ಅಮೆರಿಕಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ರುತ್ ಸೋಶಿಯಲ್ (Truth Social) ನಲ್ಲಿ ತಮ್ಮನ್ನು ತಾವು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ (Acting President of Venezuela) ಎಂದು ಘೋಷಿಸಿಕೊಂಡಿರುವ ಸುದ್ದಿ ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಭಾನುವಾರ (ಜನವರಿ 11, 2026) ತಮ್ಮ ಅಧಿಕೃತ ಭಾವಚಿತ್ರದೊಂದಿಗೆ ವೆನೆಜುವೆಲಾದ ಹಂಗಾಮಿ ಅಧ್ಯಕ್ಷ, ಜನವರಿ 2026 ರಿಂದ ಅಧಿಕಾರದಲ್ಲಿ ಎಂಬ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ.
ಟ್ರಂಪ್ ಪೋಸ್ಟ್‌ನಲ್ಲೇನಿದೆ?
ಟ್ರಂಪ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅವರ ಅಧಿಕೃತ ಭಾವಚಿತ್ರವಿದ್ದು, ಅದರ ಕೆಳಗೆ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ - ಜನವರಿ 2026 ರಿಂದ ಅಧಿಕಾರದಲ್ಲಿ" ಎಂದು ಬರೆಯಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಅಂತರಾಷ್ಟ್ರೀಯ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.
ಹಿನ್ನೆಲೆ ಏನು?
ವೆನೆಜುವೆಲಾದಲ್ಲಿ ದೀರ್ಘಕಾಲ ಆಡಳಿತ ನಡೆಸಿದ್ದ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಮಿಲಿಟರಿ ಇತ್ತೀಚೆಗೆ ಬಂಧಿಸಿತ್ತು. ಮಾದಕವಸ್ತು ಕಳ್ಳಸಾಗಣೆ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳ ಮೇಲೆ ಮಡುರೊ ಅವರನ್ನು ಅಮೆರಿಕಕ್ಕೆ ಕರೆತರಲಾಗಿದೆ. ಈ ಮಿಲಿಟರಿ ಕಾರ್ಯಾಚರಣೆಯ ನಂತರ ವೆನೆಜುವೆಲಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಅಲ್ಲಿನ ಆಡಳಿತವನ್ನು ಅಮೆರಿಕ ನಿಯಂತ್ರಿಸುತ್ತಿದೆ.
ಒಂದೆಡೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ವೆನೆಜುವೆಲಾದ ದೈನಂದಿನ ಆಡಳಿತದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ, ಅಧ್ಯಕ್ಷ ಟ್ರಂಪ್ ಅವರ ಈ ಪೋಸ್ಟ್ ಅಮೆರಿಕದ ವಿದೇಶಾಂಗ ನೀತಿಯ ಬಗ್ಗೆ ಗೊಂದಲ ಮೂಡಿಸಿದೆ. ವೆನೆಜುವೆಲಾದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಅಮೆರಿಕವೇ ಆ ದೇಶದ ಉಸ್ತುವಾರಿ ವಹಿಸಲಿದೆ ಎಂಬ ಸೂಚನೆಯನ್ನು ಈ ಪೋಸ್ಟ್ ನೀಡುತ್ತಿದೆ.
ಈಗಾಗಲೇ ವೆನೆಜುವೆಲಾದ ಸುಪ್ರೀಂ ಕೋರ್ಟ್ ಡೆಲ್ಸಿ ರೊಡ್ರಿಗಸ್ ಅವರನ್ನು ಅಲ್ಲಿನ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿದೆ. ಹೀಗಿರುವಾಗ ಟ್ರಂಪ್ ಅವರ ಈ ಅಚ್ಚರಿಯ ಘೋಷಣೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.