US Iran Conflict | ಹೊರ್ಮುಜ್ ಜಲಸಂಧಿ ಬಂದ್ ಘೋಷಣೆ ಬೆನ್ನಲ್ಲೇ ಟ್ರಂಪ್ ಪಡೆಯಿಂದ ಕ್ಷಿಪಣಿ ಮಳೆ!
US Iran Conflict: ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಸೈಪ್ರಸ್ ಧ್ವಜ ಹೊಂದಿದ್ದ ಎಮ್/ವಿ ಜಿಎಫ್‌ಎಸ್ ಗ್ಯಾಲಕ್ಸಿ (M/V GFS Galaxy) ಎಂಬ ವಾಣಿಜ್ಯ ಕಂಟೇನರ್ ಹಡಗಿನ ಮೇಲೆ ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ದಾಳಿ ನಡೆಸಿದ ನಂತರ, ಅಮೆರಿಕ ಶನಿವಾರ ಇರಾನ್ ವಿರುದ್ಧ ಹೊಸ ಸುತ್ತಿನ ಭಾರಿ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕ ಮಿಲಿಟರಿ ತಿಳಿಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಬೆಳಿಗ್ಗೆ 5:45 ಕ್ಕೆ ಈ ದಾಳಿಗಳನ್ನು ಪ್ರಾರಂಭಿಸಿದ್ದು, ಇದು ಈ ವಾರದಲ್ಲಿ ಇರಾನ್ ವಿರುದ್ಧ ಅಮೆರಿಕ ನಡೆಸಿದ ಮೂರನೇ ಸುತ್ತಿನ ಪ್ರಹಾರವಾಗಿದೆ ಎಂದು ಹೇಳಿದೆ.
ಓರ್ವ ಸಿಬ್ಬಂದಿ ನಾಪತ್ತೆ!...
ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ವಾಣಿಜ್ಯ ಹಡಗಿನ ಮೇಲಿನ ಈ ದಾಳಿಯಿಂದಾಗಿ ಓರ್ವ ನಾಗರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮತ್ತು ಇಂಜಿನ್ ಕೊಠಡಿಗೆ ಭಾರಿ ಹಾನಿಯಾಗಿರುವುದರಿಂದ ಹಡಗು ತನ್ನ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದೆ. ಈ ಹಿಂದಿನ ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಹೊಣೆಗಾರರನ್ನಾಗಿ ಮಾಡಿದ ನಂತರ ಇರಾನ್‌ಗೆ ತಿಳಿವಳಿಕೆ ಪತ್ರಕ್ಕೆ ಬದ್ಧವಾಗಿರಲು ಮತ್ತೊಂದು ಅವಕಾಶ ನೀಡಲಾಗಿತ್ತು, ಆದರೆ ಇರಾನ್ ಮತ್ತೆ ಅದರಲ್ಲಿ ವಿಫಲವಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಸಾಗುವ ನಾಗರಿಕ ನಾವಿಕರು ಮತ್ತು ವಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಮೂಲಕ ಅದಕ್ಕೆ ಭಾರಿ ನಷ್ಟ ಉಂಟುಮಾಡುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕ ಮಿಲಿಟರಿ ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ನೇರ ನಿರ್ದೇಶನದ ಮೇರೆಗೆ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಖಚಿತಪಡಿಸಿದೆ.
ದಾಳಿಯ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಇರಾನ್ ತಪ್ಪು ನಿರ್ಧಾರ ತೆಗೆದುಕೊಂಡಿದ್ದು, ಈಗ ಅದಕ್ಕೆ ತಕ್ಕ ಬೆಲೆ ತೆರುತ್ತಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ದಕ್ಷಿಣ ಇರಾನ್‌ನ ಬುಶೆಹರ್ ಮತ್ತು ಅಸಲುಯೆಹ್ ಪ್ರದೇಶಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ಪ್ರೆಸ್ ಟಿವಿ ವರದಿ ಮಾಡಿದೆ. ಇರಾನ್‌ನ ಚಾಬಹಾರ್ ಬಳಿಯೂ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ.
ಕ್ವೆಷ್ಮ್ ದ್ವೀಪದಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ಮೆಹ್ರ್ ನ್ಯೂಸ್ ಏಜೆನ್ಸಿ ವರದಿ ಮಾಡಿದ್ದರೆ, ದಕ್ಷಿಣದ ಹೊರ್ಮುಜ್ನ ಪ್ರಾಂತ್ಯದ ಬಂದರ್ ಅಬ್ಬಾಸ್‌ನಲ್ಲಿ ಮೂರು ಹಾಗೂ ಸಿರಿಕ್‌ನಲ್ಲಿ ಎರಡು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಐಆರ್‌ಐಬಿ (IRIB) ತಿಳಿಸಿದೆ. ಹಾಗೆಯೇ, ಬಂದರು ನಗರವಾದ ಜಸ್ಕ್‌ನಲ್ಲಿ 10 ಕ್ಕೂ ಹೆಚ್ಚು ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ಐಆರ್‌ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ ಇರಾನ್
ಅಮೆರಿಕದೊಂದಿಗೆ ಮಾಡಿಕೊಂಡಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಮತ್ತಷ್ಟು ಅಪಾಯಕ್ಕೆ ಸಿಲುಕಿಸಿದ ಇರಾನ್, ಪ್ರಮುಖ ಜಲಮಾರ್ಗದಲ್ಲಿ ಅನಧಿಕೃತ ಮಾರ್ಗವನ್ನು ಬಳಸಿದ ಹಡಗಿನ ಮೇಲೆ ಎಚ್ಚರಿಕೆಯ ಗುಂಡು ಹಾರಿಸಿದ ನಂತರ ಹೊರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಈ ಕ್ಷಿಪಣಿ ದಾಳಿಗಳು ನಡೆದಿವೆ.
ಈ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಐಆರ್‌ಜಿಸಿ ನೌಕಾಪಡೆಯು ಯಾವುದೇ ಹಡಗುಗಳಿಗೆ ಈ ಆಯಕಟ್ಟಿನ ಜಲಮಾರ್ಗದ ಮೂಲಕ ಸಂಚರಿಸಲು ಅನುಮತಿ ನೀಡುವುದಿಲ್ಲ ಎಂದು ಇರಾನ್‌ನ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (IRIB) ಪ್ರಕಟಿಸಿದೆ.
ಅಮೆರಿಕದ ವಿರುದ್ಧ ಕದನ ವಿರಾಮ ಉಲ್ಲಂಘನೆ ಆರೋಪ ಮಾಡಿದ ಇರಾನ್
ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆಗಳ ಕುರಿತು ಚರ್ಚಿಸಲು ಒಮಾನ್‌ನಲ್ಲಿರುವ ತಮ್ಮ ಸಹವರ್ತಿಯೊಂದಿಗೆ ಸಭೆ ನಡೆಸಿರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ. ವಿಶ್ವದ ದೇಶಗಳು ದಶಕಗಳಿಂದ ಈ ಜಲಸಂಧಿಯನ್ನು ಅಂತರರಾಷ್ಟ್ರೀಯ ಜಲಮಾರ್ಗವೆಂದು ಪರಿಗಣಿಸಿವೆ. ಆದರೆ, ಯುದ್ಧ ಪ್ರಾರಂಭವಾದ ನಂತರ ಜಲಸಂಧಿಯು ತನ್ನ ನಿಯಂತ್ರಣದಲ್ಲಿರಬೇಕು ಮತ್ತು ಅದರ ಮೂಲಕ ಹಾದುಹೋಗುವ ಹಡಗುಗಳಿಂದ ಶುಲ್ಕ ಸಂಗ್ರಹಿಸಲು ತನಗೆ ಅವಕಾಶ ನೀಡಬೇಕು ಎಂದು ಇರಾನ್ ಪಟ್ಟು ಹಿಡಿದಿದೆ.
ಇರಾನ್ ಮುಕ್ತ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್‌ಗಳಲ್ಲಿ ಕಚ್ಚಾ ತೈಲವನ್ನು ಮಾರಾಟ ಮಾಡಲು ನೀಡಲಾಗಿದ್ದ ವಿನಾಯಿತಿಗಳನ್ನು ರದ್ದುಗೊಳಿಸುವ ಮೂಲಕ ವಾಷಿಂಗ್ಟನ್ ತಾತ್ಕಾಲಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅರಾಗ್ಚಿ ಆರೋಪಿಸಿದ್ದಾರೆ. ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಈ ವಿನಾಯಿತಿಗಳನ್ನು ಹಿಂಪಡೆದುಕೊಂಡಿತ್ತು(ಏಜೆನ್ಸೀಸ್).