Ron Shinnick 
ವಿದೇಶ

ಹೆಂಡತಿಯ ಬಗ್ಗೆ ಮಾತನಾಡಿದ್ದಕ್ಕೆ ಇಡೀ ಪೊಲೀಸ್ ಇಲಾಖೆಯನ್ನೇ ವಜಾಗೊಳಿಸಿದ ಮೇಯರ್! | Ron Shinnick

ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ಕೊಹುತ್ತಾ (Cohutta) ಎಂಬ ಸಣ್ಣ ಪಟ್ಟಣದ ಮೇಯರ್ ಒಬ್ಬರು ತಮ್ಮ ಪತ್ನಿಯ ವಿರುದ್ಧ ಮಾತನಾಡಿದರೆಂಬ ಕಾರಣಕ್ಕೆ ಇಡೀ ಪೊಲೀಸ್ ಇಲಾಖೆಯನ್ನೇ ವಜಾಗೊಳಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಹೌದು,ಮೇಯರ್ ರಾನ್ ಶಿನಿಕ್ (Ron Shinnick) ಅವರು ಬುಧವಾರ (ಮೇ 6) ಇಲಾಖೆಯಲ್ಲಿದ್ದ ಎಲ್ಲಾ 10 ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

ಬಾಗಿಲು ಹಾಕಿದ ಪೊಲೀಸ್ ಠಾಣೆ!

"ಪೊಲೀಸ್ ಇಲಾಖೆಯನ್ನು ವಿಸರ್ಜಿಸಲಾಗಿದೆ ಮತ್ತು ಎಲ್ಲಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ" ಎಂಬ ನಾಮಫಲಕವನ್ನು ಇಲಾಖೆಯ ಬಾಗಿಲಿಗೆ ಅಂಟಿಸಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ನಿವಾಸಿಗಳು ಕೌಂಟಿ ಶೆರಿಫ್ ಕಚೇರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಶಿನಿಕ್, "ಅವರಿಗೆ ಬರಬೇಕಾದ ವೇತನವನ್ನು ನೀಡಲಾಗುವುದು. ಬದಲಾವಣೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಗಲಾಟೆಗೆ ಕಾರಣವೇನು?

ಈ ವಿವಾದದ ಹಿಂದೆ ಮೇಯರ್ ಪತ್ನಿ ಪಾಮ್ ಶಿನಿಕ್ ಅವರ ಹಸ್ತಕ್ಷೇಪವಿದೆ ಎನ್ನಲಾಗಿದೆ. ಪಾಮ್ ಅವರು ಈ ಹಿಂದೆ ಪಟ್ಟಣದ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, 'ಕಚೇರಿಯಲ್ಲಿ ಕೆಟ್ಟ ವಾತಾವರಣ ನಿರ್ಮಿಸುತ್ತಿದ್ದಾರೆ' ಎಂಬ ಆರೋಪದ ಮೇಲೆ ಅವರನ್ನು ಕಳೆದ ವರ್ಷ ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ, ಕೆಲಸದಿಂದ ಹೋದ ಮೇಲೂ ಪಾಮ್ ಅವರು ಕಚೇರಿಯ ರಹಸ್ಯ ದಾಖಲೆಗಳನ್ನು ಮತ್ತು ವೈಯಕ್ತಿಕ ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಎಂದು ಪೊಲೀಸರು ದೂರು ನೀಡಿದ್ದರು.
ಈ ಕುರಿತು ಪೊಲೀಸ್ ಅಧಿಕಾರಿಗಳು ಫೇಸ್‌ಬುಕ್‌ನಲ್ಲಿ ಮೇಯರ್ ಪತ್ನಿಯ ಬಗ್ಗೆ ಟೀಕಾತ್ಮಕವಾಗಿ ಅಥವಾ "ಅಸಭ್ಯವಾಗಿ" ಕಾಮೆಂಟ್ ಮಾಡಿದ್ದಾರೆ ಎಂಬುದು ಮೇಯರ್ ಕೋಪಕ್ಕೆ ಕಾರಣವಾಗಿದೆ. ಈ ಹಿಂದೆ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಲಾಗಿತ್ತಾದರೂ, ಒಂದು ವಾರದ ನಂತರ ಇಡೀ ತಂಡವನ್ನೇ ಮನೆಗೆ ಕಳುಹಿಸಲಾಗಿದೆ.

ವೈಯಕ್ತಿಕ ಸೇಡಿನ ಕ್ರಮ!

ಕೆಲಸ ಕಳೆದುಕೊಂಡ ಅಧಿಕಾರಿಗಳಲ್ಲಿ ಒಬ್ಬರಾದ ಸರ್ಜೆಂಟ್ ಜೆರೆಮಿ ಮೇ ಮಾತನಾಡಿ, "ಇದು ಮೇಯರ್ ಅವರ ವೈಯಕ್ತಿಕ ಸೇಡಿನ ರಾಜಕಾರಣ. ನಾವು ಪಾರದರ್ಶಕತೆಗಾಗಿ ದನಿ ಎತ್ತಿದ್ದಕ್ಕೆ ನಮ್ಮೆಲ್ಲರನ್ನೂ ಕೆಲಸದಿಂದ ತೆಗೆದುಹಾಕಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ವಜಾಗೊಂಡಿರುವ ಅಧಿಕಾರಿಗಳು ತಮ್ಮ ಬಳಿ ಇದ್ದ ಇಲಾಖೆಯ ಎಲ್ಲಾ ಉಪಕರಣಗಳನ್ನು ಹಿಂದಿರುಗಿಸುವಂತೆ ಆದೇಶಿಸಲಾಗಿದೆ. ಈ ಸಣ್ಣ ಪಟ್ಟಣದ ರಕ್ಷಣಾ ಜವಾಬ್ದಾರಿಯನ್ನು ಈಗ ವಿಟ್‌ಫೀಲ್ಡ್ ಕೌಂಟಿ ಶೆರಿಫ್ ಕಚೇರಿಗೆ ವಹಿಸಲಾಗಿದೆ,(ಏಜೆನ್ಸೀಸ್​).