಬ ಮಂಗವನ್ನು ಪ್ರೇಯಸಿ ಮಾಡಿಕೊಂಡ ಪಂಚ್!
- ಇವರಿಬ್ಬರ ಅನೋನ್ಯವಅದ ವಿಡಿಯೋ ವೈರಲ್
ಜಪಾನ್: ಪ್ರೀತಿ ಮತ್ತು ಸಾಂತ್ವನ ಎಂಬುದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಎಷ್ಟು ಮುಖ್ಯ ಎಂಬುದಕ್ಕೆ ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದ ಈ 'ಪಂಚ್' (Viral Monkey Punch) ಎಂಬ ಮರಿ ಕೋತಿಯೇ ಸಾಕ್ಷಿ. ತನ್ನ ತಾಯಿಯಿಂದಲೇ ತಿರಸ್ಕರಿಸಲ್ಪಟ್ಟು, ಒಂಟಿತನದಿಂದ ಆಟಿಕೆಯನ್ನು ತಬ್ಬಿಕೊಂಡು ಅಳುತ್ತಿದ್ದ ಈ ಪುಟ್ಟ ಕೋತಿ, ಈಗ ತನ್ನ ಜೀವನದ ಹೊಸ ಹಂತಕ್ಕೆ ಕಾಲಿಟ್ಟಿದೆ.
ಹೌದು, ಪಂಚ್‌ಗೆ ಈಗ ಒಬ್ಬಳು ಆತ್ಮೀಯ ಗೆಳತಿ ಸಿಕ್ಕಿದ್ದಾಳೆ ಅವಳ ಹೆಸರು 'ಮೊಮೊ-ಚಾನ್'. ಇವರಿಬ್ಬರ ಈ ಮುದ್ದಾದ ಬಾಂಧವ್ಯ ಈಗ ಇಡೀ ಇಂಟರ್ನೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆಟಿಕೆಯೇ ಆಗಿತ್ತು ಆಸರೆ.. ಈಗ ಕಾಲ ಬದಲಾಯಿತು
ಜಪಾನೀಸ್ ಮಕಾಕ್ ತಳಿಯ ಪಂಚ್ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯಿಂದ ದೂರವಾಗಿದ್ದ. ತಾಯಿ ಅವನನ್ನು ಸ್ವೀಕರಿಸದಿದ್ದಾಗ, ಮೃಗಾಲಯದ ಸಿಬ್ಬಂದಿ ಅವನಿಗೆ ಒಂದು ಮೃದುವಾದ 'ಒರಾಂಗುಟನ್' ಗೊಂಬೆಯನ್ನು ನೀಡಿದ್ದರು. ತನ್ನ ತಾಯಿಯ ಬೆಚ್ಚನೆಯ ಮಡಿಲು ಸಿಗದ ಆ ಮರಿ ಕೋತಿ, ಆ ಗೊಂಬೆಯನ್ನೇ ಗಟ್ಟಿಯಾಗಿ ಅಪ್ಪಿಕೊಂಡು ದಿನ ಕಳೆಯುತ್ತಿತ್ತು. ಆ ಫೋಟೋಗಳು ಈ ಹಿಂದೆ ಜಗತ್ತಿನಾದ್ಯಂತ ವೈರಲ್ ಆಗಿ ಜನರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದ್ದವು.
ಆದರೆ ಈಗ ಪಂಚ್ ಜೀವನದಲ್ಲಿ ಹೊಸ ಕೋತಿಯ ಪ್ರವೇಶವಾಗಿದೆ. ತನಗಿಂತ ಸ್ವಲ್ಪ ದೊಡ್ಡವಳಾದ ಮೊಮೊ-ಚಾನ್ ಎಂಬ ಹೆಣ್ಣು ಕೋತಿಯೊಂದಿಗೆ ಪಂಚ್ ಈಗ ಹೆಚ್ಚಿನ ಸಮಯ ಕಳೆಯುತ್ತಿದ್ದಾನೆ. ಇವರಿಬ್ಬರೂ ಒಟ್ಟಿಗೆ ಆಟವಾಡುವುದು, ಒಬ್ಬರಿಗೊಬ್ಬರು ಹತ್ತಿರ ಕುಳಿತುಕೊಳ್ಳುವುದು ಮತ್ತು ಮುದ್ದಾಗಿ ಚುಂಬಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. "ಪಂಚ್ ಈಗ ಒಂಟಿಯಲ್ಲ, ಅವನಿಗೆ ಬೇರ್ಪಡಿಸಲಾಗದ ಗೆಳತಿ ಸಿಕ್ಕಿದ್ದಾಳೆ" ಎಂದು ಅವನ ಆರೈಕೆದಾರರು ಖುಷಿಯಿಂದ ಹಂಚಿಕೊಂಡಿದ್ದಾರೆ.
ನೆಟ್ಟಿಗರ ಫನ್ನಿ ಕಾಮೆಂಟ್ಸ್!
ಪಂಚ್ ಮತ್ತು ಮೊಮೊ-ಚಾನ್ ಜೋಡಿಯನ್ನು ನೋಡಿ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ಬಳಕೆದಾರರು, ಪಂಚ್‌ಗೆ ಗೆಳತಿ ಸಿಕ್ಕಿದಳು, ಆದರೆ ನೀವು ಇನ್ನೂ ಒಂಟಿಯಾಗಿದ್ದೀರಿ! ಎಂದು ಸಿಂಗಲ್ಸ್ ಕಾಲೆಳೆದಿದ್ದಾರೆ. ಇನ್ನೊಬ್ಬರು, ಈ ಕೋತಿ ನಿಜಕ್ಕೂ ಅದೃಷ್ಟವಂತ, ಸುಂದರವಾದ ಮತ್ತು ಕಾಳಜಿ ಮಾಡುವ ಗೆಳತಿ ಸಿಕ್ಕಿದ್ದಾಳೆ ಎಂದು ಹಾರೈಸಿದ್ದಾರೆ.
ಆದರೆ ಕೆಲವರು ಪ್ರಾಣಿಗಳನ್ನು ಮನುಷ್ಯರಂತೆ ಬಿಂಬಿಸುವುದನ್ನು ನಿಲ್ಲಿಸಿ, ಅದೊಂದು ಪ್ರಾಣಿ ಅಷ್ಟೇ ಎಂದು ಗರಂ ಆಗಿದ್ದಾರೆ. ಅತಿ ಹೆಚ್ಚು ಪ್ರೀತಿ ಮತ್ತು ಕಾಳಜಿಯ ಕೊರತೆಯಿಂದ ಪಂಚ್ ಈ ರೀತಿ ಪ್ರೀತಿ ತೋರುತ್ತಿದ್ದಾನೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಹೋರಾಟದಿಂದ ಗೆಲುವಿನತ್ತ
ಪಂಚ್‌ನ ಈ ಪಯಣ ಸುಲಭದ್ದಾಗಿರಲಿಲ್ಲ. ಗುಂಪಿನ ಇತರ ಕೋತಿಗಳು ಆರಂಭದಲ್ಲಿ ಅವನನ್ನು ಸೇರಿಸಿಕೊಳ್ಳದೆ ಪೀಡಿಸುತ್ತಿದ್ದವು. ಆದರೆ ಮೃಗಾಲಯದ ಸಿಬ್ಬಂದಿಯ ವಿಶೇಷ ಕಾಳಜಿಯಿಂದಾಗಿ ಪಂಚ್ ಈಗ ಸಾಮಾಜಿಕವಾಗಿ ಬೆರೆಯುವುದನ್ನು ಕಲಿತಿದ್ದಾನೆ. ಅವನ ಆಟಿಕೆ ಈಗ ಅವನ ಪಕ್ಕದಲ್ಲಿದ್ದರೂ, ಅವನ ಸಂಪೂರ್ಣ ಗಮನ ಈಗ ಮೊಮೊ-ಚಾನ್ ಕಡೆಗಿದೆ ಎಂದರೆ ಸುಳ್ಳಲ್ಲ,(ಏಜನ್ಸೀಸ್).