ನವದೆಹಲಿ: ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ರಷ್ಯಾ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಅನ್ನು ಅಮೆರಿಕದ ಕೋಸ್ಟ್ ಗಾರ್ಡ್ (US Coast Guard) ಯಶಸ್ವಿಯಾಗಿ ವಶಪಡಿಸಿಕೊಂಡಿದೆ. ಈ ರೋಚಕ ಕಾರ್ಯಾಚರಣೆಯ ವಿಡಿಯೋವನ್ನು ಹಂಚಿಕೊಂಡಿರುವ ಯುಎಸ್ ಕೋಸ್ಟ್ ಗಾರ್ಡ್, ಇದನ್ನು 'ಅನ್‌ಸ್ಟಾಪಬಲ್ ಜಾಯಿಂಟ್ ಫೋರ್ಸ್' (ತಡೆಯಲಾಗದ ಜಂಟಿ ಪಡೆ) ಎಂದು ಬಣ್ಣಿಸಿದೆ.
'ಬೆಲ್ಲಾ-1' (Bella-1) ಹೆಸರಿನ ಈ ಹಡಗು (ನಂತರ ಇದನ್ನು 'ಮರಿನೇರಾ' ಎಂದು ಮರುನಾಮಕರಣ ಮಾಡಲಾಗಿತ್ತು), ವೆನೆಜುವೆಲಾ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ತೈಲ ಸಾಗಿಸುತ್ತಿತ್ತು ಎಂಬ ಆರೋಪವಿದೆ. ಇದನ್ನು ಕಳೆದ ಎರಡು ವಾರಗಳಿಂದ ಕೆರಿಬಿಯನ್ ಸಮುದ್ರದಿಂದ ಅಟ್ಲಾಂಟಿಕ್ ಸಾಗರದವರೆಗೆ ಸುಮಾರು 4,000 ಕಿ.ಮೀ ದೂರ ಬೆನ್ನಟ್ಟಲಾಗಿತ್ತು.
ಅಮೆರಿಕದ 'ಯುಎಸ್‌ಸಿಜಿಸಿ ಮುನ್ರೋ' (USCGC Munro) ಯುದ್ಧನೌಕೆಯು ಈ ಹಡಗನ್ನು ಪತ್ತೆಹಚ್ಚಿ ಹಿಂಬಾಲಿಸಿತ್ತು. ಐಸ್ಲ್ಯಾಂಡ್ ಸಮೀಪ ಸಮುದ್ರದ ಮಧ್ಯದಲ್ಲೇ ಅಮೆರಿಕದ ವಿಶೇಷ ಪಡೆಗಳು ಹೆಲಿಕಾಪ್ಟರ್ ಮೂಲಕ ಹಡಗಿಗೆ ಇಳಿದು ಅದನ್ನು ತನ್ನ ಸುಪರ್ದಿಗೆ ಇದೀಗ ಪಡೆದಿದ್ದು, ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದೆ.
ರಷ್ಯಾ ಬೆಂಬಲದ ವಿಫಲ ಪ್ರಯತ್ನ: ಅಮೆರಿಕದ ಪಡೆಗಳಿಂದ ತಪ್ಪಿಸಿಕೊಳ್ಳಲು ಈ ಹಡಗು ತನ್ನ ಹೆಸರನ್ನು ಬದಲಾಯಿಸಿ, ರಷ್ಯಾದ ಧ್ವಜವನ್ನು ಹಾರಿಸಿತ್ತು. ವರದಿಗಳ ಪ್ರಕಾರ, ಈ ಹಡಗನ್ನು ರಕ್ಷಿಸಲು ರಷ್ಯಾ ಜಲಾಂತರ್ಗಾಮಿಯನ್ನು (Submarine) ಕಳುಹಿಸಿತ್ತು, ಆದರೆ ಅಷ್ಟರಲ್ಲಿ ಅಮೆರಿಕದ ಪಡೆಗಳು ಹಡಗನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದವು ಎಂದು ಹೇಳಲಾಗುತ್ತಿದೆ.
ಜಾಗತಿಕ ಪರಿಣಾಮ: ಅಮೆರಿಕವು ರಷ್ಯಾದ ಧ್ವಜ ಹೊಂದಿರುವ ಹಡಗನ್ನು ವಶಪಡಿಸಿಕೊಂಡಿರುವುದು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ರಷ್ಯಾ ಆರೋಪಿಸಿದ್ದರೆ, ಅಕ್ರಮ ತೈಲ ವ್ಯಾಪಾರ ತಡೆಯಲು ಈ ಕ್ರಮ ಅನಿವಾರ್ಯ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).