ಎಐ ಚಿತ್ರ  
ವಿದೇಶ

ಇರಾನ್​ಗೆ ಬುದ್ಧಿ ಕಲಿಸಲು ಹೋಗಿ ಆರ್ಥಿಕ ಹೊರೆ ಹೊತ್ತ ಟ್ರಂಪ್​! ಖಜಾನೆಯಲ್ಲಿ ಕರಗಿತು ಕೋಟಿಗಟ್ಟಲೇ ಹಣ

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಜೊತೆಗೆ ಶಾಂತಿ ಒಪ್ಪಂದ ಸಹಿ ಮಾಡಿದ ಅಮೆರಿಕ
  • ಇರಾನ್​ಗೆ ಬುದ್ಧಿ ಕಲಿಸಲು ಹೋಗಿ ಆರ್ಥಿಕ ಹೊರೆ ಹೊತ್ತ ಟ್ರಂಪ್​
US War Cost: ಪ್ರಸ್ತುತ ಅಮೆರಿಕ-ಇರಾನ್ ನಡುವೆ ಶಾಂತಿ ಒಪ್ಪಂದ ಸಹಿಯಾಗಿದ್ದು, ಮಧ್ಯಪ್ರಾಚ್ಯದಲ್ಲಿ 100 ದಿನಗಳಿಗೂ ಅಧಿಕ ಕಾಲ ನಡೆದ ಭೀಕರ ಯುದ್ಧ ಕಡೆಗೂ ಮುಕ್ತಾಯಗೊಂಡಿದೆ. ಈ ವರ್ಷ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯೊಂದಿಗೆ ಶುರುವಾದ ಈ ಸಂಘರ್ಷವು, ವಿಶ್ವದ ದೊಡ್ಡಣ್ಣನಿಗೆ ದೊಡ್ಡ ಆರ್ಥಿಕ ನಷ್ಟವನ್ನೇ ಉಂಟುಮಾಡಿದೆ.
ಸುಮಾರು 108 ದಿನಗಳ ಕಾಲ ನಡೆದ ಈ ಮಿಲಿಟರಿ ಕಾರ್ಯಾಚರಣೆಗಳಿಗಾಗಿ, ಟ್ರಂಪ್​ ರಾಷ್ಟ್ರವು ಕೇವಲ ರಕ್ಷಣೆಗಾಗಿಯೇ ಸುಮಾರು 113 ಶತಕೋಟಿ ಡಾಲರ್‌ಗಳನ್ನು (ಭಾರತೀಯ ಕರೆನ್ಸಿಯಲ್ಲಿ 10.67 ಲಕ್ಷ ಕೋಟಿ ರೂ.) ವ್ಯಯಿಸಿದೆ. ಅಮೆರಿಕ ರಕ್ಷಣಾ ಇಲಾಖೆ (ಪೆಂಟಗನ್) ಹಂಚಿಕೊಂಡ ಮಾಹಿತಿ ಪ್ರಕಾರ, ಯುದ್ಧದ ಮೊದಲ ಆರು ದಿನಗಳಲ್ಲಿ ದಾಖಲೆಯ 11.3 ಶತಕೋಟಿ ಡಾಲರ್​ ಖರ್ಚು ಮಾಡಲಾಗಿದೆ. ಅಂದರೆ, ದಿನಕ್ಕೆ ಸರಾಸರಿ 1.88 ಶತಕೋಟಿ ಡಾಲರ್​.
ಇನ್ನು ಯುದ್ಧದ ಸರಾಸರಿ ದೈನಂದಿನ ವೆಚ್ಚವು 1 ಬಿಲಿಯನ್ ಡಾಲರ್​ (ಅಂದರೆ 9,447 ಕೋಟಿ ರೂ.) ಎಂದು ವರದಿಯಾಗಿದೆ. ಈ ಅಂದಾಜು ಫೆ.28ರಿಂದ ಜೂ.16 ರವರೆಗಿನ ಬೆಳವಣಿಗೆಗಳನ್ನು ಆಧರಿಸಿದೆ. ಯುದ್ಧದ ಆರಂಭಿಕ ಹಂತಗಳಲ್ಲಿ, ಇರಾನಿನ 'ಶಹೇದ್' ಡ್ರೋನ್‌ಗಳನ್ನು ಹೊಡೆದುರುಳಿಸಲು ಅಮೆರಿಕ ಅತ್ಯಂತ ದುಬಾರಿ ಕ್ಷಿಪಣಿಗಳನ್ನು ಬಳಸಿಕೊಂಡಿತು. ಪ್ರತಿ ಕ್ಷಿಪಣಿಗೆ 4 ಮಿಲಿಯನ್ ಡಾಲರ್​ ವೆಚ್ಚ ತಗುಲಿದೆ. ಆರಂಭದಲ್ಲಿ, ಕ್ಷಿಪಣಿಗಳು ಮತ್ತು ಮದ್ದುಗುಂಡುಗಳಿಗೆ ಮಾತ್ರ 25 ಬಿಲಿಯನ್ ಡಾಲರ್​ ಖರ್ಚು ಮಾಡಲಾಗುತ್ತಿತ್ತು. ಇದರೊಟ್ಟಿಗೆ, ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಹೆಚ್ಚು ನಿಯೋಜಿಸಲಾದ ಪಡೆಗಳನ್ನು ನಿರ್ವಹಿಸಲು ಸಹ ಖರ್ಚಾಗಿದೆ.

ಅಮೆರಿಕದ ಮೇಲಿನ ಒಟ್ಟು ಆರ್ಥಿಕ ಹೊರೆ

ಅನೇಕ ಅರ್ಥಶಾಸ್ತ್ರಜ್ಞರು ಮತ್ತು ವಿಮರ್ಶಕರ ಪ್ರಕಾರ, 113 ಬಿಲಿಯನ್ ಡಾಲರ್​ ಅಧಿಕೃತ ಸೇನಾ ವೆಚ್ಚವು ತೀರ ಕಡಿಮೆ. ಆದರೆ, ಅಮೆರಿಕ ಅನುಭವಿಸಿದ ಪರೋಕ್ಷ ಆರ್ಥಿಕ ನಷ್ಟಗಳನ್ನೂ ಇಲ್ಲಿ ಸೇರಿಸಿದರೆ, ಒಟ್ಟು ಹೊರೆ 1 ಟ್ರಿಲಿಯನ್ (9.43 ಲಕ್ಷ ಕೋಟಿ ರೂ.) ತಲುಪುತ್ತದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಏರಿಕೆಯಾದಂತೆ, ಅಮೇರಿಕನ್ ನಾಗರಿಕರು ಮಾತ್ರ ಸುಮಾರು 40 ಬಿಲಿಯನ್ ಡಾಲರ್​ ಹೆಚ್ಚುವರಿ ಹೊರೆಯನ್ನು ಹೊರುವಂತ ಪರಿಸ್ಥಿತಿ ನಿರ್ಮಾಣವಾಯಿತು. ಆದಾಗ್ಯೂ, ಡೆಮಾಕ್ರಟಿಕ್ ನಾಯಕರು ಮತ್ತು ಪ್ರಮುಖ ಅರ್ಥಶಾಸ್ತ್ರಜ್ಞರ ಅಂದಾಜಿನ ಪ್ರಕಾರ, ಅಮೇರಿಕನ್ ಆರ್ಥಿಕತೆ ಮತ್ತು ಜನರಿಗೆ ಉಂಟಾದ ಹಾನಿ 630 ಬಿಲಿಯನ್‌ನಿಂದ 1 ಟ್ರಿಲಿಯನ್ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಇರಾನ್‌ಗೆ ಜಾಕ್​ಪಾಟ್​

ಈ ಶಾಂತಿ ಒಪ್ಪಂದದಿಂದ ಇರಾನ್‌ಗೆ ಪರಿಹಾರ ಸಿಕ್ಕಿದೆ. ಯುದ್ಧದಲ್ಲಿ ಇರಾನ್‌ನಾದ್ಯಂತ ನಾಶವಾದ ಮೂಲಸೌಕರ್ಯ, ತೈಲ ಸಂಸ್ಕರಣ ಘಟಕಗಳು ಮತ್ತು ವಿದ್ಯುತ್ ಗ್ರಿಡ್‌ಗಳನ್ನು ಪುನರ್ನಿರ್ಮಿಸಲು ಸುಮಾರು 300 ಬಿಲಿಯನ್ ಡಾಲರ್ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಪ್ಪಂದದ ಪ್ರಕಾರ, ಟ್ರಂಪ್​ ರಾಷ್ಟ್ರವು ಇರಾನ್‌ಗೆ ಈ ಮೊತ್ತವನ್ನು ನೀಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಈ ಫಂಡ್​ ಗಲ್ಫ್ ದೇಶಗಳಿಂದ (ಅಮೆರಿಕ ಮಿತ್ರರಾಷ್ಟ್ರಗಳು) ಬರುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ, ವಿದೇಶಗಳಲ್ಲಿ ಇರಾನ್‌ನ ಬಹುಕಾಲದ ಆಸ್ತಿಗಳನ್ನೂ ಸಹ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗುವುದು. ಅತ್ತ, ಇರಾನ್​ ಶಾಂತಿ ಒಪ್ಪಂದಿಂದ ಜಾಕ್​ಪಾಟ್​ ಹೊಡೆದರೆ, ಇತ್ತ ಅಮೆರಿಕಕ್ಕೆ ಹೆಚ್ಚಿನ ಆರ್ಥಿಕ ನಷ್ಟ ಉಂಟಾಗಿದೆ. ಆದರೂ, ಟ್ರಂಪ್​ ಸೊಕ್ಕು ಕಿಂಚಿತ್ತು ಕಡಿಮೆಯಾಗಿಲ್ಲ ಎಂದೇ ಹೇಳಬಹುದು,(ಏಜೆನ್ಸೀಸ್).