ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಮೊಹಮ್ಮದ್ ಯೂನಸ್ ಮತ್ತು
ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ಗುಂಪು ಹತ್ಯೆಗೀಡಾದ ದೀಪು ದಾಸ್ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಮತ್ತು ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂಬುದಕ್ಕೆ ಯಾರೂ ಪುರಾವೆ ನೀಡಲು ಸಾಧ್ಯವಿಲ್ಲ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಹೇಳಿದ್ದಾರೆ.
ಈ ಬಗ್ಗೆ ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಈ ವಿಷಯದ ಬಗ್ಗೆ ಆಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ದೀಪು ಚಂದ ದಾಸ್ ಹತ್ಯೆಯ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಹಸೀನಾ, ದೀಪು ದಾಸ್ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು. ದೀಪು ಸುಳ್ಳು ಮತ್ತು ದ್ವೇಷದ ಜಾಲದಲ್ಲಿ ಸಿಲುಕಿದ್ದ ಮುಗ್ಧ ಆತ್ಮವಾಗಿದೆ. ಆದರೆ ನನ್ನ ಮಾತುಗಳ ಮೇಲೆ ನಂಬಿಕೆಯಿಡಿ ನಾನು ಜೀವಂತವಾಗಿರುವವರೆಗೆ, ಅವರಿಗೆ ಮತ್ತು ಅವರ ಪ್ರೀತಿಪಾತ್ರರಿಗೆ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ತನ್ನ ದೀರ್ಘಾವಧಿಯ ಅವಧಿಯಲ್ಲಿ ಜಾತ್ಯತೀತತೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳನ್ನು ಪ್ರತಿಪಾದಿಸಿದ ಪದಚ್ಯುತ ನಾಯಕಿ ಹಸೀನಾ, ಮಧ್ಯಂತರ ಸರ್ಕಾರವು ಬಿಕ್ಕಟ್ಟನ್ನು ನಿಭಾಯಿಸುವ ರೀತಿಯನ್ನು ಖಂಡಿಸಿದ್ದಾರೆ. ಅಲ್ಲದೆ, ಈ ಸರ್ಕಾರವು ಆಮೂಲಾಗ್ರ ಅಂಶಗಳನ್ನು ನಿಗ್ರಹಿಸಲು ವಿಫಲವಾಗಿದೆ. ದೇಶದಲ್ಲಿ ಹಿಂಸಾಚಾರಕ್ಕೆ ಪ್ರವರ್ಧಮಾನಕ್ಕೆ ಬರಲು ಅವಕಾಶ ನೀಡುತ್ತಿದೆ. ರಾಷ್ಟ್ರದ ಜಾತ್ಯತೀತ ರಚನೆಗೆ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಹಸೀನಾ ಆರೋಪಿಸಿದ್ದಾರೆ. ಇದು ನಾವು ನಿರ್ಮಿಸಿದ ಬಾಂಗ್ಲಾದೇಶವಲ್ಲ, ದೀಪು ರಕ್ಷಣೆಗೆ ಅರ್ಹರು, ಕಿರುಕುಳಕ್ಕಲ್ಲ ಎಂದು ಯೂನಿಸ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಬಾಂಗ್ಲಾ ಹೈಕಮಿಷನರ್ ಕಚೇರಿ ಎದುರು ಬೃಹತ್ ಪ್ರತಿಭಟನೆ
ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿ ಅನೇಕ ಹಿಂದೂ ಸಂಘಟನೆಗಳು ನವದೆಹಲಿಯ ಬಾಂಗ್ಲಾ ಹೈಕಮಿಷನರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತರು & ಪೊಲೀಸರ ನಡುವೆ ಸಂಘರ್ಷ ವಾಗ್ವಾದ ನಡೆದಿದ್ದು, ಲಾಠಿ ಚಾರ್ಜ್ ಮಾಡಲಾಗಿದೆ.
ಡಿ. 18ರಂದು ಮೈಮೆನ್‌ಸಿಂಗ್‌ನ ಬಲುಕಾದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ 25 ವರ್ಷದ ದೀಪು ಚಂದ್ರ ದಾಸ್ ಅವರನ್ನು ಗುಂಪು ಥಳಿಸಿ ಹತ್ಯೆ ಮಾಡಲಾಗಿತ್ತು. ಅದನ್ನು ಖಂಡಿಸಿ ಹಿಂದೂ ಸಂಘಟನೆಗಳು ಕೇಸರಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ, ಭಾರೀ ಪೊಲೀಸ್ ಭದ್ರತೆಯ ಹೊರತಾಗಿಯೂ ಪ್ರತಿಭಟನಾಕಾರರು ಹಲವಾರು ಬ್ಯಾರಿಕೇಡ್‌ಗಳನ್ನು ಭೇದಿಸಿ ಬಾಂಗ್ಲಾ ರಾಯಭಾರಿ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ.
ಪ್ರತಿಭಟನಾಕಾರರ ಭದ್ರತಾ ಬ್ಯಾರಿಕೇಡ್‌ಗಳನ್ನು ತಳ್ಳಿದಾಗ ಉದ್ವಿಗ್ನತೆ ಹೆಚ್ಚಾಯಿತು. ಈ ವೇಳೆ "ಭಾರತ್ ಮಾತಾ ಕಿ ಜೈ", "ಯೂನುಸ್ ಸರ್ಕಾರ್ ಹೋಶ್ ಮೇ ಆವೋ" ಮತ್ತು "ಹಿಂದೂ ಹತಿಯಾ ಬಂದ್ ಕರೋ" ಎಂದು ಘೋಷಣೆಗಳು ಮೊಳಗಿವೆ.
ಇಂದು ನಾವು ಧ್ವನಿ ಎತ್ತದಿದ್ದರೆ ನಾನು ಕೂಡ ದೀಪು ಆಗುತ್ತೇನೆ, ನೀವೂ ದೀಪು ಆಗುತ್ತೀರಿ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಇದು (ಭಾರತ) ರಾಮ ಮತ್ತು ಕೃಷ್ಣನ ನಾಡು. ನಾವು ಯಾರನ್ನೂ ಕೊಲ್ಲುವುದಿಲ್ಲ, ಆದರೆ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಅಲ್ಲಿ ಅತ್ಯಾಚಾರ ಮಾಡಲಾಗುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).