ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್
- ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್
- ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸದೇ ಹೋದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದ ಅಮೆರಿಕ ಅಧ್ಯಕ್ಷ
- ವೆನೆಜುವೆಲಾದ ಮೇಲೆ ಎರಡನೇ ದಾಳಿ ಮಾಡುವುದು ಅಸಾಧ್ಯವೇನಲ್ಲ ಎಂದು ಟ್ರಂಪ್ ಖಡಕ್ ಎಚ್ಚರಿಕೆ
ಕ್ಯಾರಕಸ್: ನಿಕೋಲಸ್ ಮಡುರೊ ಬಂಧನದ ಬಳಿಕ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆಯಾಗಿ ನೇಮಕವಾಗಿರುವ ಡೆಲ್ಸಿ ರೊಡ್ರಿಗಸ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( Donald Trump ) ಅವರು ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ರೋಡ್ರಿಗಸ್, ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೇ ಹೋದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅಟ್ಲಾಂಟಿಕ್ ಮ್ಯಾಗಜಿನ್ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ಅಮೆರಿಕ ಸೇನೆ ವಶಕ್ಕೆ ಪಡೆದ ಬೆನ್ನಲ್ಲೇ ಟ್ರಂಪ್ ಅವರು ರೋಡ್ರಿಗಸ್ರನ್ನು ಹೊಗಳಿದ್ದರು. ಹಂಗಾಮಿ ಅಧ್ಯಕ್ಷೆಯಾಗಿ ಆಕೆ ನೇಮಕವಾದ ಬೆನ್ನಲ್ಲೇ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರೊಡ್ರಿಗಸ್ ಏನಾದರೂ ಅಮೆರಿಕದೊಂದಿಗೆ ಸಹಕರಿಸದೇ ಹೋದರೆ ವೆನೆಜುವೆಲಾದ ಮೇಲೆ ಎರಡನೇ ದಾಳಿ ಮಾಡುವುದು ಅಸಾಧ್ಯವೇನಲ್ಲ ಎಂದು ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈಗಷ್ಟೇ ಪ್ರಮಾಣವಚನ ಸ್ವೀಕರಿಸಿದ ಜನರೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ. ನಾವು ಎರಡನೇ ದಾಳಿಗೂ ಸಿದ್ಧರಾಗಿದ್ದೇವೆ ಆದರೆ, ನಮಗೆ ಅದು ಅಗತ್ಯವಾಗುತ್ತದೆ ಎಂದು ಭಾವಿಸುವುದಿಲ್ಲ. ಸರಿಯಾದ ಸಮಯದಲ್ಲಿ ನಾವು ಚುನಾವಣೆಗಳನ್ನು ನಡೆಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ನಿನ್ನೆಯಷ್ಟೇ ನಾವೇ ವೆನೆಜುವೆಲಾ ಆಡಳಿತವನ್ನು ವಹಿಸಿಕೊಳ್ಳುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಇದೀಗ, ರೊಡ್ರಿಗಸ್ ಹಂಗಾಮಿ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್ ಅವರ ಈ ಎಚ್ಚರಿಕೆ ಬಂದಿದೆ. ಅಲ್ಲದೆ, ವೆನೆಜುವೆಲಾದಲ್ಲಿರುವ ತೈಲ ಮತ್ತು ಇತರ ಸಂಪನ್ಮೂಲಗಳಿಗೆ ಅಮೆರಿಕಕ್ಕೆ ಸಂಪೂರ್ಣ ಅವಕಾಶ ನೀಡಬೇಕೆಂದು ಟ್ರಂಪ್ ಇದೇ ಸಂದರ್ಭದಲ್ಲಿ ಹೇಳಿದರು.
ಇನ್ನು ಅಮೆರಿಕ ಪಡೆಗಳು ಕ್ಯಾರಕಾಸ್ ಮೇಲೆ ದಾಳಿ ಮಾಡಿ ಎಡಪಂಥೀಯ ನಾಯಕ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಂಡ ಬಳಿಕ ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿರುವ ರೊಡ್ರಿಗಸ್, ಅಮೆರಿಕದೊಂದಿಗೆ "ಸಮತೋಲಿತ ಮತ್ತು ಗೌರವಾನ್ವಿತ" ಸಂಬಂಧಕ್ಕೆ ಕರೆ ನೀಡಿದ್ದಾರೆ. ಯುಎಸ್ ಮತ್ತು ವೆನೆಜುವೆಲಾ ನಡುವೆ ಸಮತೋಲಿತ ಮತ್ತು ಗೌರವಾನ್ವಿತ ಸಂಬಂಧದತ್ತ ಸಾಗುವುದು ನಾವು ಆದ್ಯತೆಯೆಂದು ಪರಿಗಣಿಸುತ್ತೇವೆ ಎಂದು ರೊಡ್ರಿಗಸ್ ತಮ್ಮ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಮಡುರೊ ಬಂಧನ ಏಕೆ?
ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರು ಶ್ವೇತಭವನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 2025ರ ಆಗಸ್ಟ್ 09ರಂದು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸುಳಿವು ನೀಡಿದವರಿಗೆ 437 ಕೋಟಿ ರೂ. ನೀಡುವುದಾಗಿ ಬಂಪರ್ ಆಫರ್ ಘೋಷಿಸಿದ್ದರು. ಇದಕ್ಕೆ ಕಾರಣ ನೀಡಿರುವ ಅಮೆರಿಕ ಅಟಾರ್ನಿ ಜನರಲ್ ಪಂಬೊಂಡಿ, ನಿಕೋಲಸ್ ಮಡುರೊ ಎಂಬ ವ್ಯಕ್ತಿ ಟ್ರೆನ್ ಡಿ ಅರಾಗುವಾ, ಸಿನಾಲೋವಾ ಮತ್ತು ಕಾರ್ಟೆಲ್ ಆಫ್ ದಿ ಸನ್ಸ್ (ಕಾರ್ಟೆಲ್ ಡಿ ಸೊಲೈಲ್) ನಂತಹ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಘೋರ ಹಿಂಸಾಚಾರವನ್ನು ನಡೆಸುತ್ತಿದ್ದ. ಆತ ವಿಶ್ವದ ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆದಾರರಲ್ಲಿ ಒಬ್ಬ. ಅಮೆರಿಕಕ್ಕೆ ಫೆಂಟನಿಲ್ ಮತ್ತು ಇತರ ಮಾದಕ ದ್ರವ್ಯಗಳನ್ನು ಬೆರೆಸಿದ ಕೊಕೇನ್ ಅನ್ನು ಪೂರೈಸುವ ಮೂಲಕ ಡ್ರಗ್ ಜಾಲಗಳಲ್ಲಿ ತೊಡಗಿದ್ದಾನೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಮಡುರೊ ಯಾವುದೇ ಸಂದರ್ಭದಲ್ಲೂ ಟ್ರಂಪ್ ಆಡಳಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಡುರೊ ಅಪರಾಧಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದರು. ಕಡೆಗೂ, ಮಡುರೊ ಅಮೆರಿಕ ಕೈಗೆ ಸಿಕ್ಕಿಬಿದ್ದಿದ್ದಾರೆ.
ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಸಂಘರ್ಷ ಹೊಸದೇನಲ್ಲ. 2020ರಿಂದ, ಮಡುರೊ ಮೇಲೆ ಮಾದಕ ದ್ರವ್ಯ, ಭಯೋತ್ಪಾದನೆ ಮತ್ತು ಕೊಕೇನ್ ಕಳ್ಳಸಾಗಣೆ ಆರೋಪಗಳ ಸರಮಾಲೆಯೇ ಇದೆ. ಅವರ ಮೇಲೆ ಯುನೈಟೆಡ್ ಸ್ಟೇಟ್ಸ್ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಇದು ರಾಜತಾಂತ್ರಿಕ ಒತ್ತಡವನ್ನೂ ತಂದಿತು. ಆದಾಗ್ಯೂ, 2024ರಲ್ಲಿ, ಮಡುರೊರನ್ನು ವೆನೆಜುವೆಲಾದ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು. ಇದನ್ನು ಖಂಡಿಸಿರುವ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಅನೇಕ ಲ್ಯಾಟಿನ್ ಅಮೇರಿಕನ್ ದೇಶಗಳು ಚುನಾವಣೆಯನ್ನು ಅಕ್ರಮ ಎಂದು ಬಣ್ಣಿಸಿತು,(ಏಜೆನ್ಸೀಸ್).