ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಅವಳಿ ಭೂಕಂಪ
- ವೆನೆಜುವೆಲಾದಲ್ಲಿ ಭೀಕರ ಅವಳಿ ಭೂಕಂಪ
- ಜೂ.24ರಂದು 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪ
- ಕನಿಷ್ಠ 1,450 ಜನರು ಮೃತ
Venezuela Earthquake: ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಅವಳಿ ಭೂಕಂಪಕ್ಕೆ ಸಾವಿರಾರು ಜೀವಗಳು ಉಸಿರು ಚೆಲ್ಲಿವೆ. ಜೂ.24ರಂದು ಕೇವಲ ಒಂದು ನಿಮಿಷದ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಇಡೀ ನಗರವನ್ನೇ ಸ್ಮಶಾನದಂತೆ ಮಾಡಿದೆ.
ಭೀಕರ ಭೂಕಂಪಕ್ಕೆ ಕನಿಷ್ಠ 1,450 ಜನರು ಮೃತಪಟ್ಟಿದ್ದು, 3,150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹತ್ತು ಸಾವಿರಕ್ಕೂ ಅನೇಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿಯವರೆಗೆ 12,721 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಯೋನ್ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಒಟ್ಟು 774 ಬೃಹತ್ ಕಟ್ಟಡಗಳು ಹಾನಿಯಾಗಿದ್ದು, ಈ ಪೈಕಿ 189 ಬಿಲ್ಡಿಂಗ್ಗಳು ಸಂಪೂರ್ಣವಾಗಿ ನೆಲಕ್ಕೆ ಉರುಳಿವೆ. ಎರಡು ಪ್ರಬಲ ಭೂಕಂಪದಿಂದ ಅಕ್ಷರಶಃ ತತ್ತರಿಸಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸುವಲ್ಲಿ ರಕ್ಷಣಾ ಪಡೆಗಳು ಭರದಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಕೆಲವೆಡೆ ಲಘು ಭೂಕಂಪಗಳು ಸಂಭವಿಸುತ್ತಿರುವುದು ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟುಮಾಡಿದೆ. ಇಷ್ಟಾದರೂ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಉಳಿಸಲು ಹಗಲಿರುಳು ಶ್ರಮಿಸುತ್ತಿವೆ.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ದೇಶವ್ಯಾಪಿ ಎಲ್ಲಾ ಶಾಲಾ-ಕಾಲೇಜುಗಳಿಗೆ ಇನ್ನೂ ಒಂದು ವಾರ ರಜೆಯನ್ನು ಘೋಷಿಸಲಾಗಿದೆ. ಅಲ್ಲದೆ, ಮೃತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಶವಗಾರಗಳು ಭರ್ತಿಯಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲು ಹೆಚ್ಚುವರಿ ವಿಧಿವಿಜ್ಞಾನ ತಂಡಗಳನ್ನು ನಿಯೋಜನೆಗೆ ಸರ್ಕಾರ ಸೂಚನೆ ನೀಡಿದೆ.
ಸುಧಾರಣೆಯತ್ತ ಅಗತ್ಯ ಸೇವೆಗಳು
ಸರ್ಕಾರದ ಮಾಹಿತಿ ಪ್ರಕಾರ, ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ತಿಳಿಸಲಾಗಿದೆ. ಲಾ ಗ್ವೈರಾ ರಾಜ್ಯದ ಶೇ.75ರಷ್ಟು ಭಾಗಕ್ಕೆ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ. ಶೇ.68ರಷ್ಟು ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮುಖ್ಯ ರಸ್ತೆಗಳು ಕುಸಿದು ಹೋಗಿರುವ ನಿಟ್ಟಿನಲ್ಲಿ ಈಗ ಶೇ.90ರಷ್ಟು ರಸ್ತೆಗಳನ್ನು ಸಂಚಾರಕ್ಕಾಗಿ ಮುಕ್ತಗೊಳಿಸಲಾಗಿದೆ,(ಏಜೆನ್ಸೀಸ್).