ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಎರಡು ವರ್ಷಗಳ ಬಳಿಕ ಜೆನೆರಿಕ್ ಔಷಧಗಳ ಆಮದಿನ ಮೇಲೆ 200% ಸುಂಕ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ | Donald Trump

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಂದು ಪ್ರಮುಖ ವ್ಯಾಪಾರ ನಿರ್ಧಾರವನ್ನು ಘೋಷಿಸಿದ್ದು, ವಿದೇಶದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಎರಡು ವರ್ಷಗಳ ಕಾಲ ಯಾವುದೇ ಸುಂಕವಿರುವುದಿಲ್ಲ, ಆದರೆ ಎರಡು ವರ್ಷಗಳ ಬಳಿಕ 200% ವರೆಗೂ ತೆರಿಗೆ ವಿಧಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 2026 ಆಗಸ್ಟ್ 1ರಿಂದ ಜಾರಿಗೆ ಬರುವಂತೆ, ಯುನೈಟೆಡ್ ಸ್ಟೇಟ್ಸ್‌ಗೆ ಆಮದಾಗುವ ಎಲ್ಲಾ ಜೆನೆರಿಕ್ ಔಷಧಿಗಳಿಗೆ ಎರಡು ವರ್ಷಗಳ ಅವಧಿಗೆ ಶೂನ್ಯ ಶೇಕಡಾವಾರು ಸುಂಕವನ್ನು ವಿಧಿಸಲಾಗುತ್ತದೆ. ಬಳಿಕ ಸುಂಕವನ್ನು ಒಂದು ವರ್ಷದ ಅವಧಿಗೆ 100% ಮತ್ತು ನಂತರ 200% ಗೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಔಷಧ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶ. ಜೆನೆರಿಕ್ ಔಷಧಗಳನ್ನು ಉತ್ಪಾದಿಸುವ ಕಂಪನಿಗಳು ಮೊದಲ ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದ್ದು, ಇಲ್ಲದಿದ್ರೆ ಭಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತು ದೇಶೀಯವಾಗಿ ಔಷಧಗಳನ್ನು ಉತ್ಪಾದಿಸುವ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಭಾರತವು ಅಮೆರಿಕಕ್ಕೆ ಜೆನೆರಿಕ್ ಔಷಧಿಗಳ ಪ್ರಮುಖ ಪೂರೈಕೆದಾರರಲ್ಲಿ ಒಂದಾಗಿದೆ. ಭಾರತೀಯ ಔಷಧ ಕಂಪನಿಗಳು ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ಡೊನಾಲ್ಡ್ ಟ್ರಂಪ್ ಅವರ ಈ ಕ್ರಮವು ಅಮೆರಿಕಕ್ಕೆ ಜೆನೆರಿಕ್ ಔಷಧಿಗಳ ಅತಿದೊಡ್ಡ ರಫ್ತುದಾರ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ (ಏಜೆನ್ಸೀಸ್).