ಉಸ್ಮಾನ್ ಹಾದಿ ಹಂತಕರು ಭಾರತಕ್ಕೆ ಬಂದಿಲ್ಲ: ಬಾಂಗ್ಲಾ ಪೊಲೀಸರ ವಾದ ಸಂಪೂರ್ಣ ಸುಳ್ಳು ಎಂದ ಬಿಎಸ್‌ಎಫ್
ಶಿಲ್ಲಾಂಗ್ / ನವದೆಹಲಿ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ(Usman Hadi's killers) ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತರು ಭಾರತದ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಬಾಂಗ್ಲಾ ಆರೋಪವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಮೇಘಾಲಯ ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದ ಆರೋಪಗಳು ಸುಳ್ಳು, ಕಟ್ಟುಕಥೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಎಂದು ಹೇಳಿವೆ. ಅಲ್ಲದೆ, ಮೇಘಾಲಯ ವಲಯದಲ್ಲಿ ಇಂತಹ ಯಾವುದೇ ಗಡಿಯಾಚೆಗಿನ ಚಲನೆಗೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿಪಾದಿಸಿದೆ.
ಏನಿದು ವಿವಾದ...?
ಹಾದಿ ಹತ್ಯೆ ಮಾಡಿದ ಪ್ರಮುಖ ಶಂಕಿತರು ಬಾಂಗ್ಲಾದೇಶದ ಅಧಿಕಾರಿಗಳಿಂದ ಯಶಸ್ವಿಯಾಗಿ ತಪ್ಪಿಸಿಕೊಂಡು ಮೇಘಾಲಯದ ಗಾರೋ ಬೆಟ್ಟಗಳ ಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸರು (ಡಿಎಂಪಿ) ಪತ್ರಿಕಾಗೋಷ್ಠಿ ನಡೆಸಿದ ನಂತರ ರಾಜತಾಂತ್ರಿಕ ಘರ್ಷಣೆ ಭುಗಿಲೆದ್ದಿತು.
ಬಾಂಗ್ಲಾ ಆರೋಪವೇನು..
ಶಂಕಿತರಾದ ಫೈಸಲ್ ಕರೀಮ್ ಮಸೂದ್ ಮತ್ತು ಅಲಂಗೀರ್ ಶೇಖ್ ಹಲುಘಾಟ್ ಗಡಿಯನ್ನು ದಾಟಿ ಭಾರತಕ್ಕೆ ಬಂದಿದ್ದಾರೆ. ಅಲ್ಲದೆ, ಅವರಿಗೆ ಭಾರತೀಯ ಅಧಿಕಾರಿಗಳು ಸಹಾಯ ಮಾಡಿದ್ದಕ್ಕಾಗಿ ಇಬ್ಬರು ಭಾರತೀಯ ಸಹಚರರಾದ ಪೂರ್ಣಿ ಮತ್ತು ಸಮಿರನ್ನು ಬಂಧಿಸಿದರು. ಶಂಕಿತರು ಟ್ಯಾಕ್ಸಿಯಲ್ಲಿ ಮೇಘಾಲಯದ ತುರಾ ನಗರಕ್ಕೆ ಪ್ರಯಾಣಿಸಿದರು ಎಂದು ಬಾಂಗ್ಲ ಹೇಳಿದೆ.
ಬಾಂಗ್ಲಾ ಆರೋಪಕ್ಕೆ ಬಿಎಸ್‌ಎಫ್ ತಿರುಗೇಟು
ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಮೇಘಾಲಯ ಗಡಿನಾಡು) ಒ.ಪಿ. ಉಪಾಧ್ಯಾಯ, ಬಾಂಗ್ಲಾದೇಶದೊಳಗೆ ವ್ಯಾಪಕವಾದ ಸಿಸಿಟಿವಿ ಕಣ್ಗಾವಲು ಮತ್ತು ಚೆಕ್‌ಪೋಸ್ಟ್‌ಗಳಿದ್ದರೂ, ಢಾಕಾದಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಸ್ಥಳದಿಂದ ವ್ಯಕ್ತಿಗಳು ಭಾರತವನ್ನು ಪ್ರವೇಶಿಸಿದ್ದಾರೆ ಎಂಬ ಹೇಳಿಕೆ ಅತ್ಯಂತ ಅಸಂಬದ್ಧವಾಗಿದೆ. ಅಲ್ಲದೆ, ಬಾಂಗ್ಲಾದ ಗಡಿ ಕಾವಲು ಪಡೆ (ಬಿಜಿಬಿ) ಕೂಡ ಇಂತಹ ಯಾವುದೇ ಉಲ್ಲಂಘನೆಯನ್ನು ನಮಗೆ ವರದಿ ಮಾಡಿಲ್ಲ ಎಂದು ಐಜಿ ಉಪಾಧ್ಯಾಯ ಎಂದು ಸ್ಪಷ್ಟಪಡಿಸಿದ್ದಾರೆ.
ಷರೀಫ್ ಉಸ್ಮಾನ್ ಹಾದಿ ಯಾರು?
2026ರ ಫೆಬ್ರವರಿ 12 ರಂದು ನಡೆಯಲಿರುವ ಬಾಂಗ್ಲಾ ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಪ್ರಕರಣವು ಬಾಂಗ್ಲಾದೇಶದಲ್ಲಿ ಅಶಾಂತಿಯ ಕಾರಣವಾಯಿತು. ಇಂಕಿಲಾಬ್ ಮಂಚ್ನ 32 ವರ್ಷದ ವಕ್ತಾರ ಮತ್ತು ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ 2024 ರ ದಂಗೆಯ ಪ್ರಮುಖ ವ್ಯಕ್ತಿಯಾಗಿದ್ದರು.
ವಿದ್ಯಾರ್ಥಿ ನಾಯಕ ಹಾದಿ ಡಿಸೆಂಬರ್ 12 ರಂದು ಢಾಕಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಲೆಗೆ ಗುಂಡು ಹಾರಿಸಲಾಯಿತು. ಅಲ್ಲದೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 18 ರಂದು ಸಿಂಗಾಪುರದಲ್ಲಿ ಅವರು ನಿಧನರಾದರು. ಇವರ ಸಾವು ರಾಷ್ಟ್ರವ್ಯಾಪಿ ಗಲಭೆಗಳಿಗೆ, ಮಾಧ್ಯಮ ಸಂಸ್ಥೆಗಳ ಮೇಲೆ ಬೆಂಕಿ ಹಚ್ಚುವ ದಾಳಿಗೆ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರಕ್ಕೆ ಕಾರಣವಾಯಿತು,(ಏಜೆನ್ಸೀಸ್).