ಅಪಾರ ನೈಸರ್ಗಿಕ ಸಂಪತ್ತು ತುಂಬಿ ತುಳುಕುತ್ತಿದ್ದರೂ ಆಳುವವರು ಸರಿಯಿಲ್ಲದಿದ್ದರೆ ಒಂದು ದೇಶ ಹೇಗೆ ಹಾಳಾಗಿ ಹೋಗಬಹುದು ಎಂಬುದಕ್ಕೆ ವೆನೆಜುವೆಲಾ ಜ್ವಲಂತ ಉದಾಹರಣೆ. ಸರ್ವಾಧಿಕಾರಿ ನಾಯಕತ್ವ, ಅದಕ್ಷ ಆಡಳಿತ ಮತ್ತು ಭ್ರಷ್ಟಾಚಾರ ಸೇರಿ ಒಂದು ಸುಭಿಕ್ಷ ರಾಷ್ಟ್ರವನ್ನು ಹೇಗೆ ಸ್ಮಶಾನವನ್ನಾಗಿ ಮಾಡಬಿಡುತ್ತದೆ ಎಂಬುದು ಈಗ ನಮ್ಮ ಕಣ್ಮುಂದಿರುವ ಸತ್ಯ. ಎಪ್ಪತ್ತರ ದಶಕದಲ್ಲಿ ಶ್ರೀಮಂತಿಕೆಯ ವಿಷಯದಲ್ಲಿ ಯೂರೋಪಿಯನ್ ರಾಷ್ಟ್ರಗಳಿಗೆಲ್ಲ ಸೆಡ್ಡು ಹೊಡೆಯುತ್ತಿದ್ದ ರಾಷ್ಟ್ರ ಇದು. ಈಗ ಇಲ್ಲಿನ ಜನರು ತಿಪ್ಪೆಯಲ್ಲಿ ಬಿದ್ದಿರುವ ಹಳಸಲು ಆಹಾರ ಆಯ್ದುಕೊಂಡು ತಿನ್ನುವಷ್ಟು ಬಡವರಾಗಿದ್ದಾರೆ. ಅಮೆರಿಕದ ಮಿಲಿಟರಿಯವರು ಈ ದೇಶದ ಅಧ್ಯಕ್ಷನನ್ನೇ ಒಬ್ಬ ಪುಡಿರೌಡಿಯ ಹಾಗೆ ‘ಟ್ರೀಟ್’ ಮಾಡಿದರೆಂದರೆ ಈ ರಾಷ್ಟ್ರ ಯಾವ ಮಟ್ಟಕ್ಕೆ ಕುಸಿದಿರಬಹುದು? ಇದೆಲ್ಲ ಹೇಗಾಯಿತು, ಏಕಾಯಿತು? ಇಲ್ಲಿದೆ ವಿವರ.
ದಕ್ಷಿಣ ಅಮೆರಿಕದ ಸುಂದರ ರಾಷ್ಟ್ರ ವೆನೆಜುವೆಲಾ ಈಗ ಭಾರಿ ಸುದ್ದಿಯಲ್ಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ದಾಳಿ ನಡೆಸಿದ ಅಮೆರಿಕನ್ ಯೋಧರು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಮತ್ತು ಅವರ ಪತ್ನಿಯನ್ನು ಸೆರೆ ಹಿಡಿದು ನ್ಯೂಯಾರ್ಕ್ಗೆ ಕರೆತಂದಿದ್ದಾರೆ. ಮಡುರೋ ವಿರುದ್ಧ ಡ್ರಗ್ಸ್ ಕಳ್ಳಸಾಗಣೆ, ನಾಕೋಟೆರರಿಸಂ ಆರೋಪ ಹೊರಿಸಿದ್ದಾರೆ. ಸದ್ಯಕ್ಕೆ ವೆನೆಜುವೆಲಾವನ್ನು ಅಮೆರಿಕವೇ ನಿಯಂತ್ರಿಸಲಿದೆ ಎಂದಿರುವ ಟ್ರಂಪ್, ಅದರ ತೈಲ ಸಂಪನ್ಮೂಲಗಳನ್ನೂ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ವೆನೆಜುವೆಲಾ ಮೇಲಿನ ದಾಳಿಯಿಂದಾಗಿ ಲ್ಯಾಟಿನ್ ಅಮೆರಿಕದಲ್ಲಿ ಅಮೆರಿಕದ ಹಸ್ತಕ್ಷೇಪಕ್ಕೆ ಹೊಸ ಅಧ್ಯಾಯವೊಂದು ಸೇರ್ಪಡೆಯಾದಂತಾಗಿದೆ.
ಒಂದೆಡೆ ಶ್ರೀಮಂತಿಕೆ ಇದ್ದರೂ ವೆನೆಜುವೆಲಾ ದಲ್ಲಿ ಬಡವರು-ಶ್ರೀಮಂತರ ನಡುವೆ ಸಾಕಷ್ಟು ಅಂತರ ಇತ್ತು. ಹ್ಯೂಗೋ ಚಾವೆಜ್ ಎಂಬ ಮಾಜಿ ಯೋಧ, ಈ ಆರ್ಥಿಕ ಕಂದರವನ್ನೇ ರಾಜಕೀಯವಾಗಿ ಬಳಸಿಕೊಂಡರು. 1999ರಲ್ಲಿ ಬೊಲಿವೇರಿಯನ್ ಸೋಷಿಯಲಿಸಂ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು.
ಒಂದು ಕಾಲದಲ್ಲಿ ವೆನೆಜುವೆಲಾದ ಹೆಸರನ್ನು ಕೇಳಿದರೆ ಜಗತ್ತಿಗೆ ನೆನಪಾಗುತ್ತಿದ್ದುದು ಅದರ ಪ್ರಕೃತಿ ಸೌಂದರ್ಯ ಮತ್ತು ತೈಲ ಸಂಪತ್ತು. ಸೌದಿಯನ್ನೂ ಮೀರಿಸುವಷ್ಟು ತೈಲ ನಿಕ್ಷೇಪಗಳಿರುವ ರಾಷ್ಟ್ರ ಅದು. 1950ರಿಂದ 1980ರ ದಶಕದವರೆಗೆ ವೆನೆಜುವೆಲಾ ಅಕ್ಷರಶಃ ಶ್ರೀಮಂತ ದೇಶ. ಅಲ್ಲಿನ ಭೂಮಿಯಡಿ 300 ಶತಕೋಟಿ ಬ್ಯಾರೆಲ್ಗಳಷ್ಟು ಕಚ್ಚಾ ತೈಲ ಇದೆ. 1970ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೇರಿದಾಗ ವೆನೆಜುವೆಲಾಕ್ಕೆ ಹಣದ ಹೊಳೆಯೇ ಹರಿದುಬಂತು. ಆ ಸಮಯದಲ್ಲಿ ವೆನೆಜುವೆಲಾದ ಜನರ ತಲಾದಾಯ ಇಡೀ ಲ್ಯಾಟಿನ್ ಅಮೆರಿಕದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿತ್ತು. ಐಷಾರಾಮಿ ಕಾರುಗಳು ಓಡಾಡುತ್ತಿದ್ದವು, ಬೃಹತ್ ಕಟ್ಟಡಗಳು ತಲೆ ಎತ್ತಿದ್ದವು. ಮಧ್ಯಮ ವರ್ಗದ ಜನರೂ ವಾರಾಂತ್ಯದ ಶಾಪಿಂಗ್ ಮಾಡಲು ಅಮೆರಿಕದ ಫ್ಲೋರಿಡಾಕ್ಕೆ, ಮಿಯಾಮಿಗೆ ವಿಮಾನದಲ್ಲಿ ಹೋಗುತ್ತಿದ್ದರು!
ಅಂಧಾದುಂಧಿ ಯೋಜನೆಗಳ ಸುರಿಮಳೆ
ಅಧಿಕಾರಕ್ಕೆ ಬರುತ್ತಿ ದ್ದಂತೆಯೇ ಸೋಶಿಯ ಲಿಸ್ಟ್ ಚಾವೆಜ್, ಬಡವರ ಉದ್ಧಾರದ ಹೆಸರಿನಲ್ಲಿ ಅಪಾರ ಹಣ ಖರ್ಚು ಮಾಡಿದರು. ಬಡವರಿಗೆ ಉಚಿತ ಮನೆ, ಆರೋಗ್ಯ, ಶಿಕ್ಷಣ ನೀಡಿದರು. ತೈಲದಿಂದ ಬಂದ ಲಾಭವನ್ನೆಲ್ಲ ಇದಕ್ಕೇ ಸುರಿದರು. ಇದರಿಂದ ಅವರು ಜನರ ಪಾಲಿಗೆ ದೇವರಾದರು. ಆದರೆ ಮುಂದೆಂದಾದರೂ ದೇಶಕ್ಕೆ ಸಂಕಷ್ಟ ಬಂದರೆ ಹಣ ಬೇಕಾಗಬಹುದೆಂಬ ಯೋಚನೆಯೂ ಅವರಿಗೆ ಬರಲಿಲ್ಲ.
ಚಾವೆಜ್ ಮಾಡಿದ ದೊಡ್ಡ ತಪ್ಪು ಎಂದರೆ ಖಾಸಗಿ ಕಂಪನಿಗಳ ರಾಷ್ಟ್ರೀಕರಣ. ಅಮೆರಿಕದ ದೊಡ್ಡ ತೈಲ ಕಂಪನಿಗಳನ್ನು ದೇಶದಿಂದ ಹೊರಹಾಕಿದರು. ತೈಲ ಉದ್ಯಮವನ್ನು ಸರ್ಕಾರದ ವಶಕ್ಕೆ ಪಡೆದರು. ಈ ಕಂಪನಿಗಳನ್ನು ಅದುವರೆಗೆ ನಡೆಸುತ್ತಿದ್ದ ತಂತ್ರಜ್ಞರು ದೇಶ ಬಿಟ್ಟು ಹೋದರು. ಬೇರೆ ಪರಿಣಿತರಿರಲಿಲ್ಲ. ತೈಲ ನಿಕ್ಷೇಪ ಬೇಕಾದಷ್ಟಿದ್ದರೂ ಅದನ್ನು ಹೊರತೆಗೆಯುವ ತಂತ್ರಜ್ಞಾನವಿರಲಿಲ್ಲ. ಹೀಗಾಗಿ ತೈಲ ಉತ್ಪಾದನೆ ಕುಸಿಯಲಾರಂಭಿಸಿತು.
2013ರಲ್ಲಿ ಅಧ್ಯಕ್ಷ ಚಾವೆಜ್ ಕ್ಯಾನ್ಸರ್ನಿಂದ ನಿಧನರಾದರು. ಸಾಯುವ ಮೊದಲು ನಿಕೋಲಸ್ ಮಡುರೊ ಅವರನ್ನು ಉತ್ತರಾಧಿಕಾರಿಯಾಗಿ ಘೊಷಿಸಿದರು. ಬಸ್ ಡ್ರೖೆವರ್ ಆಗಿದ್ದ ಮಡುರೊಗೆ ಆರ್ಥಿಕತೆ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಮಡುರೊ ಅಧಿಕಾರಕ್ಕೆ ಬಂದ ವರ್ಷವೇ ದುರದೃಷ್ಟವಶಾತ್ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿಯಿತು. ಬ್ಯಾರೆಲ್ಗೆ 100 ಡಾಲರ್ ಇದ್ದದ್ದು 30-40 ಡಾಲರ್ಗೆ ಕುಸಿಯಿತು. ವೆನೆಜುವೆಲಾದ ಶೇ. 95ರಷ್ಟು ಆದಾಯ ತೈಲದಿಂದಲೇ ಬರುತ್ತಿದ್ದುದರಿಂದ, ದೇಶದ ಆರ್ಥಿಕತೆಯ ಬೆನ್ನೆಲುಬೇ ಮುರಿದುಹೋಯಿತು.
ತೈಲದ ಆದಾಯ ನಿಂತ ಕೂಡಲೇ ದಿಕ್ಕುಗಾಣದಂತಾದ ಮಡುರೊ ಸರ್ಕಾರ ಮನಬಂದಂತೆ ಕರೆನ್ಸಿ ಮುದ್ರಿಸತೊಡಗಿತು. ಇದರಿಂದ ಹಣದ ಮೌಲ್ಯ ಎಷ್ಟು ಕುಸಿಯಿತೆಂದರೆ, ಜನರು ಒಂದು ಕೆಜಿ ಟೊಮೆಟೊ ಖರೀದಿಸಲು ಚೀಲದ ತುಂಬ ಹಣ ಒಯ್ಯಬೇಕಾಯಿತು. 2018ರ ವೇಳೆಗೆ ಅಲ್ಲಿನ ಹಣದುಬ್ಬರ ದರ ಶೇ. 10 ಲಕ್ಷಕ್ಕೂ ಹೆಚ್ಚಾಗಿತ್ತು!
‘ಮಡುರೊ ಸತತವಾಗಿ ಚುನಾವಣೆಗಳಲ್ಲಿ ಗೆಲ್ಲುತ್ತಿರುವುದಕ್ಕೆ ಅವರು ಎಸಗುತ್ತಿರುವ ಅಕ್ರಮಗಳೇ ಕಾರಣ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿ ಇವರು ಆರಿಸಿ ಬರುತ್ತಿದ್ದಾರೆ’ ಎಂಬುದು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಆರೋಪ. 2024ರ ಅಧ್ಯಕ್ಷೀಯ ಚುನಾವಣೆಯಲ್ಲೂ ಮಡುರೊ ಅಕ್ರಮ ಎಸಗಿ ಗೆದ್ದಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ಹಲವು ದೇಶಗಳು ವರದಿ ನೀಡಿವೆ. ವಿರೋಧಪಕ್ಷದ ಅಭ್ಯರ್ಥಿ ಎಡ್ಮಂಡೋ ಗೊನ್ಜಾಲೆಜ್ ಅವರೇ ನಿಜವಾಗಿ ಗೆದ್ದವರು ಎಂದು ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಮಿಲಿಟರಿ ಶಕ್ತಿ ಬಳಸಿ ಆ ಪ್ರತಿಭಟನೆಗಳನ್ನು ಮಡುರೊ ಕ್ರೂರವಾಗಿ ಹತ್ತಿಕ್ಕಿದ್ದಾರೆ.
ವೆನೆಜುವೆಲಾದ ಇಡೀ ಆರ್ಥಿಕತೆ ಕೇವಲ ತೈಲದ ಮೇಲೆ ನಿಂತಿತ್ತು. ಕೃಷಿ, ಉತ್ಪಾದನಾ ವಲಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಆಹಾರದಿಂದ ಹಿಡಿದು ಔಷಧಿವರೆಗೆ ಎಲ್ಲವನ್ನೂ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇಡೀ ದೇಶದ ಆರ್ಥಿಕತೆ ಒಂದೇ ಸಂಪನ್ಮೂಲದ ಮೇಲೆ ನಿಂತರೆ, ಭವಿಷ್ಯದಲ್ಲಿ ಆ ಸಂಪನ್ಮೂಲದ ಬೆಲೆ ಜಾಗತಿಕವಾಗಿ ಕುಸಿದಾಗ ಇಡೀ ದೇಶ ದಿವಾಳಿಯಾಗುತ್ತದೆ. 1960ರ ದಶಕದಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ನೈಸರ್ಗಿಕ ಅನಿಲ ಪತ್ತೆಯಾದ ನಂತರ ಅಲ್ಲಿನ ಉತ್ಪಾದನಾ ವಲಯ ಕುಸಿದಿದ್ದರಿಂದ ಈ ವಿದ್ಯಮಾನಕ್ಕೆ ‘ಡಚ್ ಡಿಸೀಸ್’ ಎಂಬ ಹೆಸರು ಬಂತು. ವೆನೆಜುವೆಲಾದ ಇಂದಿನ ದುಸ್ಥಿತಿಗೆ ಇದೇ ಪ್ರಮುಖ ಕಾರಣ.
ಮಡುರೊ ಕುಟುಂಬ ಮತ್ತು ಸೇನಾಧಿಕಾರಿಗಳಿಗೆ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದೊಂದಿಗೂ ನಂಟಿತ್ತು. ‘ಕಾರ್ಟೆಲ್ ಆಫ್ ದಿ ಸನ್ಸ್’ ಎಂಬುದು ಇವರ ಜಾಲದ ಹೆಸರು. ತೈಲ ರಫ್ತಿನಿಂದ ಹಣ ಬರುವುದು ನಿಂತ ಬಳಿಕ ಬೇರೆ ದಾರಿ ಕಾಣದೇ ಮಾದಕ ದ್ರವ್ಯ ಸಾಗಾಟವನ್ನೇ ಇವರು ಆದಾಯದ ಮೂಲವನ್ನಾಗಿ ಮಾಡಿಕೊಂಡರು.
ಹೊರಜಗತ್ತಿನಿಂದ ವಿರೋಧ ಇದ್ದರೂ ಮಡುರೊ ಇಷ್ಟು ವರ್ಷ ಅಧಿಕಾರದಲ್ಲಿ ಉಳಿದಿದ್ದಾದರೂ ಹೇಗೆ? ಅದಕ್ಕೆ ಉತ್ತರ- ಮಿಲಿಟರಿ. ಅವರಿಗೆ ಸೇನಾಪಡೆಯ ಸಂಪೂರ್ಣ ಬೆಂಬಲ ಇದ್ದುದರಿಂದ ವಿರೋಧಿಗಳನ್ನು ಬಗ್ಗುಬಡಿ ಯುತ್ತಿದ್ದರು. ಸೇನಾ ಧಿಕಾರಿಗಳಿಗೆ ತೈಲ ಕಂಪನಿ, ಗಣಿಗಾರಿಕೆ, ಆಹಾರ ಸರಬರಾಜಿನ ಗುತ್ತಿಗೆ ನೀಡುತ್ತಿದ್ದರು. ಅದರಿಂದ ಸೇನಾಧಿಕಾರಿಗಳಿಗೆ ಕೈತುಂಬ ಹಣ. ಅವರೆಲ್ಲ ಬಿಜಿನೆಸ್ವುನ್ಗಳಾಗಿ ಪರಿವರ್ತನೆಯಾಗಿ ಬಿಟ್ಟಿದ್ದರು. ಅದಲ್ಲದೆ, ಮಡುರೊ ಅಧಿಕಾರ ಕಳೆದುಕೊಂಡರೆ ತಾವೂ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯ ಅವರಿಗಿತ್ತು.
ವೆನೆಜುವೆಲಾದ ಆಸ್ಪತ್ರೆಗಳಲ್ಲಿ ಕನಿಷ್ಠ ಪಕ್ಷ ಪ್ಯಾರಸಿಟಮಾಲ್ ಮಾತ್ರೆಗಳೂ ಇಲ್ಲ. ಶಸ್ತ್ರಚಿಕಿತ್ಸೆ ನಡೆಯುವಾಗ ಕರೆಂಟ್ ಹೋದರೆ ಮೊಬೈಲ್ ಲೈಟ್ ಬಳಸಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಸೂಕ್ತ ಆರೋಗ್ಯ ಸೇವೆ ಸಿಗದ ಕಾರಣ ಸಾವುಗಳ ಸಂಖ್ಯೆಯೂ ಏರಿದೆ.
ವೆನೆಜುವೆಲಾದ ಬಹುತೇಕರು ಹಸಿವಿನಿಂದಾಗಿ ಎಲುಬಿನ ಹಂದರದಂತಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ, ವೆನೆಜುವೆಲಾದ ಸರಾಸರಿ ಪ್ರಜೆ ಕಳೆದ ಕೆಲವು ವರ್ಷಗಳಲ್ಲಿ 10-15 ಕೆಜಿ ತೂಕ ಕಳೆದುಕೊಂಡಿದ್ದಾನೆ. ಇದಕ್ಕೆ ಕೆಲವರು ವ್ಯಂಗ್ಯವಾಗಿ ‘ಮಡುರೊ ಡಯಟ್’ ಎಂದು ಹೆಸರಿಟ್ಟಿದ್ದಾರೆ.
ವೆನೆಜುವೆಲಾವನ್ನು ಹತ್ತಿಕ್ಕಲು ಅಮೆರಿಕ ಪ್ರಯತ್ನಿಸುತ್ತಿದ್ದರೆ, ರಷ್ಯಾ ಮತ್ತು ಚೀನಾ ಈ ದೇಶಕ್ಕೆ ಬಿಲಿಯನ್ಗಟ್ಟಲೆ ಸಾಲ ನೀಡಿವೆ. ಅದೇನೂ ಪುಗ್ಸಟ್ಟೆ ಸಹಾಯವಲ್ಲ. ಇದಕ್ಕೆ ಪ್ರತಿಯಾಗಿ ಅವು ವೆನೆಜುವೆಲಾದ ತೈಲವನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿವೆ. ಅಮೆರಿಕದ ವಿರುದ್ಧ ವೆನೆಜುವೆಲಾವನ್ನು ಒಂದು ರಾಜತಾಂತ್ರಿಕ ದಾಳವಾಗಿಯೂ ಅವು ಬಳಸಿಕೊಂಡಿದ್ದಿದೆ.
ಸುಮಾರು 70 ಲಕ್ಷಕ್ಕೂ ಹೆಚ್ಚು ಜನರು ಕಾಲ್ನಡಿಗೆಯಲ್ಲೇ ಗಡಿ ದಾಟಿ ಹೋಗಿದ್ದಾರೆ. ಕೊಲಂಬಿಯಾ, ಬ್ರೆಜಿಲ್, ಪೆರು ದೇಶಗಳ ರಸ್ತೆಗಳಲ್ಲಿ ವೆನೆಜುವೆಲಾದ ನಿರಾಶ್ರಿತರು ಭಿಕ್ಷೆ ಬೇಡುವ ದೃಶ್ಯ ಸಾಮಾನ್ಯ. ಯುದ್ಧವಿಲ್ಲದ ದೇಶವೊಂದರಿಂದ ಜನ ಇಷ್ಟು ದೊಡ್ಡ ಮಟ್ಟದಲ್ಲಿ ವಲಸೆ ಹೋಗಿರುವುದು ಇತಿಹಾಸದಲ್ಲೇ ಮೊದಲು.
ಚಾವೆಜ್ ಮತ್ತು ಮಡುರೊ ಇಬ್ಬರೂ ಅಮೆರಿಕವನ್ನು ಸಾಮ್ರಾಜ್ಯಶಾಹಿ ಶಕ್ತಿ ಎಂದು ಸಿಕ್ಕಸಿಕ್ಕಲ್ಲಿ ನಿಂದಿಸುತ್ತಿದ್ದರು. ಟ್ರ್ರಪ್ ಮೊದಲ ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದಾಗ 2017ರಲ್ಲಿ ಮಡುರೊ ಆಡಳಿತವನ್ನು ಹತ್ತಿಕ್ಕಲು ವೆನೆಜುವೆಲಾದ ತೈಲ ರಫ್ತಿನ ಮೇಲೆ ನಿರ್ಬಂಧ ಹೇರಿದರು. ಇದರಿಂದ ವೆನೆಜುವೆಲಾಕ್ಕೆ ಸಿಗುತ್ತಿದ್ದ ಡಾಲರ್ ಕೂಡ ಸಿಗದಂತಾಯಿತು.
1. ಸರ್ವಾಧಿಕಾರತ್ವ: ಒಬ್ಬ ಅದಕ್ಷ, ಅನನುಭವಿ ವ್ಯಕ್ತಿಯ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾದರೆ ಆತ ದೇಶವನ್ನೇ ನಾಶ ಮಾಡಬಲ್ಲ.
2. ಉಚಿತ ಯೋಜನೆಗಳ ವಿಷವರ್ತಲ: ದೇಶದ ಆದಾಯದ ಮೂಲಗಳನ್ನು ಅಭಿವೃದ್ಧಿಪಡಿಸದೆ ಕೇವಲ ಓಲೈಕೆಗಾಗಿ ಉಚಿತ ಯೋಜನೆಗಳನ್ನು ಹಂಚುವುದು ದೇಶವನ್ನು ದಿವಾಳಿ ಮಾಡುತ್ತದೆ.
3. ತಜ್ಞರ ನಿರ್ಲಕ್ಷ್ಯ: ಆಡಳಿತದಲ್ಲಿ ತಜ್ಞರಿಗಿಂತ ಹೆಚ್ಚಾಗಿ ರಾಜಕೀಯ ನಿಷ್ಠಾವಂತರನ್ನು ಮತ್ತು ಮಿಲಿಟರಿಯನ್ನು ತುಂಬಿ ಕೊಂಡರೆ ವ್ಯವಸ್ಥೆ ಹಳಿ ತಪ್ಪುತ್ತದೆ.
4. ಬುದ್ಧಿವಂತ ನಾಯಕ: ದೇಶದಲ್ಲಿ ನೈಸರ್ಗಿಕ ಸಂಪತ್ತಿದ್ದರೆ ಸಾಲದು, ಅದನ್ನು ಸದುಪಯೋಗ ಮಾಡಿಕೊಂಡು ಜನರಿಗೆ ಉತ್ತಮ ಬದುಕು ಕಲ್ಪಿಸುವ ಬುದ್ಧಿವಂತ ನಾಯಕ ಬೇಕು.
1. ರಾಜಕೀಯ ಸ್ಥಿರತೆ: ಅಂತಾರಾಷ್ಟ್ರೀಯ ಸಮುದಾಯದ ಮಾನ್ಯತೆ ಇರುವ ಸರ್ಕಾರ ಅಧಿಕಾರಕ್ಕೆ ಬರಬೇಕು.
2. ನಿರ್ಬಂಧಗಳ ತೆರವು: ಅಮೆರಿಕದ ಆರ್ಥಿಕ ನಿರ್ಬಂಧಗಳು ತೆರವಾದರೆ ಮಾತ್ರ ವೆನೆಜುವೆಲಾ ತನ್ನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿ ಆದಾಯ ಗಳಿಸಬಹುದು.
3. ಆರ್ಥಿಕ ಪುನಶ್ಚೇತನ: ಹಣದುಬ್ಬರ ಹತೋಟಿಗೆ ತಂದು, ಕೃಷಿ ಮತ್ತು ಉತ್ಪಾದನಾ ವಲಯಗಳನ್ನು ಪುನಶ್ಚೇತನಗೊಳಿಸಬೇಕು.