Trump Dollar | ಅಮೆರಿಕ ಡಾಲರ್ ಮೇಲೆ ಟ್ರಂಪ್ ಚಿತ್ರ 
ವಿದೇಶ

ಅಮೆರಿಕ ಡಾಲರ್ ಮೇಲೆ ಟ್ರಂಪ್ ಚಿತ್ರ: ಶತಮಾನದ ಇತಿಹಾಸದಲ್ಲೇ ಮೊದಲು...ಅಷ್ಟಕ್ಕೂ ಇದರ ರೇಟ್ ಎಷ್ಟು..? ಕಾನೂನು ಒಪ್ಪುತ್ತಾ..? | Trump Dollar

Trump Dollar: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವು ಇದೀಗ ದೇಶದ ನಾಣ್ಯದ ಮೇಲೆ ಅಧಿಕೃತವಾಗಿ ಕಾಣಿಸಿಕೊಳ್ಳುವ ಮೂಲಕ ಹೊಸ ಅಧ್ಯಾಯ ಆರಂಭವಾಗಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆಗೆ (ಇಎಸ್​ಟಿ) (16:00 ಜಿಎಂಟಿ), ಯುಎಸ್ ಮಿಂಟ್ ಸಂಸ್ಥೆಯು ದೇಶದ 250ನೇ ಸ್ವಾತಂತ್ರ್ಯ ವರ್ಷಾಚರಣೆಯ ನೆನಪಿಗಾಗಿ ಟ್ರಂಪ್ ಅವರ ಮುಖಚಿತ್ರವಿರುವ ವಿಶೇಷ $1 ನಾಣ್ಯವನ್ನು ಚಲಾವಣೆಗೆ ತಂದಿದೆ.
ಈ ಚಿನ್ನದ ಬಣ್ಣದ ನಾಣ್ಯಗಳ ಒಂದು ಬದಿಯಲ್ಲಿ ಟ್ರಂಪ್ ಭಾವಚಿತ್ರದೊಂದಿಗೆ LIBERTY ಮತ್ತು IN GOD WE TRUST ಎಂಬ ಬರಹಗಳಿವೆ. ಹಿಂಭಾಗದಲ್ಲಿ 250 ಎಂದು ಕೆತ್ತಲಾದ ಗುರಾಣಿಯೊಂದಿಗೆ ಅಮೆರಿಕದ ಅಧ್ಯಕ್ಷೀಯ ಮುದ್ರೆಯ ಚಿತ್ರಣವಿದೆ. ಐತಿಹಾಸಿಕ ವರ್ಷಾಚರಣೆಯನ್ನು ಸಮೀಪಿಸುತ್ತಿರುವ ರಾಷ್ಟ್ರದ ಚೈತನ್ಯ, ಹೆಮ್ಮೆ ಮತ್ತು ಪರಂಪರೆಯನ್ನು ಈ ನಾಣ್ಯಗಳು ಬಿಂಬಿಸುತ್ತವೆ ಎಂದು ಯುಎಸ್ ಮಿಂಟ್ ಹೇಳಿದೆ.
ಸುಮಾರು 100 ವರ್ಷಗಳ ಇತಿಹಾಸದಲ್ಲಿ ಜೀವಂತವಾಗಿರುವ ವ್ಯಕ್ತಿಯೊಬ್ಬರು ಅಮೆರಿಕದ ನಾಣ್ಯದ ಮೇಲೆ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದ್ದು, ಇಂತಹ ಗೌರವಗಳನ್ನು ಹೆಚ್ಚಾಗಿ ಮೃತಪಟ್ಟ ಗಣ್ಯರಿಗೆ ಮಾತ್ರ ಕಾಯ್ದಿರಿಸಲಾಗಿರುವುದರಿಂದ ಇದು ತೀವ್ರ ಟೀಕೆಗೂ ಗುರಿಯಾಗಿದೆ.

ಇದೇನಿದು ಹೊಸ ಬೆಳವಣಿಗೆ..?

ಟ್ರಂಪ್ ಕಳೆದ ವರ್ಷ ಮರು ಆಯ್ಕೆಯಾದಾಗಿನಿಂದ ಕೆನಡಿ ಸೆಂಟರ್, ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್, ನ್ಯಾಷನಲ್ ಪಾರ್ಕ್ಸ್ ಪಾಸ್‌ಗಳು, ಸೀಮಿತ ಆವೃತ್ತಿಯ ಪಾಸ್‌ಪೋರ್ಟ್ ಮತ್ತು ಕಳೆದ ವರ್ಷ ಘೋಷಿಸಲಾದ $1m ಗೋಲ್ಡ್ ಕಾರ್ಡ್ ವೀಸಾ ಸೇರಿದಂತೆ ಹಲವು ಕಟ್ಟಡಗಳು ಮತ್ತು ವಸ್ತುಗಳ ಮೇಲೆ ತಮ್ಮ ಹೆಸರು ಅಥವಾ ಚಿತ್ರವನ್ನು ಹಾಕಲು ಆಡಳಿತವು ಕ್ರಮಗಳನ್ನು ತೆಗೆದುಕೊಂಡಿದೆ. ಟ್ರಂಪ್ ಆಡಳಿತವು ಈ ಕೆಲವು ಪ್ರಯತ್ನಗಳನ್ನು ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ 250ನೇ ವರ್ಷಾಚರಣೆಯ ಸಂಭ್ರಮಾಚರಣೆಗೆ ಜೋಡಿಸಿದೆ. 
ಜುಲೈ 15 ರಂದು, ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮೊದಲ ಬಾರಿಗೆ ಈ ನಾಣ್ಯವನ್ನು ಘೋಷಿಸಿದ್ದರು. ಈ ನಾಣ್ಯವು ಅಮೆರಿಕದ ಮೌಲ್ಯಗಳ ಶಕ್ತಿ ಮತ್ತು ಎಲ್ಲರಿಗೂ ಸ್ವಾತಂತ್ರ್ಯವನ್ನು ರಕ್ಷಿಸಲು ಬದ್ಧವಾಗಿರುವ ರಾಷ್ಟ್ರದ ಭರವಸೆಯನ್ನು ಆಚರಿಸುತ್ತದೆ ಎಂದು ಬೆಸೆಂಟ್ ಹೇಳಿದ್ದರು.
ಟ್ರಂಪ್ ಆಡಳಿತವು ಈ ಟ್ರಂಪ್-ಬ್ರಾಂಡೆಡ್ $1 ನಾಣ್ಯಕ್ಕೆ ಪೂರ್ವಾಪರ ಉದಾಹರಣೆಯಾಗಿ ಮತ್ತೊಂದು ವರ್ಷಾಚರಣೆಯ ನಾಣ್ಯವನ್ನು ಎತ್ತಿ ತೋರಿಸಿದೆ. 1926 ರಲ್ಲಿ, ದೇಶದ 150ನೇ ವರ್ಷಾಚರಣೆಗಾಗಿ, ಯುಎಸ್ ಮಿಂಟ್ ಜಾರ್ಜ್ ವಾಷಿಂಗ್ಟನ್ ಮತ್ತು ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರ ಪಕ್ಕಪಕ್ಕದ ಭಾವಚಿತ್ರಗಳನ್ನು ಹೊಂದಿರುವ ನಾಣ್ಯವನ್ನು ಮುದ್ರಿಸಿತ್ತು. ಆದರೆ 1926 ರ ನಾಣ್ಯವು ಸ್ಮರಣಾರ್ಥವಾಗಿತ್ತು ಮತ್ತು ಅದನ್ನು ನಾಣ್ಯವಾಗಿ ಚಲಾವಣೆ ಮಾಡಲು ಉದ್ದೇಶಿಸಿರಲಿಲ್ಲ ಎಂದು ಟೀಕಾಕಾರರು ಉಲ್ಲೇಖಿಸಿದ್ದಾರೆ. ಇದರ ನಡುವೆ ಮೇ ತಿಂಗಳಲ್ಲಿ, ಬೆಸೆಂಟ್ ಅವರು ಟ್ರಂಪ್ ಅವರ ಮುಖವನ್ನು ಹೊಂದಿರುವ ಹೊಸ $250 ನೋಟನ್ನು ಮುದ್ರಿಸಲು ಸಿದ್ಧತೆಗಳು ನಡೆಯುತ್ತಿವೆ ಹಾಗೂ ಹೊಸ ನೋಟಿಗಾಗಿ ಟ್ರಂಪ್ ಸರ್ಕಾರ ಕಾಂಗ್ರೆಸ್ (ಅಮೆರಿಕಾ ಸಂಸತ್ತು) ಅನುಮೋದನೆಯನ್ನು ಕೋರುತ್ತಿದೆ ಎಂದು ಹೇಳಿದ್ದರು.

ಹೊಸ ನಾಣ್ಯಗಳ ಬೆಲೆ ಎಷ್ಟು...?

ಈ $1 ನಾಣ್ಯದ ನೈಜ ಮೌಲ್ಯ ಒಂದು ಡಾಲರ್ ಆದರೂ, ಸಂಗ್ರಹಕರು ಇದನ್ನು ಪಡೆಯಲು 25 ನಾಣ್ಯಗಳ ರೋಲ್‌ಗೆ $61 ಹಾಗೂ 100 ನಾಣ್ಯಗಳ ಚೀಲಕ್ಕೆ $154.50 ತೆರಬೇಕಾಗುತ್ತದೆ. ಹೀಗೆ ಹೆಚ್ಚುವರಿ ಬೆಲೆಗೆ (ಪ್ರೀಮಿಯಂ ದರ) ಮಾರಾಟವಾಗುತ್ತಿದ್ದರೂ, ಇವು ಕೇವಲ ಪ್ರದರ್ಶನದ ವಸ್ತುವಲ್ಲ. ಬದಲಿಗೆ, ಸಾಮಾನ್ಯ $1 ನೋಟಿನಂತೆಯೇ ದೈನಂದಿನ ವ್ಯಾಪಾರ ಮತ್ತು ವಸ್ತುಗಳ ಖರೀದಿಗೆ ಇವುಗಳನ್ನು ಮುಕ್ತವಾಗಿ ಬಳಸಬಹುದು ಎಂದು ಯುಎಸ್ ಮಿಂಟ್ ಸ್ಪಷ್ಟಪಡಿಸಿದೆ.

ಇದು ಕಾನೂನುಬದ್ಧವೇ..?

ಇದರ ಕಾನೂನುಬದ್ಧತೆಯ ಬಗ್ಗೆ ನೋಡುವುದಾದರೆ, ಯುಎಸ್ ಫೆಡರಲ್ ಕಾನೂನು ಮೃತಪಟ್ಟ ವ್ಯಕ್ತಿಯ ಭಾವಚಿತ್ರ ಮಾತ್ರ ಯುನೈಟೆಡ್ ಸ್ಟೇಟ್ಸ್ ನಾಣ್ಯಗಳು ಮತ್ತು ಭದ್ರತೆಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳುತ್ತದೆ. 1866 ರಲ್ಲಿ ಖಜಾನೆ ಇಲಾಖೆಯ ಅಧಿಕಾರಿಯೊಬ್ಬರಾದ ಸ್ಪೆನ್ಸರ್ ಎಮ್ ಕ್ಲಾರ್ಕ್, ಐದು ಸೆಂಟ್ಸ್ ಮೌಲ್ಯದ ನೋಟಿನಲ್ಲಿ ತಮ್ಮದೇ ಮುಖವನ್ನು ಹಾಕಿಕೊಂಡ ನಂತರ, ಶಾಸಕರನ್ನು ಕೋಪಗೊಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಕಾನೂನನ್ನು ಅಂಗೀಕರಿಸಿತ್ತು. ಆದಾಗ್ಯೂ, ತಮ್ಮ ಮೊದಲ ಅವಧಿಯಲ್ಲಿ, ಟ್ರಂಪ್ ಅವರು ಸರ್ಕ್ಯುಲೇಟಿಂಗ್ ಕಲೆಕ್ಷನ್ ಕಾಯಿನ್ ರಿಡಿಸೈನ್ ಆಕ್ಟ್ 2020 (CCRA) ಎಂಬ ಶಾಸನಕ್ಕೆ ಸಹಿ ಹಾಕಿದ್ದರು. 
ಈ ಶಾಸನ ಯುನೈಟೆಡ್ ಸ್ಟೇಟ್ಸ್ ಸೆಮಿಕಿನ್‌ಸೆಂಟೆನ್ನಿಯಲ್ ಸಂಕೇತದ ವಿನ್ಯಾಸಗಳೊಂದಿಗೆ $1 ನಾಣ್ಯಗಳನ್ನು ಮುದ್ರಿಸುವ ಅಧಿಕಾರವನ್ನು ನೀಡಿತು. ಆ ಕಾನೂನು ಆ ನಾಣ್ಯಗಳ ಹಿಂಭಾಗದಲ್ಲಿ ಜೀವಂತ ಅಥವಾ ಮೃತ ಯಾವುದೇ ವ್ಯಕ್ತಿಯ ಭಾವಚಿತ್ರವನ್ನು ನಿಷೇಧಿಸುತ್ತದೆ. ಆದರೆ, ಹೊಸ $1 ನಾಣ್ಯದಲ್ಲಿ ಟ್ರಂಪ್ ಅವರ ಚಿತ್ರವು ಮುಂಭಾಗದಲ್ಲಿ (obverse) ಕಾಣಿಸಿಕೊಳ್ಳುವುದರಿಂದ, ಇದು ಕಾನೂನಿಗೆ ಬದ್ಧವಾಗಿದೆ ಎನ್ನಲಾಗಿದೆ(ಏಜೆನ್ಸೀಸ್​).