ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ(India-Pakistan) ನಡುವಿನ ಮಿಲಿಟರಿ ಸಂಘರ್ಷದ ಕುರಿತು ಮತ್ತೊಮ್ಮೆ ವಿವಾದಾತ್ಮಕ ಮತ್ತು ಅತಿಶಯೋಕ್ತಿಯ ಹೇಳಿಕೆಗಳನ್ನು ನೀಡಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ 'ಬೋರ್ಡ್ ಆಫ್ ಪೀಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾನು ಎರಡೂ ರಾಷ್ಟ್ರಗಳಿಗೆ ಶೇ. 200ರಷ್ಟು ಸುಂಕ ಹೇರುವುದಾಗಿ ಬೆದರಿಕೆ ಹಾಕಿದ್ದೆ, ಹಾಗಾಗಿ ಯುದ್ಧ ನಿಂತಿತು" ಎಂದು ಪ್ರತಿಪಾದಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಉಪಸ್ಥಿತರಿದ್ದರು. ಟ್ರಂಪ್ ತಮ್ಮ ಭಾಷಣದ ನಡುವೆ ಷರೀಫ್ ಅವರನ್ನು ಎದ್ದು ನಿಲ್ಲುವಂತೆ ಹೇಳಿ, "ನನ್ನ ಮಧ್ಯಸ್ಥಿಕೆಯಿಂದಾಗಿ ಪಾಕಿಸ್ತಾನದ 2.5 ಕೋಟಿ ಜನರ ಪ್ರಾಣ ಉಳಿಯಿತು ಎಂದು ನೀವೇ ಹೇಳಿದ್ದೀರಿ" ಎಂದು ನೆನಪಿಸಿದರು.
ಈ ಹಿಂದೆ ನಡೆದ ಸಂಘರ್ಷದಲ್ಲಿ 7 ವಿಮಾನಗಳು ಪತನಗೊಂಡಿವೆ ಎಂದಿದ್ದ ಟ್ರಂಪ್, ಈಗ ಆ ಸಂಖ್ಯೆಯನ್ನು 11ಕ್ಕೆ ಏರಿಸಿದ್ದಾರೆ. "ಅತ್ಯಂತ ದುಬಾರಿ ಬೆಲೆಯ 11 ಜೆಟ್ ವಿಮಾನಗಳು ಪತನಗೊಂಡಿದ್ದವು" ಎಂದು ಅವರು ಹೇಳಿದ್ದಾರೆ.
"ನಾನು ಪ್ರಧಾನಿ ಮೋದಿ ಮತ್ತು ಷರೀಫ್ ಅವರಿಗೆ ಕರೆ ಮಾಡಿದ್ದೆ. ನೀವು ಯುದ್ಧ ನಿಲ್ಲಿಸದಿದ್ದರೆ ನಿಮ್ಮ ದೇಶಗಳ ಮೇಲೆ ಶೇ. 200ರಷ್ಟು ಸುಂಕ ಹೇರುತ್ತೇನೆ ಮತ್ತು ವ್ಯಾಪಾರ ಒಪ್ಪಂದಗಳನ್ನು ರದ್ದು ಮಾಡುತ್ತೇನೆ ಎಂದು ಎಚ್ಚರಿಸಿದ್ದೆ. ಹಣ ಕಳೆದುಕೊಳ್ಳಲು ಯಾರಿಗೂ ಇಷ್ಟವಿಲ್ಲ, ಹಾಗಾಗಿ ಅವರು ಯುದ್ಧ ನಿಲ್ಲಿಸಿದರು" ಎಂದು ಟ್ರಂಪ್ ಹಾಸ್ಯಮಯವಾಗಿ ವಿವರಿಸಿದ್ದಾರೆ.
ಅಮೆರಿಕ ಅಧ್ಯಕ್ಷರ ಈ ಎಲ್ಲ ಹಕ್ಕುಗಳನ್ನು ಭಾರತ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಭಾರತವು ಯಾವುದೇ ಮೂರನೇ ವ್ಯಕ್ತಿಯ ಅಥವಾ ದೇಶದ ಮಧ್ಯಸ್ಥಿಕೆಯನ್ನು ಒಪ್ಪಿಲ್ಲ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಘೋಷಣೆಯಾಗಿದ್ದು ಉಭಯ ದೇಶಗಳ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರ (DGMO) ನೇರ ಮಾತುಕತೆಯ ಫಲವಾಗಿ ಎಂಬುದು ಭಾರತದ ನಿಲುವು. 11 ವಿಮಾನಗಳು ಪತನಗೊಂಡಿವೆ ಎಂಬ ಟ್ರಂಪ್ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಕಳೆದ ವರ್ಷದ ಸಂಘರ್ಷದಲ್ಲಿ ಭಾರತದ ಯಾವುದೇ ಯುದ್ಧ ವಿಮಾನಗಳು ಪತನಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಿನ್ನೆಲೆ: ಆಪರೇಷನ್ ಸಿಂದೂರ್
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂದೂರ್' ಆರಂಭಿಸಿತ್ತು. ಇದಾದ ನಂತರ ಅಮೆರಿಕ ಅಧ್ಯಕ್ಷರು ತಾವು ಎಂಟು ಯುದ್ಧಗಳನ್ನು ನಿಲ್ಲಿಸಿರುವುದಾಗಿ 80ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ.