Venezuela Earthquake Hector Bello Wife Death
- ವೆನೆಜುವೆಲಾದಲ್ಲಿ ಸರಣಿ ಭೂಕಂಪ ಸಾವಿರಕ್ಕೂ ಹೆಚ್ಚು ಮಂದಿ ಸಾವು, ಮುಂದುವರಿದ ಕಾರ್ಯಾಚರಣೆ
- ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ತಾಯಿಯ ರಕ್ಷಣೆಯಲ್ಲಿ ಬದುಕುಳಿದ ಮಗು
- ಪತ್ನಿ ಆಂಡ್ರಿಯಾ ಸಾವಿಗೆ ಫುಟ್‌ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಭಾವುಕ ಪೋಸ್ಟ್
Venezuela Earthquake Hector Bello Wife Death: ತಾಯಿಯ ಪ್ರೀತಿಗಿಂತ ಮಿಗಿಲಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದಕ್ಕೆ ವೆನೆಜುವೆಲಾದ ಭೀಕರ ಭೂಕಂಪದ ಮಧ್ಯೆ ಸಾಕ್ಷಿಯೊಂದು ಸಿಕ್ಕಿದೆ. ಇತ್ತೀಚೆಗೆ ಸಂಭವಿಸಿದ ಸರಣಿ ಭೂಕಂಪದ ವೇಳೆ ಕುಸಿಯುತ್ತಿದ್ದ ಅಪಾರ್ಟ್‌ಮೆಂಟ್ ಕಟ್ಟಡದ ಅವಶೇಷಗಳ ನಡುವೆ, ತನ್ನ ಒಂದು ವರ್ಷದ ಮಗುವಿಗೆ ತನ್ನದೇ ದೇಹವನ್ನು ಕವಚವಾಗಿಸಿ ಪ್ರಾಣ ಉಳಿಸಿದ ತಾಯಿಯೊಬ್ಬರ ಸಾಹಸ ಮನಕಲಕುವಂತೆ ಮಾಡಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫುಟ್‌ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಅವರ ಭಾವುಕ ಪೋಸ್ಟ್ ವೈರಲ್ ಆಗಿದೆ.
ವೆನೆಜುವೆಲಾದ ಭೀಕರ ಭೂಕಂಪ
ಹೌದು, ಜೂನ್.24ರಂದು ವೆನೆಜುವೆಲಾದಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಕೇವಲ 39 ಸೆಕೆಂಡ್‌ಗಳ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿತ್ತು. ಈ ಮಹಾ ದುರಂತದಲ್ಲಿ ದೇಶದ ಹಲವು ಭಾಗ ನೆಲಸಮಗೊಂಡಿದ್ದು, ಸಾವಿನ ಸಂಖ್ಯೆ 1,430ಕ್ಕೆ ಏರಿಕೆಯಾಗಿದೆ.68,900ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ಹಂಚಿಕೊಂಡಿದೆ. ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರ ಗೋಳಾಟ ಗಲ್ಲಿಗಲ್ಲಿಯಲ್ಲಿಯೂ ಮನಕಲಕುವಂತೆ ಮಾಡಿದೆ.
ಅಮ್ಮನ ಆಶ್ರಯದಲ್ಲಿದ್ದ ಮಗು ಸೇಫ್
ವೆನೆಜುವೆಲಾದ ಪ್ರಸಿದ್ಧ ಫುಟ್‌ಬಾಲ್ ಕ್ಲಬ್ 'ಮಾರಿಟಿಮೊ ಡಿ ಲಾ ಗ್ವೈರಾ' ತಂಡದ ಡಿಫೆಂಡರ್ ಹೆಕ್ಟರ್ ಬೆಲ್ಲೊ ಅವರ ಪತ್ನಿ ಆಂಡ್ರಿಯಾ ಅವಶೇಷಗಳ ಮಧ್ಯೆ ತಮ್ಮ ಮಗಳ ಪ್ರಾಣ ಉಳಿಸಿ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹೆಕ್ಟರ್ ಬೆಲ್ಲೊ ಪೋಸ್ಟ್ ಹಂಚಿಕೊಂಡಿದ್ದಾರೆ
ಬೆನ್ನೇ ರಕ್ಷಾ ಕವಚ
ಭೂಕಂಪದಿಂದ ಬೆಲ್ಲೊ ವಾಸವಿದ್ದ ಅಪಾರ್ಟ್‌ಮೆಂಟ್ ಕಟ್ಟಡ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ, ಬೆಲ್ಲೊ ಅವರ ಒಂದು ವರ್ಷದ ಹೆಣ್ಣು ಮಗು 'ಅಲಾನಾ' ಪವಾಡ ಸದೃಶವಾಗಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಮಗುವಿಗೆ ಯಾವುದೇ ಹಾನಿಯಾಗದಂತೆ ಕಾಪಾಡಿಕೊಳ್ಳಲು ಬೆನ್ನನ್ನು ಕವಚವಾಗಿಟ್ಟುಕೊಂಡು ರಕ್ಷಿಸಿದ್ದರು. ಮಗುವನ್ನು ತಕ್ಷಣವೇ ಕರಾಕಸ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಪತ್ನಿ ಬಗ್ಗೆ ಭಾವುಕ ಪೋಸ್ಟ್
ತೀವ್ರ ದುಃಖದಲ್ಲಿರುವ ಹೆಕ್ಟರ್ ಬೆಲ್ಲೊ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿಯ ನಿಧನಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
"ಅಮ್ಮಾ.. ನೀನೆ ನಮ್ಮ ಪಾಲಿನ ಹೀರೋ. ನಮ್ಮ ಮಗಳು ಬೆಳೆದು ದೊಡ್ಡವಳಾದ ಮೇಲೆ ನೀನು ಎಷ್ಟು ಅದ್ಭುತವಾಗಿದ್ದೆ ಮತ್ತು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದನ್ನು ನಾನು ಅವಳಿಗೆ ನೆನಪಿಸುತ್ತಲೇ ಇರುತ್ತೇನೆ. ತನ್ನ ಕೊನೆಯುಸಿರಿರುವವರೆಗೂ ಮಗಳನ್ನು ಕೈಬಿಡದ ಧೀರ ಮಹಿಳೆ ನೀನು ಎಂದು ನಾನು ಅವಳಿಗೆ ಹೆಮ್ಮೆಯಿಂದ ಹೇಳುತ್ತೇನೆ, ಎಂದು ಬರೆದುಕೊಂಡಿದ್ದಾರೆ.
ನನ್ನ ಮಗಳೇ.. ನೀನು ಧೈರ್ಯವಾಗಿರಬೇಕು. ಇನ್ಮುಂದೆ ನಿನ್ನ ತಂದೆ ಯಾವಾಗಲೂ ನಗುತ್ತಾ ಇರದಿರಬಹುದು. ಆದರೆ ನಿನ್ನನ್ನು ಜಗತ್ತಿನಲ್ಲೇ ಅತ್ಯಂತ ಸಂತೋಷದ ಹೆಣ್ಣುಮಗಳನ್ನಾಗಿ ಬೆಳೆಸುವ ಭರವಸೆ ನಾನು ನೀಡುತ್ತೇನೆ. ಈಗ ನೀನು ಮತ್ತು ನಾನು ಮಾತ್ರ ಉಳಿದಿದ್ದೇವೆ, ನಮ್ಮನ್ನು ಅಮ್ಮ ಸ್ವರ್ಗದಿಂದ ನೋಡಿಕೊಳ್ಳುತ್ತಿದ್ದಾಳೆ ಎಂದು ಭಾವುಕ ನುಡಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).