ಅಮೆರಿಕಾ: ವ್ಯಕ್ತಿಯೊಬ್ಬ ದಿನಕ್ಕೆ 100 ಜೀವಂತ ಕೀಟಗಳನ್ನು ( Insect) ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ.
ಅಮೆರಿಕದ ಚಿಕಾಗೋದ 26 ವರ್ಷದ ಕಾರ್ಲೋಸ್ ಎಂಬುವವರು ಬದುಕಿರುವ ಕೀಟಗಳನ್ನು ತಿನ್ನುವ ವಿಲಕ್ಷಣ ಚಟವನ್ನು ಹೊಂದಿದ್ದಾರೆ. ಜನಪ್ರಿಯ ಟಿವಿ ಶೋ 'ಮೈ ಸ್ಟ್ರೇಂಜ್ ಅಡಿಕ್ಷನ್' (My Strange Addiction) ನ ಹೊಸ ಸೀಸನ್‌ನಲ್ಲಿ ಇವರ ಈ ವಿಚಿತ್ರ ಹವ್ಯಾಸದ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಕಾರ್ಲೋಸ್ ದಿನಕ್ಕೆ ಸರಾಸರಿ 100ರಷ್ಟು ಹಸಿ ಮತ್ತು ಬದುಕಿರುವ ಕೀಟಗಳನ್ನು ತಿನ್ನುತ್ತಾರೆ. ಇದರಲ್ಲಿ ಮಿಡತೆಗಳು (Crickets), ಜಿರಳೆಗಳು (Cockroaches) ಮತ್ತು ಹುಳುಗಳು (Mealworms) ಸೇರಿವೆ.
ಕಾರ್ಲೋಸ್ ಪ್ರಕಾರ, ಬದುಕಿರುವ ಹುಳುಗಳನ್ನು ತಿಂದಾಗ ಅವು ಗಂಟಲಿನಲ್ಲಿ ಚಲಿಸುವುದು ಅವರಿಗೆ 'ಮಸಾಜ್' ಮಾಡಿದಂತಹ ಅನುಭವ ನೀಡುತ್ತದೆಯಂತೆ. ಅಲ್ಲದೆ, ಮಿಡತೆಗಳು ಅವರಿಗೆ ಬೆಣ್ಣೆ ಹಚ್ಚಿದ ಪಾಪ್‌ಕಾರ್ನ್‌ನಂತೆ ರುಚಿಸುತ್ತವೆ ಎಂದು ಹೇಳಿಕೊಂಡಿದ್ದಾರೆ.
ಅವರು ಕೀಟಗಳನ್ನು ತಿನ್ನುವಾಗ 'ಮಾಸ್ಟರ್ ಆಫ್ ದೆರ್ ಡೆಸ್ಟಿನಿ' (Master of their destiny) ನಾನೇ ಎಂಬ ಭಾವನೆ ಬರುತ್ತದೆ, ಇದು ತಮಗೆ ಶಕ್ತಿ ಮತ್ತು ನಿಯಂತ್ರಣದ ಅನುಭವ ನೀಡುತ್ತದೆ ಎಂದು ಕಾರ್ಲೋಸ್ ವಿವರಿಸಿದ್ದಾರೆ.
ಅವರ ಸಂಗಾತಿ ಮಾಯಾ ಮತ್ತು ಕುಟುಂಬದವರು ಈ ಹವ್ಯಾಸದಿಂದ ಕಾರ್ಲೋಸ್ ಅವರ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೀಟಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಜೀವಿಗಳಿಂದ (Parasites) ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕಾರ್ಲೋಸ್ ಈ ಅಭ್ಯಾಸವನ್ನು ತಮ್ಮ 4ನೇ ವಯಸ್ಸಿನಿಂದಲೇ ಪ್ರಾರಂಭಿಸಿದ್ದರಂತೆ. ಅಂದು ಕುತೂಹಲಕ್ಕಾಗಿ ಕೀಟ ತಿಂದಿದ್ದ ಅವರು, ಈಗ ಅದಕ್ಕೆ ಸಂಪೂರ್ಣವಾಗಿ ದಾಸರಾಗಿದ್ದಾರೆ. ಇದು ತಮಗೆ ಮಾನಸಿಕವಾಗಿ ಶಾಂತಿ ಮತ್ತು ಸ್ಥಿರತೆಯನ್ನು ನೀಡುತ್ತದೆ ಎಂಬುದು ಅವರ ವಾದ.