- ಟ್ರಂಪ್ನ ವಿದೇಶಾಂಗ ನೀತಿ, ಇರಾನ್ ಮೇಲಿನ ದಾಳಿ ಖಂಡಿಸಿದ ಪೋಪ್ ಲಿಯೋ
- ಯುದ್ಧ ಎಲ್ಲದಕ್ಕೂ ಪರಿಹಾರವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಪೋಪ್ ಲಿಯೋ XIV
- ನಾನೇನು ನಿಮ್ಮ ಅಭಿಮಾನಿಯಲ್ಲ, ನಿಮ್ಮ ಕೆಲಸ ಮಾಡಿ ರಾಜಕಾರಣಕ್ಕೆ ತಲೆ ಹಾಕ್ಬೇಡಿ ಎಂದ ಟ್ರಂಪ್
ವಾಷಿಂಗ್ಟನ್ ಡಿಸಿ: ಜೀಸಸ್ ಶಾಂತಿಯ ಸಂಕೇತ ಅವರೆಂದಿಗೂ ಯುದ್ಧವನ್ನು ಬೆಂಬಲಿಸೋದಿಲ್ಲ. ಯೇಸು ದಮನಿತರ ಪರ ಎಂದು ಪೋಪ್ ಲಿಯೋ XIV ಹೇಳಿಕೆ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡ ಪೋಸ್ಟ್ವೊಂದು ವೈರಲ್ ಆಗುತ್ತಿದೆ. ಈ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಟ್ರಂಪ್ ಪೋಸ್ಟ್ನಲ್ಲಿ ಏನಿದೆ?
ಪೋಪ್ ಲಿಯೋ XIV ಅವರ ಪೋಸ್ಟ್ ಉಲ್ಲೇಖಿಸಿ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಡೊನಾಲ್ಡ್ ಟ್ರಂಪ್ ಎಐ ಜನರೇಟೆಡ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ತಾವೇ ಜೀಸಸ್ ಎಂದು ಹೋಲುವಂತೆ, ತಾವೇ ಜನರ ರೋಗ ನಿವಾರಿಸುವಂತಹ ಫೋಟೋ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಈ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಶ್ವೇತಭವನ ಮತ್ತು ವ್ಯಾಟಿಕನ್ ನಡುವೆ ಸಂಬಂಧ ಹದಗೆಟ್ಟಿರುವ ಹೊತ್ತಲ್ಲಿ ಈ ಪೋಸ್ಟ್ ಹಂಚಿಕೊಂಡಿರುವುದು ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ.
ಪೋಪ್ ಹೇಳಿದ್ದೇನು?
ಟ್ರಂಪ್ನ ಕಠಿಣ ವಲಸೆ ನೀತಿಯಿಂದ ಬೀರುತ್ತಿರುವ ಪರಿಣಾಮ, ಇರಾನ್ ಮೇಲಿನ ದಾಳಿಯನ್ನು ಉಲ್ಲೇಖಿಸಿ ಪೋಪ್ ಲಿಯೋ ಹಲವಾರು ಬಾರಿ ಮಾತನಾಡಿದ್ದರು. ಜೊತೆಗೆ ಸಂಯಮ ಮತ್ತು ಶಾಂತಿ ಕೋರಿದ್ದರು. "ಜೀಸಸ್ ಯುದ್ಧಕ್ಕೆ ಎಂದಿಗೂ ಪ್ರೇರಣೆ ನೀಡಿಲ್ಲ. ಹಿಂಸೆಯನ್ನು ಒಪ್ಪುವುದಿಲ್ಲ. ಯುದ್ಧ ಮಾಡುವವರ ಪ್ರಾರ್ಥನೆಯನ್ನು ಅವರೆಂದಿಗೂ ಆಲಿಸೋದಿಲ್ಲ. ತುಳಿತಕ್ಕೊಳಗಾದವರ ಪರ ಅವರು ನಿಲ್ಲುತ್ತಾರೆ ಸ್ವಾಂತ್ವನ ನೀಡುತ್ತಾರೆ. ಸಮಸ್ಯೆಗೆ ಯುದ್ಧ ಪರಿಹಾರವಲ್ಲ" ಎಂದು ಹೇಳಿದ್ದರು.
ಟ್ರಂಪ್ ಟೀಕೆ ಏನು?
ಈ ಹೇಳಿಕೆ ಉಲ್ಲೇಖಿಸಿ ಮಾತನಾಡಿರುವ ಅವರು "ಪೋಪ್ಗೆ ವಿದೇಶಾಂಗ ನೀತಿ ಬಗ್ಗೆ ಗಾಳಿ-ಗಂಧವೂ ಗೊತ್ತಿಲ್ಲ. ನಾನೇನೂ ಅವರ ಅಭಿಮಾನಿಯೂ ಅಲ್ಲ. ಇರಾನ್ ಪರಮಾಣು ಹೊಂದಲಿ ಎಂದು ಬಯಸುವ ಪೋಪ್ ನಮಗೆ ಬೇಡ" ಎಂದು ಟ್ರಂಪ್ ಗುಡುಗಿದ್ದಾರೆ.
ಮುಂದುವರೆದು, " ನಾನು ಶ್ವೇತಭವನದಲ್ಲಿ ಇಲ್ಲದಿದ್ದರೆ, ಪೋಪ್ ಲಿಯೋ ವ್ಯಾಟಿಕನ್ ನಲ್ಲಿ ಇರುತ್ತಿರಲಿಲ್ಲ. ನಾನಿಲ್ಲದಿದ್ದರೆ ಪೋಪ್ ಆಗೋಕೆ ಆಗ್ತಿರಲಿಲ್ಲ. ಅಮೆರಿಕನ್ ಆದ ಕಾರಣ ಅವರು ಪೋಪ್ ಆಗಿದ್ದಾರೆ. ಪೋಪ್ ಆಗಿ ಏನು ಕೆಲಸ ಇದೆಯೋ ಅದನ್ನು ಮಾಡಿಕೊಂಡು ಹೋದರೆ ಸಾಕು ಎಂದು ಲೇವಡಿ ಮಾಡಿದ್ದಾರೆ. ಸದ್ಯ ಅವರು ಸಂಪೂರ್ಣ ಎಡಪಂಥೀಯರ ಜೊತೆ ಸೇರಿಕೊಂಡಿದ್ದಾರೆ. ಪೋಪ್ ಅವರ ಸಹೋದರ ನನ್ನ MAGA ಚಳುವಳಿಯನ್ನು ಬೆಂಬಲಿಸುತ್ತಾರೆ ನನಗೆ ಅವರೇ ಇಷ್ಟ" ಎಂದು ಟ್ರಂಪ್ ಮಾತನಾಡಿದ್ದಾರೆ, (ಏಜೆನ್ಸೀಸ್)