ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಮತ್ತು 2024ರ ಬಾಂಗ್ಲಾ ದಂಗೆಯ ಪ್ರಮುಖ ನಾಯಕ ಉಸ್ಮಾನ್ ಹಾದಿ ಹತ್ಯೆ ಪ್ರಕರಣದ(Hadi murder case) ಆರೋಪಿಗಳು ಮೇಘಾಲಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಢಾಕಾ ಮೆಟ್ರೋ ಪಾಲಿಟನ್ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಢಾಕಾದಲ್ಲಿನ ಹೆಚ್ಚುವರಿ ಆಯುಕ್ತ ಎಸ್.ಎನ್. ನಜ್ರುಲ್ ಇಸ್ಲಾಂ ಅವರ ಸುದ್ದಿಗೋಷ್ಟಿಯನ್ನು ವರದಿ ಮಾಡಿರುವ ಡೈಲಿ ಸ್ಟಾರ್ ವರದಿ ಪ್ರಕಾರ, ಹತ್ಯೆಯ ಶಂಕಿತ ಆರೋಪಿಗಳಾದ ಫೈಸಲ್ ಕರೀಮ್ ಮಸೂದ್ ಮತ್ತು ಅಲಂಗೀರ್ ಶೇಖ್ ಸ್ಥಳೀಯ ಸಹಚರರ ಸಹಾಯದಿಂದ ಮೈಮೆನ್ಸಿಂಗ್‌ನ ಹಲುಘಾಟ್ ಗಡಿಯ ಮೂಲಕ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಹೇಳಿದೆ.
ತನಿಖೆಯಲ್ಲಿ ನಮಗೆ ಸಿಕ್ಕ ಮಾಹಿತಿ ಪ್ರಕಾರ, ಶಂಕಿತರು ಹಲುಘಾಟ್ ಗಡಿಯ ಮೂಲಕ ಭಾರತಕ್ಕೆ ತೆರಳಿದ್ದಾರೆ. ಅಲ್ಲಿ ಮೊದಲು ಪೂರ್ಣಿ ಎಂಬ ವ್ಯಕ್ತಿ ಅವರನ್ನು ಬರಮಾಡಿಕೊಂಡಿದ್ದು, ಬಳಿಕ ಸಾಮಿ ಎಂಬ ಟ್ಯಾಕ್ಸಿ ಡ್ರೈವರ್ ಅವರನ್ನು ಮೇಘಾಲಯದ ಮೂಲಕ ತುರಾ ನಗರಕ್ಕೆ ಕಳುಹಿಸಿದ್ದಾರೆ ಎಂದು ನಜ್ರುಲ್ ಇಸ್ಲಾಂ ಹೇಳಿದ್ದಾರೆ.
ಶಂಕಿತ ಆರೋಪಿಗಳಿಗೆ ಸಹಾಯ ಮಾಡಿದ ಪೂರ್ಣಿ ಮತ್ತು ಸಾಮಿ ಎಂಬ ವ್ಯಕ್ತಿಗಳನ್ನು ಭಾರತೀಯ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವರ ಬಂಧನ ಮತ್ತು ಹಸ್ತಾಂತರವನ್ನು ಖಚಿತಪಡಿಸಿಕೊಳ್ಳಲು ನಾವು ಔಪಚಾರಿಕ ಮತ್ತು ಅನೌಪಚಾರಿಕ ಮಾರ್ಗಗಳ ಮೂಲಕ ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಪರಾರಿಯಾದವರನ್ನು ವಾಪಸ್ ಕರೆತರಲು ಬಾಂಗ್ಲಾದೇಶ ಸರ್ಕಾರ ಭಾರತದೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.
ಮೃತ ಉಸ್ಮಾನ್ ಹಾದಿ ಕಳೆದ ಜುಲೈನಲ್ಲಿ ನಡೆದ ಶೇಖ್ ಹಸೀನಾ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾದ ಜುಲೈ ದಂಗೆಯ ನೇತೃತ್ವ ವಹಿಸಿದ್ದ, ಹಿಂಸಾತ್ಮಕ ಬೀದಿ ಚಳುವಳಿ ನಡೆಸಿದ ವಿದ್ಯಾರ್ಥಿ ನಾಯಕರಲ್ಲೊಬ್ಬರಾಗಿದ್ದರು. ಒಬ್ಬ ಪ್ರಮುಖ ರಾಜಕೀಯ ಕಾರ್ಯಕರ್ತ, ಅವಾಮಿ ಲೀಗ್ನ ಕಟು ವಿರೋಧಿ ಹಾಗೂ ಭಾರತ ವಿರೋಧಿ ನಾಯಕನಾಗಿದ್ದನು.
ಡಿ. 12ರಂದು ಢಾಕಾದಲ್ಲಿ ಇಬ್ಬರು ಮುಸುಕುದಾರಿ ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಅವರ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಅವರ ಸಾವು ಢಾಕಾ ಮತ್ತು ದೇಶದ ಇತರ ಭಾಗಗಳಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಯಿತು (ಏಜೆನ್ಸೀಸ್).