ವೀಸಾ ನಿಮಯಗಳಲ್ಲಿ ಮಹತ್ವದ ಬದಲಾವಣೆ  
ವಿದೇಶ

ಕೇವಲ 4 ವರ್ಷ ಅಷ್ಟೇ! ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆ ಹೊತ್ತಿದ್ದ ವಿದ್ಯಾರ್ಥಿಗಳಿಗೆ ಟ್ರಂಪ್​ ಬಿಗ್ ಶಾಕ್​

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ
  • ವಿದ್ಯಾರ್ಥಿಗಳ ವೀಸಾಗಳಿಗೆ 4 ವರ್ಷಗಳ ಅವಧಿ ಮಿತಿ
  • ಭಾರತ ಸೇರಿ ಇತರೆ ರಾಷ್ಟ್ರಗಳಿಂದ ಬರುವ ವಿದ್ಯಾರ್ಥಿಗಳಲ್ಲಿ ಕಾಡಿದ ಆತಂಕ
USA Visa Rules: ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಬೇಕು ಎಂಬ ಕನಸು ಕಟ್ಟಿಕೊಂಡಿದ್ದ ಅದೆಷ್ಟೋ ವಿದ್ಯಾರ್ಥಿಗಳಿಗೆ, ವಿದೇಶಿ ಪತ್ರಕರ್ತರಿಗೆ ವಿಶೇಷವಾಗಿ ಭಾರತೀಯರಿಗೆ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರುವ ಮೂಲಕ ಡೊನಾಲ್ಡ್ ಟ್ರಂಪ್​ ಸರ್ಕಾರ ಬಿಗ್ ಶಾಕ್​ ನೀಡಿದೆ.
ದಶಕಗಳಿಂದ ಜಾರಿಯಲ್ಲಿರುವ ಪ್ರಮುಖ ವಲಸೆ ನಿಯಮವನ್ನು ಬದಲಾಯಿಸಲು ಅಮೆರಿಕ ಗೃಹ ಭದ್ರತಾ ಇಲಾಖೆ (ಡಿಎಚ್‌ಎಸ್) ಹೊಸ ನಿಯಮವನ್ನು ಮುನ್ನೆಲೆಗೆ ತಂದಿದೆ. ವೀಸಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಹೆಚ್ಚಿಸುವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಟ್ರಂಪ್ ಆಡಳಿತವು ಈ ಕಠಿಣ ನಿರ್ಧಾರದತ್ತ ದಾಪುಗಾಲಿಟ್ಟಿದೆ.

4 ವರ್ಷಗಳಲ್ಲಿ ಕೋರ್ಸ್ ಮುಗಿಯದಿದ್ದರೆ ಕಷ್ಟಕರ

ಈಗಿನ ನಿಯಮಗಳ ಪ್ರಕಾರ, ಎಫ್-1 ವೀಸಾಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಪೂರ್ಣಗೊಳ್ಳುವವರೆಗೆ ಕಾನೂನುಬದ್ಧವಾಗಿ ಅಮೆರಿಕದಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಹೊಸ ಪ್ರಸ್ತಾವನೆಯಲ್ಲಿ, ವಿದ್ಯಾರ್ಥಿಗಳು ಈಗ ಗರಿಷ್ಠ ನಾಲ್ಕು ವರ್ಷಗಳವರೆಗೆ ಮಾತ್ರ ಯುಎಸ್​ನಲ್ಲಿ ಇರಲು ಸಾಧ್ಯ ಎನ್ನಲಾಗಿದೆ. ಈ ಅವಧಿಯೊಳಗೆ ಅವರು ತಮ್ಮ ತಮ್ಮ ಕೋರ್ಸ್​ಗಳನ್ನು ಮುಗಿಸಿಕೊಳ್ಳಬೇಕು. ಇಲ್ಲದಿದ್ದರೆ, ಹೆಚ್ಚುವರಿ ಅವಧಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಬದಲಾವಣೆಯು ಎಫ್​-1 ವಿದ್ಯಾರ್ಥಿಗಳ ಮೇಲೆ, ಹಾಗೆಯೇ ಜೆ-1 ವಿನಿಮಯ ಸಂದರ್ಶಕರು ಮತ್ತು 'I' ವೀಸಾಗಳಲ್ಲಿ ವಿದೇಶಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ನಿರ್ಬಂಧವು ವಿಶೇಷವಾಗಿ ಸಂಶೋಧನೆ, ಪಿಎಚ್‌ಡಿ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಕಾಡುವುದು ಹೌದು.

ಭಾರತೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಕಳವಳ

ಭಾರತೀಯರು ಪ್ರಸ್ತುತ ಅಮೆರಿಕದಲ್ಲಿ ಅತಿದೊಡ್ಡ ವಿದ್ಯಾರ್ಥಿ ಗುಂಪಾಗಿದ್ದು, ಸುಮಾರು 3.31 ಲಕ್ಷ ವಿದ್ಯಾರ್ಥಿಗಳು ಟ್ರಂಪ್​ ರಾಷ್ಟ್ರದಲ್ಲಿದ್ದಾರೆ. ಹೊಸ ನಿಯಮ ಜಾರಿಗೆ ಬಂದರೆ, ವಿಸ್ತರಣಾ ಅರ್ಜಿಗಳ ಪ್ರಕ್ರಿಯೆಯಲ್ಲಿನ ಆಡಳಿತಾತ್ಮಕ ವಿಳಂಬದಿಂದಾಗಿ ಭಾರತೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕು ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಆದಾಗ್ಯೂ, ಈ ಪ್ರಸ್ತಾವನೆಯನ್ನು ತಕ್ಷಣವೇ ಜಾರಿಗೆ ತರುತ್ತಿಲ್ಲ ಎಂಬ ವಿಷಯವನ್ನು ನಾವಿಲ್ಲಿ ಗಮನಿಸಬೇಕಿದೆ. ಇದನ್ನು ಮೊದಲು ಅಮೇರಿಕನ್ ಕಾಂಗ್ರೆಸ್ ಪರಿಶೀಲಿಸಿ ಅನುಮೋದಿಸಬೇಕು. ಅಧಿಕೃತ ದಿನಾಂಕವನ್ನು ಹೊರಬೀಳುವವರೆಗೆ ಪ್ರಸ್ತುತ ಹಳೆಯ ನೀತಿ ಮುಂದುವರಿಯಲಿದೆ. ಆದರೂ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೊಸ ಆತಂಕ ಸೃಷ್ಟಿಯಾಗಿದೆ,(ಏಜೆನ್ಸೀಸ್).